ಸಾಮಾನ್ಯರೇ ಸೆಲೆಬ್ರಿಟಿಗಳು!

ಸಾಮಾನ್ಯರೇ ಸೆಲೆಬ್ರಿಟಿಗಳು!
ಸಾಮಾನ್ಯರೇ ಸೆಲೆಬ್ರಿಟಿಗಳು!
Published on
ಸಾಮಾಜಿಕ ಮಾಧ್ಯಮ ಈಗ ಬರೀ ಮನರಂಜನೆಯ ತಾಣವಲ್ಲ. ಮಾಹಿತಿ, ಶಿಕ್ಷಣದ ಸಶಕ್ತ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇನ್‌ಫ್ಲುಯೆನ್ಸರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 2024ರ ಲೋಕಸಭೆ ಚುನಾವಣೆಯ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೇಶದ ಖ್ಯಾತ ಇನ್‌ಫ್ಲುಯೆನ್ಸರ್‌ಗಳೊಂದಿಗೆ ವಿಶೇಷ ಸಂವಾದ ನಡೆಸಿ, ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಪ್ರಶಂಸಿಸಿದ್ದರು. ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯೂ ಆಗಿದೆ. ಹಿಂದೆ ಹಳ್ಳಿಯ ಯುವಕ-ಯುವತಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಟಿವಿ ರಿಯಾಲಿಟಿ ಶೋಗಳನ್ನೋ ಅಥವಾ ಸಿನಿಮಾಗಳ ಅವಕಾಶವನ್ನೋ ಕಾಯಬೇಕಿತ್ತು. ಆದರೆ ಇಂದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಆ ಕೊರತೆಯನ್ನು ನಿವಾರಿಸಿದ್ದು, ಸಾಮಾನ್ಯರೇ ಸೆಲೆಬ್ರಿಟಿಗಳಾಗಿ ರೂಪುಗೊಳ್ಳುತ್ತಿರುವ ಮತ್ತು ಆರ್ಥಿಕ ಆದಾಯದ ಮಾರ್ಗವನ್ನೂ ಕಂಡುಕೊಂಡಿರುವ ಬಗೆ ಅನನ್ಯ.
ಸಾಮಾಜಿಕ ಮಾಧ್ಯಮವು ಇಂದಿನ ಯುವ ಪೀಳಿಗೆಗೆ ಕೇವಲ ಸ್ಕ್ರಾಲ್ ಮಾಡುವ ತಾಣವಲ್ಲ, ಅದು ಅವರ ಭವಿಷ್ಯವನ್ನು ಬಿಲ್ಡ್ ಮಾಡುವ ಪ್ರಬಲ ಅಸ್ತ್ರವಾಗಿದೆ. ಪರಿಸರ ಸಂರಕ್ಷಣೆ, ಆರೋಗ್ಯ, ಮತದಾನದ ಮಹತ್ವ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಇನ್‌ಫ್ಲುಯೆನ್ಸರ್‌ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಗಮನಾರ್ಹವೆಂದರೆ, ಈಗ ಕಂಟೆಂಟ್ ಕ್ರಿಯೇಟರ್‌ಗಳು ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ ಹಾಗೂ ಸಣ್ಣ ಪಟ್ಟಣಗಳ ಪ್ರತಿಭೆಗಳು ಉತ್ತಮ ಕಂಟೆಂಟ್ ರೂಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಳ್ಳಿಗಳ ವಿಶಿಷ್ಟ ಸೊಗಡು, ದೊಡ್ಡಾಟ, ಯಕ್ಷಗಾನ, ಜಾನಪದ ಗೀತೆಗಳು ಮತ್ತು ಗ್ರಾಮೀಣ ಕ್ರೀಡೆಗಳು ಇಂದು ರೀಲ್ಸ್, ವಿಡಿಯೋಗಳ ಮೂಲಕ ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ತಲುಪುತ್ತಿವೆ. ಉತ್ತರ ಕರ್ನಾಟಕದ ಜನಪದ ಶೈಲಿಯ ಸಂಭಾಷಣೆಗಳು, ಕರಾವಳಿಯ ಕಲೆಗಳು ಇಂದು ಜಾಗತಿಕ ಮಟ್ಟದಲ್ಲಿ ವೈರಲ್ ಆಗುತ್ತಿವೆ. ಹೊಲದಲ್ಲಿ ಕೆಲಸ ಮಾಡುವ ರೈತರು, ಗೃಹಿಣಿಯರು, ಶಾಲಾ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯ ಕಂಟೆಂಟ್ (ಉದಾಹರಣೆಗೆ: ಹಳ್ಳಿ ಅಡುಗೆ, ಕೃಷಿ ಪದ್ಧತಿಗಳು, ಜಾನಪದ ನೃತ್ಯ) ಮೂಲಕ ಲಕ್ಷಾಂತರ ಫಾಲೋವರ್ಸ್ ಗಳಿಸುತ್ತಿದ್ದಾರೆ.
ಕೌಶಲ ಅಭಿವೃದ್ಧಿ: ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಳ ಮೂಲಕ ಕೋಡಿಂಗ್, ಅಡುಗೆ, ಕರಕುಶಲ ಕಲೆ, ಭಾಷೆ ಕಲಿಕೆ, ಮತ್ತು ಷೇರು ಮಾರುಕಟ್ಟೆಯ ಜ್ಞಾನವನ್ನು ಉಚಿತವಾಗಿ ನೀಡುವ ಚಾನಲ್‌ಗಳು ಪ್ರಾದೇಶಿಕ ಭಾಷೆಗಳಲ್ಲೂ ಜನಪ್ರಿಯವಾಗಿವೆ.
ಸರಳೀಕೃತ ಶಿಕ್ಷಣ: ಹಿಂದೆ ಜ್ಞಾನ ಅಥವಾ ಮಾಹಿತಿ ಬೇಕೆಂದರೆ ಪುಸ್ತಕಗಳು, ಶಾಲೆಗಳು ಅಥವಾ ತಜ್ಞರನ್ನು ಹುಡುಕಬೇಕಿತ್ತು. ಆದರೆ, ಇಂದು ಸಾಮಾಜಿಕ ಮಾಧ್ಯಮಗಳು ಮುಕ್ತ ವಿಶ್ವವಿದ್ಯಾಲಯಗಳಾಗಿ ಬದಲಾಗಿವೆ. ಕಠಿಣವಾದ ವಿಜ್ಞಾನದ ತತ್ವಗಳು ಅಥವಾ ಗಣಿತದ ಸೂತ್ರಗಳನ್ನು ಇನ್‌ಫ್ಲುಯೆನ್ಸರ್‌ಗಳು ಆಕರ್ಷಕ ಅನಿಮೇಷನ್ ಮತ್ತು ರೀಲ್ಸ್ ಮೂಲಕ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುತ್ತಿದ್ದಾರೆ.
ಅವಕಾಶಗಳ ಮುಕ್ತ ದ್ವಾರ: ಹಿಂದೆ ಸಿನಿಮಾ ಅಥವಾ ಟಿವಿ ರಿಯಾಲಿಟಿ ಶೋಗಳಲ್ಲಿ ಅವಕಾಶ ಸಿಗಬೇಕಾದರೆ ಗಾಡ್‌ಫಾದರ್ ಇರಬೇಕಿತ್ತು ಅಥವಾ ಮಹಾನಗರಗಳಿಗೆ ಅಲೆಯಬೇಕಿತ್ತು. ಆದರೆ, ಪ್ರಸಕ್ತ ಕಾಲಮಾನದಲ್ಲಿ ಹಳ್ಳಿಯ ಮೂಲೆಯಲ್ಲೇ ಕುಳಿತು ಮೊಬೈಲ್ ಫೋನ್ ಕ್ಯಾಮರಾದ ಮೂಲಕ ತಮ್ಮ ನೃತ್ಯ, ಗಾಯನ, ಹಾಸ್ಯ ಪ್ರದರ್ಶಿಸಿ ವೀಕ್ಷಕರನ್ನು ಗಳಿಸಬಹುದು. ರೀಲ್ಸ್ ಮತ್ತು ಶಾರ್ಟ್ಸ್ ಮೂಲಕ ಸೃಷ್ಟಿಯಾಗುತ್ತಿರುವ ಲೋಕಲ್ ಸೆಲೆಬ್ರಿಟಿಗಳು ಇಂದು ದೊಡ್ಡ ಸ್ಟಾರ್‌ಗಳಷ್ಟೇ ಪ್ರಭಾವಶಾಲಿಯಾಗಿದ್ದಾರೆ. ಜನಸಾಮಾನ್ಯರು ಇವರನ್ನು ತಮ್ಮಲ್ಲಿ ಒಬ್ಬರೆಂದು ಭಾವಿಸುವುದರಿಂದ ಇವರ ಜನಪ್ರಿಯತೆ ಹೆಚ್ಚು ಸಹಜವಾಗಿರುತ್ತದೆ.

ಬದಲಾವಣೆಯ ಶಕ್ತಿ

ಪ್ರಧಾನಿ ನರೇಂದ್ರ ಮೋದಿ ಅವರು 2024ರ ಲೋಕಸಭೆ ಚುನಾವಣೆಯ ಮುನ್ನ ಇನ್‌ಫ್ಲುಯೆನ್ಸರ್‌ಗಳ ಜೊತೆ ನಡೆಸಿದ ಸಂವಾದವು ಸಾಮಾಜಿಕ ಮಾಧ್ಯಮದ ರಾಜಕೀಯ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ರ್ಯಾಲಿಗಳಿಗಿಂತ ಡಿಜಿಟಲ್ ಕ್ರಿಯೇಟರ್‌ಗಳ ಮೂಲಕ ಸರ್ಕಾರದ ಯೋಜನೆಗಳನ್ನು ಅಥವಾ ರಾಜಕೀಯ ಸಿದ್ಧಾಂತಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಸುಲಭ ಎಂದು ರಾಜಕೀಯ ಪಕ್ಷಗಳು ಅರಿತುಕೊಂಡಿವೆ.

ಸವಾಲುಗಳು

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳ ಹರಡುವಿಕೆ, ಸೈಬರ್ ಬುಲ್ಲಿಂಗ್, ಮತ್ತು ವ್ಯಸನದಂತಹ ನಕಾರಾತ್ಮಕ ಮುಖಗಳೂ ಇವೆ. ಆದ್ದರಿಂದ ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ವೀಕ್ಷಕರು ಜವಾಬ್ದಾರಿಯುತವಾಗಿ ವರ್ತಿಸುವುದು ಇಂದಿನ ಅಗತ್ಯವಾಗಿದೆ.

ಇಂಟರ್ನೆಟ್ ಜಗತ್ತಿನಲ್ಲಿ ಸಂಚಲನ ತಂದವರು

ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂಟರ್ನೆಟ್ ಜಗತ್ತಿನಲ್ಲಿ ವಿಶಿಷ್ಟ ಛಾಪು ಬೀರಿರುವ ಕೆಲವು ಪ್ರಮುಖರ ವಿವರ ಇಲ್ಲಿದೆ.
ಭುವನ್ ಬಾಮ್
ಹಿನ್ನೆಲೆ: ದೆಹಲಿಯ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಆರಂಭದಲ್ಲಿ ರೆಸ್ಟೋರೆಂಟ್‌ಗಳಲ್ಲಿ ಕೇವಲ ಕೆಲವು ನೂರು ರೂಪಾಯಿಗಳಿಗಾಗಿ ಹಾಡುತ್ತಿದ್ದರು.
ಕಂಟೆಂಟ್: ಒಬ್ಬರೇ ಫೋನಿನ ಫ್ರಂಟ್ ಕ್ಯಾಮರಾ ಹಿಡಿದು, ತಮ್ಮದೇ ಕುಟುಂಬದ ವಿಭಿನ್ನ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಹಾಸ್ಯ ವಿಡಿಯೊಗಳನ್ನು ಮಾಡಲು ಶುರು ಮಾಡಿದರು.
ವಿಶೇಷತೆ: ಭಾರತದಲ್ಲಿ 1 ಕೋಟಿ ಚಂದಾದಾರರನ್ನು ದಾಟಿದ ಮೊದಲ ವೈಯಕ್ತಿಕ ಯೂಟ್ಯೂಬರ್ ಇವರು. ಪ್ರಸ್ತುತ 2.65 ಕೋಟಿ ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಇಂದು ಭುವನ್ ನಟರಾಗಿ, ವೆಬ್ ಸೀರೀಸ್‌ಗಳ ನಿರ್ಮಾಪಕರಾಗಿ ಬೆಳೆದಿದ್ದಾರೆ.
ಅಜಯ್ ನಗರ್
ಹಿನ್ನೆಲೆ: ಅಜಯ್ ನಗರ್ ಫರಿದಾಬಾದ್‌ನ 27 ವರ್ಷದ ಸಾಮಾನ್ಯ ಯುವಕ. ಓದಿನಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದೆ, 12ನೇ ತರಗತಿ ಪರೀಕ್ಷೆಯ ಸಮಯದಲ್ಲೇ ಯೂಟ್ಯೂಬ್‌ಗಾಗಿ ಓದನ್ನು ಬದಿಗಿಟ್ಟಿದ್ದರು.
ಕಂಟೆಂಟ್: ಕ್ಯಾರಿಮಿನಾಟಿ ಯೂಟ್ಯೂಬ್ ಚಾನಲ್ ಮೂಲಕ ಗೇಮಿಂಗ್ ಮತ್ತು ರೋಸ್ಟಿಂಗ್ ವಿಡಿಯೋಗಳು.
ವಿಶೇಷತೆ: ಪ್ರಸ್ತುತ ಏಷ್ಯಾದಲ್ಲೇ ಅತಿ ಹೆಚ್ಚು ಸಬ್‌ಸ್ಕ್ರೈಬರ್ಸ್ ಹೊಂದಿರುವ (4.57 ಕೋಟಿ) ವೈಯಕ್ತಿಕ ಯೂಟ್ಯೂಬರ್. ಇವರು ಪ್ರಸ್ತುತಪಡಿಸುವ ನವಿರಾದ ಹಾಸ್ಯ ಮತ್ತು ವಿಶಿಷ್ಟ ಶೈಲಿ ಇಡೀ ದೇಶದ ಯುವಪೀಳಿಗೆಯನ್ನು ಸೆಳೆದಿದೆ.

ಸಂದೀಪ್ ಮಹೇಶ್ವರಿ

ಹಿನ್ನೆಲೆ: ಮಧ್ಯಮ ವರ್ಗದ ಕುಟುಂಬ. ಇವರ ತಂದೆಯ ಉದ್ಯಮ ನಷ್ಟದಲ್ಲಿದ್ದಾಗ ಇಡೀ ಕುಟುಂಬದ ಜವಾಬ್ದಾರಿ ಇವರ ಮೇಲೆ ಬಿತ್ತು. ಮಾಡೆಲಿಂಗ್, ಫೋಟೋಗ್ರಫಿ ಅಂತ ಸಾಕಷ್ಟು ಕಷ್ಟಪಟ್ಟಿದ್ದಾರೆ.
ಕಂಟೆಂಟ್: ಪ್ರೇರಣಾತ್ಮಕ ಉಪನ್ಯಾಸಗಳು.
ವಿಶೇಷತೆ: ಯೂಟ್ಯೂಬ್‌ನಲ್ಲಿ 2.83 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಯುವಕರಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದೇ ಇವರ ಮುಖ್ಯ ಉದ್ದೇಶ.
ರಣವೀರ್ ಅಲ್ಲಾಬಾಡಿಯಾ
ಹಿನ್ನೆಲೆ: ಮುಂಬೈನವರಾದ ಇವರು ಇಂಜಿನಿಯರಿಂಗ್ ಮುಗಿಸಿ, ಫಿಟ್ನೆಸ್ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ತೂಕ ಇಳಿಸುವ ಮತ್ತು ಆರೋಗ್ಯ ರಕ್ಷಣೆ ಕುರಿತು ವಿಡಿಯೋ ಮಾಡುತ್ತಿದ್ದರು.
ಕಂಟೆಂಟ್: ಪಾಡ್‌ಕಾಸ್ಟ್‌ಗಳು.
ವಿಶೇಷತೆ: ದೇಶದ ಯಶಸ್ವಿ ಪಾಡ್‌ಕಾಸ್ಟರ್ ಆಗಿ ಹೊರಹೊಮ್ಮಿದ್ದು, ಯೂಟ್ಯೂಬ್‌ನಲ್ಲಿ 1.12 ಕೋಟಿ ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಅಧ್ಯಾತ್ಮ, ಇತಿಹಾಸ, ಬಾಹ್ಯಾಕಾಶ, ರಾಜಕೀಯ ಮತ್ತು ಸಿನಿಮಾ ರಂಗದ ಗಣ್ಯರನ್ನು ಸಂದರ್ಶನ ಮಾಡಿ ಮಾಹಿತಿಯುಕ್ತ ಕಂಟೆಂಟ್ ನೀಡುತ್ತಿದ್ದಾರೆ.

ಸ್ವಾವಲಂಬನೆಗೆ ದಾರಿ

ಬ್ರಾಂಡ್ ಪ್ರಾಯೋಜಕತ್ವ ಮತ್ತು ಸಹಯೋಗ: ಇದು ಇನ್‌ಫ್ಲುಯೆನ್ಸರ್‌ಗಳಿಗೆ ಸಿಗುವ ಆದಾಯದ ದೊಡ್ಡ ಮೂಲವಾಗಿದೆ. ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಇನ್‌ಫ್ಲುಯೆನ್ಸರ್‌ಗಳಿಗೆ ಹಣ ನೀಡುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಸ್ಥಳೀಯ ಸೀರೆ ಅಂಗಡಿಗಳು, ರೆಸ್ಟೋರೆಂಟ್‌ಗಳು, ಜ್ಯುವೆಲ್ಲರಿ ಶೋರೂಮ್‌ಗಳು ಮತ್ತು ಆ್ಯಪ್‌ಗಳನ್ನು ಪ್ರಮೋಟ್ ಮಾಡಲು ಪ್ರಾದೇಶಿಕ ಇನ್‌ಫ್ಲುಯೆನ್ಸರ್‌ಗಳಿಗೆ ಭಾರಿ ಬೇಡಿಕೆ ಇದೆ.
ಡೆಡಿಕೇಟೆಡ್ ವಿಡಿಯೋಗಳು/ಪೋಸ್ಟ್‌ಗಳು: ಒಂದು ಇಡೀ ವಿಡಿಯೋ ಅಥವಾ ರೀಲ್ ಅನ್ನು ಸಂಪೂರ್ಣವಾಗಿ ನಿರ್ದಿಷ್ಟ ಬ್ರಾಂಡ್ ಬಗ್ಗೆಯೇ ಮಾಡುವುದು.
ಇಂಟಿಗ್ರೇಟೆಡ್ ಪ್ರಚಾರ: ತಮ್ಮ ದೈನಂದಿನ ವ್ಲಾಗ್ ಅಥವಾ ಕಂಟೆಂಟ್ ಮಧ್ಯದಲ್ಲಿ 30ರಿಂದ 60 ಸೆಕೆಂಡುಗಳ ಕಾಲ ಬ್ರಾಂಡ್ ಬಗ್ಗೆ ಮಾತನಾಡುವುದು.
ಪ್ಲಾಟ್‌ಫಾರ್ಮ್ ಆ್ಯಡ್ ರೆವೆನ್ಯೂ: ಸಾಮಾಜಿಕ ಮಾಧ್ಯಮ ಸಂಸ್ಥೆಗಳೇ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ವೀಕ್ಷಣೆ ಆಧಾರದ ಮೇಲೆ ಕ್ರಿಯೇಟರ್‌ಗಳಿಗೆ ಹಣ ನೀಡುತ್ತವೆ. ಯೂಟ್ಯೂಬ್ ವಿಡಿಯೋಗಳ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಬರುವ ಜಾಹೀರಾತುಗಳಿಂದ ಬರುವ ಆದಾಯದಲ್ಲಿ ಶೇ. 55 ರಷ್ಟನ್ನು ಕ್ರಿಯೇಟರ್‌ಗಳಿಗೆ ನೀಡಲಾಗುತ್ತದೆ. ಇದು ದೀರ್ಘಾವಧಿಯ ಮತ್ತು ನಂಬಿಕಸ್ಥ ಆದಾಯ ಮೂಲವಾಗಿದೆ.
ಫೇಸ್‌ಬುಕ್ ಇನ್-ಸ್ಟ್ರೀಮ್ ಆ್ಯಡ್ಸ್: ಫೇಸ್‌ಬುಕ್ ಪೇಜ್‌ಗಳಲ್ಲಿ ಅಪ್‌ಲೋಡ್ ಮಾಡುವ ದೊಡ್ಡ ವಿಡಿಯೋಗಳಿಗೂ ಇದೇ ರೀತಿ ಜಾಹೀರಾತು ಆದಾಯ ಸಿಗುತ್ತದೆ.
ಅಫಿಲಿಯೇಟ್ ಮಾರ್ಕೆಟಿಂಗ್: ಕ್ರಿಯೇಟರ್‌ಗಳು ತಾವು ಬಳಸುವ ಅಥವಾ ಶಿಫಾರಸು ಮಾಡುವ ಉತ್ಪನ್ನಗಳ ಲಿಂಕ್‌ಗಳನ್ನು ತಮ್ಮ ವಿಡಿಯೋ ಡಿಸ್ಕ್ರಿಪ್ಷನ್ ಅಥವಾ ಇನ್‌ಸ್ಟಾಗ್ರಾಮ್ ಬಯೋದಲ್ಲಿ ನೀಡುತ್ತಾರೆ. ವೀಕ್ಷಕರು ಆ ಲಿಂಕ್ ಬಳಸಿ ವಸ್ತುಗಳನ್ನು ಖರೀದಿಸಿದಾಗ, ಕ್ರಿಯೇಟರ್‌ಗೆ ಒಟ್ಟು ಮಾರಾಟದ ಮೊತ್ತದಲ್ಲಿ ನಿರ್ದಿಷ್ಟ ಶೇಕಡವಾರು ಕಮಿಷನ್ ಸಿಗುತ್ತದೆ. ಅಮೆಜಾನ್ ಅಫಿಲಿಯೇಟ್ ಮತ್ತು ಫ್ಲಿಪ್‌ಕಾರ್ಟ್ ಅಫಿಲಿಯೇಟ್ ಗ್ರೂಪ್‌ಗಳು ಇದರಲ್ಲಿ ಪ್ರಮುಖವಾಗಿವೆ. ಗ್ಯಾಜೆಟ್‌ಗಳು, ಬ್ಯೂಟಿ ಪ್ರಾಡಕ್ಟ್‌ಗಳು ಮತ್ತು ಬಟ್ಟೆಗಳನ್ನು ರಿವ್ಯೂ ಮಾಡುವವರಿಗೆ ಇದು ಹೆಚ್ಚು ಲಾಭದಾಯಕ.
ಯೂಟ್ಯೂಬ್ ಚಂದಾದಾರಿಕೆ: ಅಭಿಮಾನಿಗಳು ಮಾಸಿಕ ಚಂದಾದಾರಿಕೆ ಪಾವತಿಸಿ ವಿಶೇಷ ಬ್ಯಾಡ್ಜ್‌ಗಳು ಅಥವಾ ಎಕ್ಸ್‌ಕ್ಲೂಸಿವ್ ವಿಡಿಯೋಗಳನ್ನು ವೀಕ್ಷಿಸಬಹುದು.
ಕಾರ್ಯಾಗಾರಗಳು: ಶಿಕ್ಷಣ, ಆರ್ಥಿಕತೆ ಅಥವಾ ತಾಂತ್ರಿಕ ಜ್ಞಾನ ನೀಡುವ ಕ್ರಿಯೇಟರ್‌ಗಳು ಕಾರ್ಯಾಗಾರ ಆಯೋಜಿಸುವ ಮೂಲಕ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಅಲ್ಲದೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಫೋಟೋಗ್ರಫಿ, ವಿಡಿಯೋ ಎಡಿಟಿಂಗ್ ಮುಂತಾದ ವಿಷಯಗಳ ಬಗ್ಗೆ ಆನ್-ಲೈನ್ ಕೋರ್ಸ್‌ಗಳಿಗೆ ಶುಲ್ಕ ವಿಧಿಸಿ, ಆದಾಯ ಪಡೆದುಕೊಳ್ಳುತ್ತಿದ್ದಾರೆ.
ಒಬ್ಬ ಸಾಧಾರಣ ಮಟ್ಟದ (ಉದಾಹರಣೆಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್ ಇರುವ) ಯೂಟ್ಯೂಬ್ ಕ್ರಿಯೇಟರ್ ಸರಿಯಾದ ರೀತಿಯಲ್ಲಿ ಈ ಎಲ್ಲ ಮೂಲಗಳನ್ನು ಬಳಸಿಕೊಂಡರೆ, ತಿಂಗಳಿಗೆ ಕನಿಷ್ಠ ₹ 50,000 ದಿಂದ ಹಿಡಿದು ₹ 2,00,000 ವರೆಗೂ (ಅವರ ಕಂಟೆಂಟ್ ಮತ್ತು ವೀಕ್ಷಕರ ವರ್ಗದ ಆಧಾರದ ಮೇಲೆ) ಆದಾಯ ಗಳಿಸಲು ಸಾಧ್ಯವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net