ಕೇಂದ್ರ ಬಜೆಟ್ ಈ ಸಲ ಭಾನುವಾರ ಮಂಡನೆ

Union Budget
Union Budget
Published on
ನವದೆಹಲಿ: ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಈ ಸಲದ ಬಜೆಟ್ ಅಧಿವೇಶನದ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026ರ ಫೆ.1ರಂದು ಬಜೆಟ್ ಮಂಡಿಸಲಿದ್ದಾರೆ. 
ಫೆ. 1 ಭಾನುವಾರವಾಗಿದ್ದು, ಅಂದು ಬಜೆಟ್ ಮಂಡಿಸಲಾಗುತ್ತದೆಯೋ ಅಥವಾ ಬೇರೆ ದಿನಾಂಕ ನಿಗದಿ ಮಾಡಲಾಗುತ್ತದೆಯೋ ಎಂಬ ಅನಿಶ್ಚಿತತೆಗೆ ಸಂಪುಟ ಸಮಿತಿ ತೆರೆ ಎಳೆದಿದೆ. ಮೂಲಗಳ ಪ್ರಕಾರ, ಬಜೆಟ್ ಅಧಿವೇಶನ ಜ. 28ರಂದು ರಾಷ್ಟ್ರಪತಿ ಭಾಷಣದೊಂದಿಗೆ ಆರಂಭವಾಗಲಿದೆ. ಜ. 29ರಂದು ಆರ್ಥಿಕ ಸಮೀಕ್ಷೆ ಮಂಡನೆ ಆಗಲಿದೆ. 
ಫೆ. 1 ಭಾನುವಾರವಾಗಿದ್ದರೂ ಸಂಸತ್ತು ಅಂದು ವಿಶೇಷವಾಗಿ ಕಾರ್ಯನಿರ್ವಹಿಸಲಿದೆ. ಈ ಬಜೆಟ್​ನಲ್ಲಿ ಆದಾಯ ತೆರಿಗೆ ವಿನಾಯಿತಿ, ಕೃಷಿ ಮತ್ತು ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ. 2017ರಿಂದಲೂ ಫೆ. 1ರಂದೇ ಕೇಂದ್ರ ಬಜೆಟ್ ಮಂಡಿಸಲಾಗುತ್ತಿದೆ. ಹೊಸ ಹಣಕಾಸು ವರ್ಷ (ಏಪ್ರಿಲ್ 1) ಆರಂಭವಾಗುವ ಮೊದಲೇ ಎಲ್ಲ ಆರ್ಥಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಮತ್ತು ಯೋಜನೆಗಳ ಜಾರಿಗೆ ಅನುಕೂಲ ಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ.

9ನೇ ಆಯವ್ಯಯ ನಿರ್ಮಲಾ ದಾಖಲೆ

ಈ ಸಲದ ಬಜೆಟ್ ಮಂಡನೆಯೊಂದಿಗೆ ನಿರ್ಮಲಾ ಸೀತಾ ರಾಮನ್ ಸತತ 9 ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ದಾಖಲೆಯನ್ನೂ ಬರೆಯಲಿದ್ದಾರೆ. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಒಟ್ಟು 10 ಬಜೆಟ್ ಮಂಡಿಸಿದ್ದರು. ಆದರೆ ಅದು ಸತತವಾಗಿ ಅಲ್ಲ.

ಇದು ಎರಡನೇ ಬಾರಿ

ಭಾನುವಾರ ಬಜೆಟ್ ಮಂಡನೆಯಾಗುತ್ತಿರುವುದು ದೇಶದ ಸಂಸದೀಯ ಇತಿಹಾಸದಲ್ಲಿ ಇದು 2ನೇ ಬಾರಿ. ಈ ಮೊದಲು 1999ರಲ್ಲಿ ಆಗಿನ ವಿತ್ತ ಸಚಿವ ಯಶವಂತ್ ಸಿನ್ಹಾ ಫೆ. 28ರಂದು ಬಜೆಟ್ ಮಂಡಿಸಿದ್ದರು. ಅಂದು ಭಾನುವಾರ ವಾಗಿತ್ತು. ಅಂದಿನಿಂದಲೇ ಬಜೆಟ್ ಮಂಡನೆಯ ಸಮಯವನ್ನು ಬದಲಿಸಲಾಯಿತು. ಅದುವರೆಗೆ ಪ್ರತಿ ಸಲವೂ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಅದನ್ನು ಬೆಳಗ್ಗೆ 11ಕ್ಕೆ ನಿಗದಿಪಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net