Indian Weddings: ಜಾತಿ ಬೇಕು ಇಲ್ಲವೇ 80 ಲಕ್ಷ ಸಂಬಳ ಬೇಕು: ವೈರಲ್​ ಆದ ಕನ್ಯೆಯ ವಿಚಿತ್ರ ಕಂಡೀಷನ್‌!

Indian Weddings
Indian Weddings
Published on
ಬೆಂಗಳೂರು: ಹತ್ತಿರದ ಸಂಬಂಧಗಳು (Indian Weddings), ಮೌಲ್ಯಗಳು ಮತ್ತು ನಂಬಿಕೆಗಳ ಮೇಲೆ ನಿಲ್ಲಬೇಕಾದ ವೈವಾಹಿಕ ಜೀವನವು 2026ರ ಆಧುನಿಕ ಕಾಲಘಟ್ಟದಲ್ಲೂ ಕೇವಲ ಒಂದು 'ವ್ಯಾಪಾರ' ಅಥವಾ 'ವಹಿವಾಟು' ಆಗಿ ಮಾರ್ಪಡುತ್ತಿದೆಯೇ? ಇಂತಹದೊಂದು ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಇತ್ತೀಚಿನ ವೈರಲ್ ಪೋಸ್ಟ್ ಒಂದು.
ನಗರದ ಸುಶಿಕ್ಷಿತ ಕುಟುಂಬಗಳು ತಮ್ಮನ್ನು ತಾವು ಎಷ್ಟೇ ಪ್ರಗತಿಪರ ಎಂದು ಕರೆದುಕೊಂಡರೂ, ಮದುವೆಯ ವಿಷಯ ಬಂದಾಗ ಮಾತ್ರ 'ಜಾತಿ' ಅಥವಾ 'ಬಾಚುವ ಹಣ'ದ ಮಾನದಂಡಗಳನ್ನು ಮೀರುತ್ತಿಲ್ಲ ಎಂಬ ಕಹಿ ಸತ್ಯವೊಂದು ಈಗ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ

'ದಿ ಡೇಟ್ ಕ್ರೂ' (The Date Crew) ಎಂಬ ಮ್ಯಾಚ್ ಮೇಕಿಂಗ್ ಸಂಸ್ಥೆಯ ಸ್ಥಾಪಕಿ ಓಂದ್ರಿಲಾ ಕಪೂರ್ ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿರುವ ಒಂದು ನೈಜ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಅವರ ಬಳಿ ಬಂದ 32 ವರ್ಷದ ಉದ್ಯಮಿಯೊಬ್ಬರ ವಿಚಿತ್ರ ಬೇಡಿಕೆಯು ಮದುವೆಯ ಮಾರುಕಟ್ಟೆಯಲ್ಲಿರುವ ಜಾತಿ ಪದ್ದತಿ ಮತ್ತು ಹಣದ ಹಪಾಹಪಿಯನ್ನು ಬಯಲಿಗೆಳೆದಿದೆ.

ಜಾತಿ ಬೇಕು ಇಲ್ಲವೇ 80 ಲಕ್ಷ ಸಂಬಳ ಬೇಕು!

ಓಂದ್ರಿಲಾ ಅವರ ಬಳಿಗೆ ಬಂದಿದ್ದ 32 ವರ್ಷದ ಮಹಿಳೆ ಸ್ವಂತ ಫ್ಯಾಷನ್ ಲೇಬಲ್ ನಡೆಸುತ್ತಿದ್ದಾರೆ. ತಂದೆ ಐಪಿಎಸ್ ಅಧಿಕಾರಿ, ತಾಯಿ ಶಿಕ್ಷಕಿ. ಮೇಲ್ನೋಟಕ್ಕೆ ಅತ್ಯಂತ ಸುಶಿಕ್ಷಿತ ಮತ್ತು ಪ್ರಗತಿಪರ ಎನಿಸುವ ಈ ಕುಟುಂಬದ ಮಗಳು ಮದುವೆಗೆ ಹಾಕಿದ ಕಂಡೀಷನ್ ಕೇಳಿ ಮ್ಯಾಚ್ ಮೇಕರ್ ಬೆಚ್ಚಿಬಿದ್ದಿದ್ದಾರೆ. ಆಕೆಯ ಬೇಡಿಕೆ ಹೀಗಿತ್ತು: "ನನಗೆ ಕೇವಲ ಮೇಲ್ಜಾತಿಯ (ಬ್ರಾಹ್ಮಣ, ರಜಪೂತ) ಸಂಬಂಧಗಳನ್ನೇ ಹುಡುಕಿ".
ತಕ್ಷಣ ಓಂದ್ರಿಲಾ ಅವರು, "ಒಂದು ವೇಳೆ ಹುಡುಗನ ಆದಾಯ, ಜೀವನಶೈಲಿ ಮತ್ತು ಗುಣಗಳು ನಿಮಗೆ ಹೊಂದಿಕೆಯಾಗಿ, ಆತ ಬೇರೆ ಜಾತಿಯವನಾಗಿದ್ದರೆ ತಿರಸ್ಕರಿಸುತ್ತೀರಾ?" ಎಂದು ಕೇಳಿದ್ದಾರೆ. ಇದಕ್ಕೆ ಆ ಯುವತಿ ನೀಡಿದ ಉತ್ತರ ದಿಗಿಲು ಹುಟ್ಟಿಸುವಂತಿದೆ. "ಒಂದು ವೇಳೆ ಆತ ವಾರ್ಷಿಕವಾಗಿ 80 ಲಕ್ಷ ರೂಪಾಯಿಗಿಂತ ಹೆಚ್ಚು ಸಂಪಾದಿಸುತ್ತಿದ್ದರೆ, ಆಗ ನನಗೆ ಜಾತಿಯ ಹಂಗಿಲ್ಲ!" ಎಂದು ಆಕೆ ಉತ್ತರಿಸಿದ್ದಾಳೆ.

ಹಣದ ಮುಂದೆ ಜಾತಿ ನಗಣ್ಯ?

ಈ ಕುರಿತು ಪ್ರತಿಕ್ರಿಯಿಸಿರುವ ಓಂದ್ರಿಲಾ ಕಪೂರ್, "ನಗರವಾಸಿಗಳಲ್ಲಿ ಜಾತಿ ಎಂಬುದು ಹೇಗೆ ಕೆಲಸ ಮಾಡುತ್ತದೆ ನೋಡಿ. ಇಲ್ಲಿ ಜಾತಿಗಿಂತಲೂ 'ಸಾಮಾಜಿಕ ಸ್ಥಾನಮಾನ' (Social Rank) ಮುಖ್ಯವಾಗುತ್ತದೆ. ಒಂದು ವೇಳೆ ಜಾತಿ ಹೊಂದಿಕೆಯಾಗದಿದ್ದರೆ, ಹಣ ಆ ಸ್ಥಾನವನ್ನು ತುಂಬಬೇಕು ಎಂಬುದು ಇವರ ಲೆಕ್ಕಾಚಾರ. ಅಂದರೆ, ಹಣವಿದ್ದರೆ ಜಾತಿಯ ಗೋಡೆಯನ್ನು ಕೆಡವಲು ಇವರು ಸಿದ್ಧರಿದ್ದಾರೆ. ಇಲ್ಲಿ ಪ್ರೀತಿ, ಹೊಂದಾಣಿಕೆಗಿಂತ 'ವ್ಯವಹಾರ'ವೇ ಎದ್ದು ಕಾಣುತ್ತಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಲತಾಣದಲ್ಲಿ ಆಕ್ರೋಶ!

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. "ಹುಡುಕಬೇಕಾಗಿದ್ದು ಪ್ರೀತಿಯನ್ನು, ಆದರೆ ಈಗ ಹುಡುಕುತ್ತಿರುವುದು ಸಿಟಿಸಿ (CTC) ಮತ್ತು ಜಾತಿಯನ್ನು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಭಾರತೀಯ ಮದುವೆಗಳು ಈಗ ಕೇವಲ ಹಣಕಾಸಿನ ವಹಿವಾಟುಗಳಾಗಿ ಬದಲಾಗಿವೆ" ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಓಂದ್ರಿಲಾ ಅವರ ಕಿವಿಮಾತು

"ನಾವು ದೊಡ್ಡ ನಗರಗಳಲ್ಲಿ ಕುಳಿತು ಪ್ರಗತಿಪರರು ಎಂದು ಹೇಳಿಕೊಳ್ಳುತ್ತೇವೆ. ಆದರೆ ಮ್ಯಾಟ್ರಿಮೋನಿಯಲ್ ಆ್ಯಪ್ ಓಪನ್ ಮಾಡಿದ ಕೂಡಲೇ ಮೊದಲು ಜಾತಿಯ ಫಿಲ್ಟರ್ ಹಾಕುತ್ತೇವೆ. ಈ ಚಕ್ರವನ್ನು ಮುರಿಯಬೇಕಾದರೆ ನಮ್ಮ ಪೋಷಕರೊಂದಿಗೆ ನಾವು ಧೈರ್ಯವಾಗಿ ಮಾತನಾಡಬೇಕು. ಜಾತಿಗಿಂತ ಮನುಷ್ಯತ್ವಕ್ಕೆ ಬೆಲೆ ನೀಡುವ ಸಂಸ್ಕೃತಿ ನಮ್ಮಿಂದಲೇ ಆರಂಭವಾಗಬೇಕು," ಎಂದು ಓಂದ್ರಿಲಾ ಕರೆ ನೀಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net