ಮಹಿಳೆಯರ ಮೊಗದಲ್ಲಿ ನಗು ತಂದ ನಗದು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಇರುವಾಗಲೇ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 1.31 ಕೋಟಿ ಮಹಿಳೆಯರ ಖಾತೆಗೆ ತಲಾ 5 ಸಾವಿರ ರೂ. ವರ್ಗಾಯಿಸಿರುವುದು ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಆದರೆ, ತಮಿಳುನಾಡು ಮಾತ್ರವಲ್ಲ ದೇಶದ ಬಹುತೇಕ ರಾಜ್ಯಗಳು ಇಂಥ ಯೋಜನೆಗೆ ಭಾರಿ ಮೊತ್ತವನ್ನು ವೆಚ್ಚ ಮಾಡುತ್ತಿದ್ದು, ಆ ಕುರಿತಾದ ವಿವರ ಇಲ್ಲಿದೆ.

ತಮಿಳುನಾಡಿನಲ್ಲಿ ಏಪ್ರಿಲ್-ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕೃತ ವೇಳಾಪಟ್ಟಿ ಪ್ರಕಟವಾಗಬೇಕಿದೆ. ಅದಕ್ಕೂ ಮುನ್ನವೇ, ಮಹಿಳಾ ಮತದಾರರನ್ನು ಓಲೈಸಲು ಡಿಎಂಕೆ ಸರ್ಕಾರ ಪ್ರಯೋಗಿಸಿರುವ ಸಹಾಯಧನದ ರಾಜಕೀಯ ಅಸ್ತ್ರ, ವಿರೋಧಿಗಳನ್ನು ಬೆಚ್ಚಿಬೀಳಿಸಿದೆ. ಮಹಿಳೆಯರಿಗೆ ಸಹಾಯಧನ ಬಿಡುಗಡೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂಬ ಮುಂದಾಲೋಚನೆಯಿಂದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ. ಒಟ್ಟು 5 ಸಾವಿರ ರೂ. ಮೊತ್ತವು ಮುಂಬರುವ ಮೂರು ತಿಂಗಳ ಮುಂಗಡ ಹಣವನ್ನೂ ಒಳಗೊಂಡಿದೆ. ಅಲ್ಲದೆ, ಬೇಸಿಗೆಯ ಖರ್ಚುಗಳಿಗಾಗಿ ಎರಡು ಸಾವಿರ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ನಟ ವಿಜಯ್, ‘ದುಡ್ಡು ಅವರಿಂದ (ಡಿಎಂಕೆ) ತೆಗೆದುಕೊಳ್ಳಿ, ಮತ ಮಾತ್ರ ನಮ್ಮ ಪಕ್ಷಕ್ಕೆ ಹಾಕಿ’ ಎಂದಿದ್ದಾರೆ. ಡಿಎಂಕೆ ಅಧಿಕಾರಕ್ಕೆ ಮರಳಿದರೆ ಈ ನೆರವಿನ ಮೊತ್ತವನ್ನು 1 ಸಾವಿರದಿಂದ 2 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ಸ್ಟಾಲಿನ್ ಭರವಸೆ ನೀಡಿದ್ದಾರೆ. ‘ಸೋಲಿನ ಭಯದಿಂದ ಸ್ಟಾಲಿನ್ ಹೀಗೆ ಮಾಡಿದ್ದಾರೆ’ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ, ಮತದಾರರ ಸಂಖ್ಯೆಯಲ್ಲಿ ಬಹುತೇಕ ಶೇಕಡ 50ರಷ್ಟು ಮಹಿಳೆಯರು ಇರುವುದರಿಂದ ಬಹುತೇಕ ರಾಜ್ಯಗಳು ಮಹಿಳಾ ಮತಗಳನ್ನು ಸೆಳೆಯಲು ಇದೇ ತಂತ್ರಕ್ಕೆ ಮೊರೆ ಹೋಗಿರುವುದು ಸ್ಪಷ್ಟ. ‘ನಗದು ವರ್ಗಾವಣೆ’ ಕಳೆದ ಕೆಲ ವರ್ಷಗಳಿಂದ ಚುನಾವಣೆ ಗೆಲುವಿನ ಅಸ್ತ್ರವಾಗಿ ಬದಲಾಗಿರುವುದಂತೂ ಹೌದು.

ದೇಶದ 12 ರಾಜ್ಯಗಳಿಂದ 12.8 ಕೋಟಿ ಮಹಿಳೆಯರ ಖಾತೆಗೆ ಪ್ರತಿ ವರ್ಷ 1.9 ಲಕ್ಷ ಕೋಟಿ ರೂ. ಜಮೆ ಆಗುತ್ತಿದೆ. ಇದು, ರಾಜ್ಯಗಳ ಬೊಕ್ಕಸವನ್ನು ಬರಿದು ಮಾಡುವ ಆತಂಕ ಸೃಷ್ಟಿಸಿದ್ದು, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಇದಕ್ಕೆ ಸಾಕ್ಷಿ. ಮತ್ತೊಂದು ಆಯಾಮದಲ್ಲಿ ವಿಶ್ಲೇಷಿಸುವುದಾದರೆ, ಈ ನೆರವಿನಿಂದ ಮಹಿಳೆಯರ ಉಳಿತಾಯ ಅಥವಾ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು ಹೆಚ್ಚಿವೆ.

ರಾಜಕೀಯದ ಸಮೀಕರಣಗಳನ್ನೇ ಬದಲಿಸುತ್ತಿದೆ ಸ್ತ್ರೀಶಕ್ತಿ. ಹೌದು, ರಾಜಕೀಯ ತಂತ್ರಗಾರಿಕೆ ಬದಲಾಗಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಮತದಾನ ಪ್ರಮಾಣದಲ್ಲೂ ಏರಿಕೆಯಾಗಿರುವುದು ಈ ಬದಲಾವಣೆಗೆ ಪ್ರಮುಖ ಕಾರಣ. ಅಲ್ಲದೆ, ಮಹಿಳೆಯರು ರಾಜಕೀಯ ಭರವಸೆಗಳನ್ನು ನಂಬಿ ಮತ ಹಾಕುವುದಿಲ್ಲ ಎಂಬ ಸಂಗತಿ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಹೀಗಾಗಿಯೇ, ಮಹಿಳಾ ಮತದಾರರ ಮನ ಗೆಲ್ಲಲು ‘ಸಹಾಯಧನ’ದ ಅಸ್ತ್ರ ಪ್ರಯೋಗಿಸಲಾಗಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಆದ್ದರಿಂದಲೇ ಯಾವುದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಅಲ್ಲಿ ಮೊದಲು ಗಮನ ಸೆಳೆಯುವುದು ಮಹಿಳೆಯರ ಕುರಿತಾದ ಭರವಸೆಗಳು/ಘೋಷಣೆಗಳು.

2023ರ ಮೇ ತಿಂಗಳಿಂದ 2025ರ ಡಿಸೆಂಬರ್​ವರೆಗೆ ದೇಶದ 15 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿವೆ. ಈ ಪೈಕಿ 11 ರಾಜ್ಯಗಳಲ್ಲಿ ಮಹಿಳೆಯರಿಗೆ ನಗದು ವರ್ಗಾವಣೆಯ ಭರವಸೆ ನೀಡಿ, ಚುನಾವಣೆಯ ಬಳಿಕ ಅದನ್ನು ಜಾರಿಗೆ ತರಲಾಗಿದೆ. 11 ರಾಜ್ಯಗಳ ಪೈಕಿ ಆರು ರಾಜ್ಯಗಳಲ್ಲಿ ಸರ್ಕಾರವೇ ಬದಲಾಗಿದ್ದರೆ, ‘ಮಹಿಳೆಯರಿಗೆ ನೇರ ನಗದು ಯೋಜನೆ ಜಾರಿಗೆ ತರಲಾಗುವುದು’ ಎಂದು ಘೋಷಿಸಿ ಐದು ರಾಜ್ಯಗಳಲ್ಲಿನ ಪಕ್ಷಗಳು ಅಧಿಕಾರ ಉಳಿಸಿಕೊಂಡು, ಮತ್ತೆ ಸರ್ಕಾರ ರಚಿಸಿವೆ.

ಪ್ರಮುಖ ರಾಜ್ಯಗಳ ಸ್ಥಿತಿ

  • ರಾಜಧಾನಿ ದೆಹಲಿಯಲ್ಲಿ ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ ಮಹಿಳೆಯರಿಗೆ ಮಾಸಿಕ 2,500 ರೂ. ನೆರವು ನೀಡಲಾಗುತ್ತಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ 2025ರ ಮಾರ್ಚ್ 8ರಂದು ‘ಮಹಿಳಾ ಸಮೃದ್ಧಿ ಯೋಜನೆ’ಯನ್ನು ಉದ್ಘಾಟಿಸಿ, ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು. ದೆಹಲಿ ಸರ್ಕಾರ ಈ ಯೋಜನೆಗೆ ವರ್ಷಕ್ಕೆ 5100 ರೂ. ಕೋಟಿ ರೂ. ಮೀಸಲಿಟ್ಟಿದೆ.
  • ಮಹಾರಾಷ್ಟ್ರದಲ್ಲಿ ‘ಮಾಝಿ ಲಾಡಕಿ ಬಹಿಣ್’ ಯೋಜನೆಯನ್ನು 2024ರ ಆಗಸ್ಟ್ 17ರಂದು ಅಂದಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಘಾಟಿಸಿದ್ದರು. 2024ರ ನವೆಂಬರ್​ನಲ್ಲಿ ಎನ್​ಡಿಎ ಒಕ್ಕೂಟದ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದ ಮೇಲೆ, 1500 ರೂ. ನೆರವನ್ನು 2100 ರೂ.ಹೆಚ್ಚಿಸಿದ್ದಾರೆ.
  • ಬುಡಕಟ್ಟು ರಾಜ್ಯ ಜಾರ್ಖಂಡ್​ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸರ್ಕಾರವು ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳ ಮುನ್ನ ಅಂದರೆ 2024ರ ಆಗಸ್ಟ್ 18ರಂದು ‘ಜಾರ್ಖಂಡ್ ಮುಖ್ಯಮಂತ್ರಿ ಮಯ್ಯಾ ಸಮ್ಮಾನ್ ಯೋಜನೆ’ಯನ್ನು ಆರಂಭಿಸಿತು. ಇದರನ್ವಯ ತಿಂಗಳಿಗೆ 1 ಸಾವಿರ ರೂ. ನೆರವನ್ನು ಮಹಿಳೆಯರಿಗೆ ಒದಗಿಸಲಾಯಿತು. ನವೆಂಬರ್​ನಲ್ಲಿ ಚುನಾವಣೆ ನಡೆಯುವ ಮುನ್ನ ನಾಲ್ಕು ಕಂತುಗಳಲ್ಲಿ ಒಟ್ಟು 4 ಸಾವಿರ ರೂ. ಮಹಿಳೆಯರ ಖಾತೆಗಳಿಗೆ ಜಮೆಯಾಯಿತು. ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಐಎನ್​ಡಿಐಎ ಒಕ್ಕೂಟ ಗೆದ್ದು, ಹೇಮಂತ್ ಸೊರೆನ್ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಜೆಎಂಎಂ ಚುನಾವಣೆಯ ಮುನ್ನ ನೀಡಿದ ಆಶ್ವಾಸನೆಯಂತೆ ಪ್ರಸಕ್ತ ಮಹಿಳೆಯರ ಖಾತೆಗೆ 2500 ರೂ. ನೆರವು 2025ರ ಜನವರಿಯಿಂದ ಜಮೆಯಾಗುತ್ತಿದೆ.
  • ಹರಿಯಾಣದಲ್ಲಿ 2025ರ ಸೆಪ್ಟೆಂಬರ್​ನಲ್ಲಿ ‘ದೀನದಯಾಳ ಲಾಡೋ ಲಕ್ಷ್ಮಿ’ ಯೋಜನೆಯನ್ನು ಉದ್ಘಾಟಿಸಲಾಯಿತು. 23 ವರ್ಷ ತುಂಬಿದ ಹಾಗೂ ಮೇಲ್ಪಟ್ಟ ಬಡ ಮಹಿಳೆಯರಿಗೆ ತಿಂಗಳಿಗೆ 2100 ರೂ. ನೆರವು ನೀಡಲಾಗುತ್ತಿದೆ.
  • ಆಂಧ್ರಪ್ರದೇಶದಲ್ಲಿ ಮಹಾಶಕ್ತಿ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ತಿಂಗಳು 1500 ರೂ. ಆರ್ಥಿಕ ನೆರವು ಒದಗಿಸಲಾಗುತ್ತಿದೆ.
  • ಒಡಿಶಾದ ಭುವನೇಶ್ವರದಲ್ಲಿ 2024ರ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ‘ಸುಭದ್ರಾ’ ಯೋಜನೆಯನ್ನು ಉದ್ಘಾಟಿಸಿದರು. ಇದರನ್ವಯ 21ರಿಂದ 60 ವರ್ಷದ ಬಡ ಮಹಿಳೆಯರಿಗೆ ವರ್ಷಕ್ಕೆ 10 ಸಾವಿರ ರೂ. ನೆರವನ್ನು ಎರಡು ಕಂತುಗಳಲ್ಲಿ ಒದಗಿಸಲಾಗುತ್ತಿದೆ.
  • ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ 2023ರ ಜನವರಿ 28ರಂದು ‘ಲಾಡ್ಲಿ ಬಹನಾ’ ಯೋಜನೆಯನ್ನು ಉದ್ಘಾಟಿಸಿತು. 1.2 ಕೋಟಿ ಬಡ ಮಹಿಳೆಯರಿಗೆ ತಿಂಗಳಿಗೆ 1250 ರೂ. ನೆರವು ಈ ಮೂಲಕ ದೊರೆಯಿತು. ಪ್ರಸಕ್ತ, ಸಿಎಂ ಮೋಹನ್ ಯಾದವ್ ನೆರವಿನ ಮೊತ್ತವನ್ನು 1250 ರೂ.ನಿಂದ 1500 ರೂ.ಗೆ ಹೆಚ್ಚಿಸಿದ್ದಾರೆ.
  • ತೆಲಂಗಾಣದಲ್ಲಿ ‘ಮಹಾಲಕ್ಷ್ಮಿ’ ಯೋಜನೆಯಡಿ ಬಡ ಮಹಿಳೆಯರಿಗೆ ತಿಂಗಳಿಗೆ 2500 ರೂ. ನೆರವು ನೀಡಲಾಗುತ್ತಿದೆ.

ಮಹಿಳಾ ಪರ ನೀತಿಗಳ ಪರಿಣಾಮಗಳು

  • ಮಹಿಳಾ ಮತಬ್ಯಾಂಕ್ ಪ್ರಬಲವಾಗಿ ಹೊಮ್ಮಲು ಸಾಧ್ಯವಾಗಿದ್ದು, ಮಹಿಳೆಯರು ತಮ್ಮ ವೋಟಿನ ಶಕ್ತಿಯನ್ನು ಅರಿತುಕೊಂಡಿದ್ದಾರೆ ಮತ್ತು ತಾವು ಮಾಡುವ ಮತದಾನ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಭಾವಿಸಿದ್ದಾರೆ.
  • ಪ್ರಧಾನಿ ನರೇಂದ್ರ ಮೋದಿ ತಮ್ಮ ಮೂರನೇ ಅವಧಿಯ 100 ದಿನಗಳಲ್ಲಿ 11 ಲಕ್ಷ ಹೊಸ ‘ಲಖ್​ಪತಿ ದೀದಿ’ಗಳಿಗೆ ಪ್ರಮಾಣಪತ್ರ ನೀಡಿದ್ದಾರೆ. ಸರ್ಕಾರದ ಅಂಕಿಅಂಶದ ಪ್ರಕಾರ 1 ಕೋಟಿಗಿಂತ ಅಧಿಕ ಲಖ್​ಪತಿ ದೀದಿಯರು ಈಗ ವರ್ಷಕ್ಕೆ ಒಂದು ಲಕ್ಷ ರೂ.ಗಿಂತ ಅಧಿಕ ಗಳಿಕೆ ಮಾಡುತ್ತಿದ್ದಾರೆ.
  • ‘ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿ ಶೇಕಡ 70ಕ್ಕಿಂತ ಹೆಚ್ಚು ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ.
  • ‘ಪ್ರಧಾನಮಂತ್ರಿ ಉಜ್ವಲಾ ಯೋಜನೆ’ಯಡಿ 10 ಕೋಟಿಗೂ ಅಧಿಕ ಮಹಿಳೆಯರಿಗೆ ಉಚಿತವಾಗಿ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ.
  • ಮೋದಿ ಸರ್ಕಾರ 2023ರ ಸೆಪ್ಟೆಂಬರ್​ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದೆ. ಇದರನ್ವಯ 33% ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಲಿವೆ. ಅಂದರೆ ಲೋಕಸಭೆಯ 543 ಕ್ಷೇತ್ರಗಳ ಪೈಕಿ 181 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಲಿವೆ.

12.26 ಕೋಟಿ ರೂ. ಫಲಾನುಭವಿಗಳ ಒಟ್ಟು ಸಂಖ್ಯೆ

1,89,118 ಕೋಟಿ ವಾರ್ಷಿಕ ಒಟ್ಟು ವೆಚ್ಚ

ತಜ್ಞರು ಏನಂತಾರೆ?

ಮತದಾರರ ಸಂಖ್ಯೆಯಲ್ಲಿ ಹತ್ತಿರಹತ್ತಿರ ಅರ್ಧದಷ್ಟು ಅಂದರೆ ಶೇಕಡ 50ರಷ್ಟು ಮಹಿಳೆಯರೇ. ಹಾಗಾಗಿಯೇ, ಮಹಿಳಾ ಮತದಾರರನ್ನು ಸೆಳೆಯಲು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ನೆರವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿವೆ. ಮಹಿಳೆಯರಿಗೂ ಈ ಯೋಜನೆ ಆಕರ್ಷಕವಾಗಿ ಕಂಡಿದೆ. ಮತಗಳನ್ನು ಸೆಳೆಯುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಿದೆ. ಹಲವು ರಾಜ್ಯಗಳಲ್ಲಿ ಈ ಸೂತ್ರ ಸಫಲವಾಗಿರುವುದರಿಂದ, ಮುಂಬರುವ ಹಲವು ವರ್ಷಗಳ ಕಾಲ ಇದೇ ಟ್ರೆಂಡ್ ಮುಂದುವರಿಯಲಿದೆ. ಆದರೆ, ಹೀಗೆ ನೆರವನ್ನು ಘೋಷಿಸುವಾಗ ರಾಜ್ಯದ ಬೊಕ್ಕಸದ ಸ್ಥಿತಿಯನ್ನು ಗಮನಿಸಬೇಕು. ಆಯಾ ರಾಜ್ಯಗಳ ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವಿ ಇಂಥ ನೆರವು ನೀಡುವುದು, ಮುಂಬರುವ ವರ್ಷಗಳಲ್ಲಿ ದುಬಾರಿಯಾಗಿ ಪರಿಣಮಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net