ಗೂಗಲ್ ಮ್ಯಾಪ್ ತಂದಿಟ್ಟ ಫಜೀತಿ; ಸೇತುವೆ ನಿರ್ಮಾಣಕ್ಕಾಗಿ ಅಗೆದಿದ್ದ ಹೊಂಡಕ್ಕೆ ಬಿದ್ದ ಕಾರು, ಚಾಲಕ ಪಾರು..Google Maps misguidance Tirupati
Google Maps misguidance Tirupati
Published on:
Copied
Follow Us
Google Maps misguidance Tirupati: ಮೊದಲೆಲ್ಲ ನೂತನ ಜಾಗಕ್ಕೆ ಯಾರನ್ನಾದರೂ ಭೇಟಿಯಾಗಲು ಅಥವಾ ಕೆಲಸದ ಮೇರೆಗೆ ಕಚೇರಿಗಳಿಗೆ ತೆರಳಲು ಜನರನ್ನು ವಿಚಾರಿಸುತ್ತಾ, ರಸ್ತೆಗಳ ಬಗ್ಗೆ ತಿಳಿಯುತ್ತಾ ಹೋಗೋದು ವಾಡಿಕೆಯಾಗಿತ್ತು. ಆದರೆ ಈಗ ಅಂತಹ ಮುಜುಗುರದ ಪರಿಸ್ಥಿತಿ ಇಲ್ಲ. ತರಕಾರಿ ಅಂಗಡಿ, ಕೆಫೆ ಎಲ್ಲವನ್ನೂ ಗೂಗಲ್ ಮ್ಯಾಪ್ನಲ್ಲೇ ನೋಡಬಹುದು. ಆದರೆ ವಿಪರ್ಯಾಸ ಎಂದರೆ ಕೆಲವೊಮ್ಮೆ ಇವು ಕೈಕೊಟ್ಟು ಫಜೀತಿಗೆ ಸಿಕ್ಕಿ ಹಾಕಿಸಿ ಬಿಡುತ್ತವೆ. ಈ ಮ್ಯಾಪ್ನಿಂದಾಗಿ ಅನೇಕರು ಸಾವಿನ ಮನೆ ತಲುಪಿದ ಉದಾಹರಣೆ ಇದೆ. ಸದ್ಯ ಆಂಧ್ರದಲ್ಲಿ ಗೂಗಲ್ ಮ್ಯಾಪ್ ನಂಬಿ ಹೋದ ಪ್ರಯಾಣಿಕರು ಅಪಘಾತಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ವೆಂಕಟಗಿರಿಯಿಂದ ತಿರುಪತಿ ಜಿಲ್ಲೆಯ ದಕ್ಕಿಲಿಯ ಕಡೆಗೆ ಕಾರಿನಲ್ಲಿ ಚಾಲರೊಬ್ಬರು ಹೊರಟಿದ್ದರು. ಎರ್ಪೇಡು-ಪೆಂಚಲಕೋಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಿಂಗಸಮುದ್ರಂನಲ್ಲಿ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹೀಗಾಗಿ ಸವಾರರಿಗೆ ಪರ್ಯಾಯ ಮಾರ್ಗ ಬಳಕೆ ಮಾಡಲು ಸೂಚನೆಯನ್ನು ಸಹ ನೀಡಲಾಗಿತ್ತು. ಆದರೆ ಈ ಕಾರು ಚಾಲಕ ಗೂಗಲ್ ಮ್ಯಾಪ್ ಅನ್ನು ನಂಬಿದ್ದ ಕಾರಣ ಅದರ ಸೂಚನೆಯಂತೆ ಚಲಾಯಿಸುತ್ತಿದ್ದ. ಆದರೆ, ರಸ್ತೆಯಲ್ಲಿ ಹೊಂಡ ತೆಗೆದಿರುವುದನ್ನು ಅರಿಯದ ಆತ ನೇರವಾಗಿ ಕಾರನ್ನು ಓಡಿಸಿ ಸೇತುವೆ ನಿರ್ಮಾಣಕ್ಕಾಗಿ ಅಗೆದಿದ್ದ ಹೊಂಡಕ್ಕೆ ಬಿದ್ದಿದ್ದಾನೆ.
ಪ್ರಾಣಾಪಾಯದಿಂದ ಕಾರು ಚಾಲಕ ಪಾರು
ಕಾರು ಹೊಂಡಕ್ಕೆ ಬಿದ್ದ ಸದ್ದು ಕೇಳಿ ಘಟನಾ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಜೆಸಿಬಿ ಸಹಾಯದಿಂದ ಕಾರನ್ನು ಹಾಗೂ ಚಾಲಕನನ್ನು ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳೀಯರು ಏನಂದ್ರು?
ಈ ಅಪಘಾತಕ್ಕೆ ಗೂಗಲ್ ಮ್ಯಾಪ್ ಮಾತ್ರವಲ್ಲ, ಹೆದ್ದಾರಿ ಪ್ರಾಧಿಕಾರವೂ ಕಾರಣವಾಗುತ್ತದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೆ, ರಸ್ತೆ ತಿರುವು ಪಡೆದುಕೊಳ್ಳುವ ಮಾರ್ಗದಲ್ಲಿ ಸೂಚನ ಫಲಕ ಹಾಕೋದು ಅವರ ಕರ್ತವ್ಯ. ಹೀಗಾಗಿ ಪರೋಕ್ಷವಾಗಿ ಅವರು ಕಾರಣಕರ್ತರು ಎಂದು ಸ್ಥಳೀಯರು ಕಿಡಿಕಾರಿದರು, (ಏಜೆನ್ಸೀಸ್).