ಕೇಜ್ರಿವಾಲ್ ಮುಕ್ತರಾದ್ರೂ ಬೆನ್ನ ಬಿಡದ ಬಿಜೆಪಿ..ಪುರಾವೆ ಇಲ್ಲದಿದ್ದರೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು ಹೇಗೆ..? ಎಂದ ಕೇಸರಿ ನಾಯಕರು! | Arvind Kejriwal Case

Arvind Kejriwal Case |  ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ
Arvind Kejriwal Case | ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ
Published on
ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal Case), ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಉಳಿದ ಆರೋಪಿಗಳನ್ನು ಇಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದ್ದು ಇದಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದರು.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ, ಸಾಕ್ಷಾಧಾರಗಳ ಕೊರತೆಯಿಂದಾಗಿ ಕೆಳ ನ್ಯಾಯಾಲಯ ಕೇಜ್ರಿವಾಲ್​ರನ್ನು ಖುಲಾಸೆಗೊಳಿಸಿದ್ದು, ಇದು ತಾಂತ್ರಿಕ ಸಮಸ್ಯೆಯಾಗಿದೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ಲೀನ್ ಚಿಟ್ ಸಿಕ್ಕಿದೆ, ಇದರಿಂದಾಗಿ ಹಗರಣ ನಡೆದಿಲ್ಲ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕ ಪಕ್ಷವು ಸಂಪೂರ್ಣಚಾದ ಪ್ರತಿಕ್ರಿಯೆಯನ್ನು ನೀಡುತ್ತದೆ, ನ್ಯಾಯಾಲಯವು ಸಾಕಷ್ಟು ಪುರಾವೆಗಳನ್ನು ಕಂಡುಕೊಂಡಿಲ್ಲವಾದರೂ, ಈ ವಿಷಯವು ಸಿಬಿಐ ವ್ಯಾಪ್ತಿಯಲ್ಲಿದೆ ಎಂದು ತ್ರಿವೇದಿ ತಿಳಿಸಿದರು. ತನಿಖೆಯ ಸಮಯದಲ್ಲಿ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ನಾಶಪಡಿಸುವಂತಹ ವಿಷಯಗಳ ಬಗ್ಗೆ ಸಿಬಿಐ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿರುವ ತ್ರಿವೇದಿ, ತೀರ್ಪಿನ ಎಲ್ಲಾ ಸಂಗತಿಗಳು ಮತ್ತು ವಿವರಗಳನ್ನು ಪರಿಶೀಲಿಸಿ, ನಮ್ಮ ಪಕ್ಷವು ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಅಥವಾ ಕೇಜ್ರಿವಾಲ್ ಅವರ ಮಿತ್ರಪಕ್ಷಗಳು ತೀರ್ಪಿನ ಬಗ್ಗೆ ಸಂತೋಷವಾಗಿದ್ದಾರೆಯೇ ಅಥವಾ ಚಿಂತಿತರಾಗಿದ್ದಾರೆಯೇ ಎಂಬುದು ಚರ್ಚೆಯ ವಿಷಯವಾಗಿದ್ದು, ಯಾವುದೇ ಪುರಾವೆಗಳಿಲ್ಲದಿದ್ದರೆ ನ್ಯಾಯಾಲಯವು ಆರೋಪಗಳನ್ನು ರೂಪಿಸಲು ಹೇಗೆ ಅನುಮತಿ ನೀಡಿತು? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದರು. ನಾವು 75 ವರ್ಷಗಳಿಂದ ಇದ್ದೇವೆ ಮತ್ತು ಯಾರೊಂದಿಗೂ ಕೈಜೋಡಿಸಲಿಲ್ಲ, ಆದರೂ ಅರವಿಂದ್ ಕೇಜ್ರಿವಾಲ್ 75 ದಿನಗಳಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದರು ಎಂದು ಹೇಳುತ್ತಾ ತ್ರಿವೇದಿ ಹಿಂದಿನ ರಾಜಕೀಯ ಮೈತ್ರಿಗಳನ್ನು ಉಲ್ಲೇಖಿಸಿದರು.

ನ್ಯಾಯಾಲಯ ಹೇಳಿದ್ದೇನು..?

ಶುಕ್ರವಾರ (ಫೆಬ್ರವರಿ 27) ತೀರ್ಪು ಪ್ರಕಟಿಸಿದ ದೆಹಲಿ ವಿಶೇಷ ನ್ಯಾಯಾಲಯವು, ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಸಾಬೀತುಪಡಿಸಲು ಅಗತ್ಯವಿರುವ ಭದ್ರವಾದ ಸಾಕ್ಷ್ಯಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದೆ. ಹಣದ ವರ್ಗಾವಣೆ ಅಥವಾ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲು ಯಾವುದೇ ನೇರ ಪುರಾವೆಗಳಿಲ್ಲ. ಕೇವಲ ಊಹಾಪೋಹಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net