

ವೈರಲ್: ಪೆಟ್ರೋಲ್ ಮತ್ತು ಡೀಸೆಲ್ ಆಧಾರಿತ ವಾಹನಗಳನ್ನು ಬಳಸಿದರೆ ಖರ್ಚು ಹೆಚ್ಚಾಗುತ್ತದೆ, ತೈಲ ಬೆಲೆ ಕೂಡ ಏರಿಕೆ ಕಾಣುತ್ತಿರುವ ಈ ಕಾಲಮಾನದಲ್ಲಿ ಜನರು ಸಿಎನ್‌ಜಿ ಗ್ಯಾಸ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವತ್ತ ಗಮನ ಹರಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಗುಜರಾತಿನ, ಕರ್ಜನ್ ಬಳಿ ಸಿಎನ್‌ಜಿ ಗ್ಯಾಸ್ ತುಂಬಿಸಲು ನಿಂತಿದ್ದ ಕಾರೊಂದು ಸ್ಫೋಟಗೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಕಾಡ್ಗಿಚ್ಚಿನಂತೆ ಎಲ್ಲಡೆ ವೈರಲ್ ಆಗುತ್ತಿದೆ.
ಈ ಭೀಕರ ಘಟನೆಯು ಅಕ್ಟೋಬರ್ 1 ರಂದು ಗುಜರಾತ್ ರಾಜ್ಯದ ಕರ್ಜನ್ಬ ಎನ್ಹೆಚ್- 48 ಬಳಿ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಸಿಎನ್‌ಜಿ ಗ್ಯಾಸ್ ಖಾಲಿಯಾದ ಹಿನ್ನಲೆ, ಮಾಲೀಕನು ಗ್ಯಾಸ್ ಅನ್ನು ಭರ್ತಿ ಮಾಡಿಸಲು ಜಿಂದಾಲ್ ಕಂಪನಿಯ ಎದುಗಿರುವ ಈ ಸಿಎನ್‌ಜಿ ಗ್ಯಾಸ್ ಸ್ಟೇಶನ್ಗೆ ಬೇಟಿ ಕೊಟ್ಟಿದ್ದಾರೆ.
ವಿಡಿಯೋನಲ್ಲಿ ಕಾಣುವಂತೆ, ಕಾರಿಗೆ ಗ್ಯಾಸ್ ಪೈಪ್ ಜೋಡಿಸಿದ್ದಾರೆ. ನಂತರ ಏಕಾಏಕಿ ಕಾರು ಸ್ಫೋಟಗೊಂಡಿದ್ದು, ಸುತ್ತಲಿನಿದ್ದ ಜನರಿಗೆ ಹಾಗೂ ಪಕ್ಕದಲ್ಲಿದ್ದ ಇನ್ನೊಂದು ಕಾರು ಜಕಂ ಆಗಿದೆ ಎಂದು ತಿಳಿದು ಬಂದಿದೆ. ವಿಡಿಯೋನಲ್ಲಿ ಕಾಣುವಂತೆ ಸ್ಫೋಟದ ರಭಸಕ್ಕೆ ಕಾರಿನ ಮುಂಭಾಗ ಹಾರಿಹೋಗಿದ್ದು, ಗಾಜುಗಳೆಲ್ಲಾ ಪುಡಿ-ಪುಡಿಯಾಗಿವೆ.
ಮಾಹಿತಿ ಪ್ರಕಾರ, ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಕೆಲವೊಂದಿಷ್ಟು ಜನರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ಕುರಿತು ಗ್ಯಾಸ್ ಸ್ಟೇಷನ್ ಸಿಬ್ಬಂದಿ ಹಾಗೂ ಮಾಲೀಕನ ಬಳಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಈ ಸಿಎನ್‌ಜಿ ಕಾರು ಸ್ಫೋಟದ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆತಂಕ ಹೊರಹಾಕಿದ್ದಾರೆ. ಪೆಟ್ರೋಲ್-ಡೀಸೆಲ್ ಗಾಡಿ ಬ್ಲಾಸ್ಟ್ ಆಗುವುದನ್ನು ಕೇಳಿದ್ದೆ, ನೋಡಿದ್ದೆ, ಈಗ ಸಿಎನ್‌ಜಿ ಗಾಡಿ ಕೂಡ ಬ್ಲಾಸ್ಟ್ ಆಗುತ್ತಿದೆ. ಯಾರನ್ನು ನಂಬಬೇಕೆಂದು ತಿಳಿಯಲಾಗಿದೆ ಎಂದು ಒಬ್ಬರು ಹೇಳಿದ್ದಾರೆ.
ಅದಿಕ್ಕೆ ತೈಲವನ್ನು ಅಥವಾ ಗ್ಯಾಸ್ ಅನ್ನು ತುಂಬಿಸುವಾಗ, ವಾಹನದಿಂದ ಆಚೆಯಿರಿ ಎಂದು ಸಿಬ್ಬಂದಿ ಹೇಳುತ್ತಾರೆ. ಈ ಗಾಡಿಯಲ್ಲಿ ಒಂದು ವೇಳೆ ಚಾಲಕನಿದ್ದರೆ, ಅವನ ಸಾವು ಖಚಿತವಾಗಿತ್ತೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಸಿಎನ್‌ಜಿ ವಾಹನಗಳು ಕೈಗೆಟಕುವ ಹಾಗೂ ಸುರಕ್ಷಿತ ಎಂಬ ಭಾವನೆ ಜನರಲ್ಲಿದೆ. ದಯವಿಟ್ಟು ಆ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಈ ರೀತಿಯ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಿ ಎಂದು ಇನ್ನೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).