

Captain Smit Machchhar: ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಹಲ್ಲೆಗೊಳಗಾದರೂ ಸಹ, ಫ್ಲೈದುಬೈ ವಿಮಾನದ ಪ್ರಯಾಣಿಕರನ್ನು ರಕ್ಷಿಸಲು ಸಹಾಯ ಮಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಜಾಗತಿಕ ಮಟ್ಟದಲ್ಲಿ ಹೀರೋ ಎಂದು ಕೊಂಡಾಡಲಾಗುತ್ತಿದ್ದು, ಮಚ್ಚಾರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ, ಅವರ ಉಪನಾಮದ ಕುರಿತಾಗಿಯೂ ಅನೇಕರಲ್ಲಿ ಕುತೂಹಲ ಮನೆ ಮೂಡಿದೆ.
ಸೋಷಿಯಲ್ ಮೀಡಿಯಾ ಮತ್ತು ಕಚೇರಿಗಳಲ್ಲಿ ಅನೇಕರು ಮಚ್ಚಾರ್, ಇದು ಯಾವ ರೀತಿಯ ಉಪನಾಮ..? ಎಂದು ಪ್ರಶ್ನಿಸಲು ಶುರು ಮಾಡಿದರು. ಈ ಕುತೂಹಲ ಸಹಜವೇ ಆಗಿತ್ತು, ಏಕೆಂದರೆ ಕ್ಯಾಪ್ಟನ್ ಮಚ್ಚಾರ್ ಅವರ ಉಪನಾಮವು ಹಿಂದಿ ಭಾಷೆಯಲ್ಲಿ ಸೊಳ್ಳೆ ಎನ್ನುವ ಪದವನ್ನು ಹೋಲುತ್ತದೆ.
ಗುಜರಾತ್ ಮತ್ತು ಪಶ್ಚಿಮ ಭಾರತದ ಹೊರಗಿನ ಅನೇಕ ಭಾರತೀಯರಿಗೆ ಈ ಹೆಸರು ತಕ್ಷಣವೇ ದಿನನಿತ್ಯದ ಹಿಂದಿ-ಗುಜರಾತಿ ಭಾಷೆಯ ಸೊಳ್ಳೆ ಎಂಬ ಪದದ ನೆನಪನ್ನು ತಂದಿತು. ಈ ಕುತೂಹಲವು ತನ್ನ ವಾಟ್ಸಾಪ್ ಚಾಟ್‌ಗಳಿಗೂ ತಲುಪಿತ್ತು ಎಂದು ಹಿರಿಯ ಪತ್ರಕರ್ತೆ ಶೀಲಾ ಭಟ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಕ್ಯಾಪ್ಟನ್ ಅವರ ಉಪನಾಮ ಮಚ್ಚಾರ್ ಏಕೆ ಎಂದು ಜನರು ಕೇಳುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.
ಈ ಪ್ರಶ್ನೆಗೆ ಉತ್ತರ ಬೇಕಾದರೆ ನಾವು ಗುಜರಾತಿನ ಆಕರ್ಷಕ ಉಪನಾಮಗಳ ಪ್ರಪಂಚಕ್ಕೆ ಹೋಗಬೇಕು. ಅಲ್ಲಿನ ಕುಟುಂಬಗಳು ಆನೆ ಎಂದರ್ಥವಿರುವ ಹಾತಿ, ಕುದುರೆ ಎಂದರ್ಥವಿರುವ ಘೋಡಾ, ಸಣ್ಣ ಕೀಟಕ್ಕೆ ಸಂಬಂಧಿಸಿದ ಮಂಕಾಡ್, ಮತ್ತು ಗಿಳಿ ಎಂದರ್ಥವಿರುವ ಪೋಪಟ್ನಂತಹ ಹೆಸರುಗಳನ್ನು ಉಪನಾಮವಾಗಿ ಹೊಂದಿವೆ.
ಈ ಹೆಸರಿನ ಬಗ್ಗೆ ಆಳವಾಗಿ ಸಂಶೋಧನೆಗಿಳಿದಾಗ, ಮಚ್ಚಾರ್ ಎನ್ನುವುದು ಸಿಂಧ್ ಮತ್ತು ಕಚ್‌ನ ವರ್ತಕ ಸಮುದಾಯವಾದ ಲೋಹಾನಾಗಳು ಹಾಗೂ ನಾಗರ್ ಬ್ರಾಹ್ಮಣರು ಸೇರಿದಂತೆ ವಿವಿಧ ಸಮುದಾಯಗಳಲ್ಲಿ ಕಂಡುಬರುವ ಒಂದು ಗುಜರಾತಿ ಉಪನಾಮ ಎಂಬುದು ತಿಳಿಯುತ್ತದೆ. ಮಚ್ಚಾರ್ ಉಪನಾಮದ ನಿಖರವಾದ ಮೂಲವು ಅಸ್ಪಷ್ಟವಾಗಿದ್ದರೂ, ಗುಜರಾತಿ ಉಪನಾಮಗಳ ಕುರಿತಾದ ಹಳೆಯ ಅಧ್ಯಯನವೊಂದು ಹಲವು ಸಾಧ್ಯತೆಗಳನ್ನು ಮುಂದಿಡುತ್ತದೆ. ತಲೆಮಾರುಗಳಿಂದ ಪದದ ಉಚ್ಚಾರಣೆಯಲ್ಲಿ ಬದಲಾವಣೆಯಾಗಿರುವುದು, ಕುಟುಂಬವು ತಾನು ವಾಸಿಸುತ್ತಿದ್ದ ಸ್ಥಳದಿಂದ ಪಡೆದಿರುವ ಒಂದು ಅಡ್ಡಹೆಸರು ಇರಬಹುದು ಎನ್ನಲಾಗಿದೆ.
1942ರಲ್ಲಿ ಅಹಮದಾಬಾದ್‌ನ ಗುಜರಾತ್ ವರ್ನಾಕ್ಯುಲರ್ ಸೊಸೈಟಿಯಿಂದ ಪ್ರಕಟವಾದ, ಪ್ರೊಫೆಸರ್ ವಿನೋದಿನಿ ನೀಲಕಂಠ ಅವರ ಗುಜರಾತ್ ಅಟಕೋನೊ ಇತಿಹಾಸ್ (Gujarati Atakono Itihas - History of Gujarati Surnames) ಪುಸ್ತಕದಲ್ಲಿ ಈ ಕುರಿತು ವಿಸ್ತೃತ ಚರ್ಚೆಯಿದೆ. ಹಾಸ್ಯಮಯ ಅಥವಾ ವ್ಯಂಗ್ಯದ ಅಡ್ಡಹೆಸರುಗಳಿಂದ ಹುಟ್ಟಿಕೊಂಡ ಉಪನಾಮಗಳಿಗಾಗಿ ಅವರು ಒಂದು ಸಂಪೂರ್ಣ ವಿಭಾಗವನ್ನೇ ಮೀಸಲಿಟ್ಟಿದ್ದರು. ವೈಯಕ್ತಿಕ ಲಕ್ಷಣಗಳು ಕಾಲಾನಂತರದಲ್ಲಿ ಹೇಗೆ ಕುಟುಂಬದ ಗುರುತುಗಳಾಗಿ ಬದಲಾಗಬಹುದು ಎಂಬುದನ್ನು ಅವರು ವಿವರಿಸಿದರು. ಅಂತಹ ಹೆಸರುಗಳನ್ನು ಚರ್ಚಿಸುವಾಗ, ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವ ವಿವರಣೆಗಳು ಯಾವಾಗಲೂ ಖಚಿತವಾಗಿರಬೇಕೆಂದಿಲ್ಲ ಎನ್ನುತ್ತಾ, ಸ್ಥಾಪಿತ ಇತಿಹಾಸವಾಗಿ ಬಿಂಬಿಸುವ ಬದಲು ಹಲವು ಉಪನಾಮಗಳಿಗೆ ಪರ್ಯಾಯ ಮೂಲಗಳನ್ನು ನೀಡಿದರು.
ಪಾಕಿಸ್ತಾನದ ಗಡಿಯಾಚೆಯೂ ಮಚ್ಚಾರ್ ಉಪನಾಮ ಅಸ್ತಿತ್ವದಲ್ಲಿದ್ದು, ಕರಾಚಿಯಲ್ಲಿ ಮಚ್ಚಾರ್ ಕಾಲೋನಿ ಎಂಬ ದೊಡ್ಡ ವಾಸಸ್ಥಳವಿದೆ. ಆದಾಗ್ಯೂ, ಪಾಕಿಸ್ತಾನದ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಆ ಪ್ರದೇಶದ ದೊಡ್ಡ ಮೀನುಗಾರ ಸಮುದಾಯವನ್ನು ಪ್ರತಿಬಿಂಬಿಸುವ ಮೀನುಗಾರರಿಗೆ ಸಂಬಂಧಿಸಿದ ಸಿಂಧಿ ಪದದಿಂದ ಆ ಹೆಸರು ಬಂದಿದೆಯೇ ಹೊರತು ಸೊಳ್ಳೆಗಳಿಂದ ಅಲ್ಲ. ಹಾಗಾದರೆ, ಹೆಚ್ಚಿನ ಭಾರತೀಯರಿಗೆ ಕಿರಿಕಿರಿ ಉಂಟುಮಾಡುವ ಕೀಟದ ಹೆಸರೆಂದು ತಿಳಿದಿರುವ ಪದವು ಕುಟುಂಬದ ಹೆಸರಾಗಿದ್ದೇಗೆ..?
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಅಸಾಮಾನ್ಯ ಘಟನೆಗಳ ನಂತರ ಮಚ್ಚಾರ್ ಉಪನಾಮವು ಎಲ್ಲರ ಗಮನ ಸೆಳೆಯಿತು. ಕಾಕ್‌ಪಿಟ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸಹ, ಮಚ್ಚಾರ್ ಅವರು ಕಾಕ್‌ಪಿಟ್ ಬಾಗಿಲು ತೆರೆದರು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದಂತೆ, ಮೂಲಭೂತವಾದಿ ಇಸ್ಲಾಮಿಕ್ ಸಿದ್ಧಾಂತದಿಂದ ಪ್ರೇರಿತನಾಗಿದ್ದ ಒಮಾನ್ ಮೂಲದ ಸಹ-ಪೈಲಟ್ ಅನ್ನು ನಂತರ ಪ್ರಯಾಣಿಕರು ಮತ್ತು ಸಿಬ್ಬಂದಿ ಒಟ್ಟಾಗಿ ಬಗ್ಗುಬಡಿದರು. ಏತನ್ಮಧ್ಯೆ, ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಫ್ಲೈದುಬೈ ಪೈಲಟ್‌ಗಳು ಬೋಯಿಂಗ್ 737 ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ಸಹಾಯ ಮಾಡಿದರು. ಇಸ್ರೇಲ್ ಅಧಿಕಾರಿಗಳು ಉಲ್ಲೇಖಿಸಿದ ವರದಿಗಳ ಪ್ರಕಾರ, FZ1073 ವಿಮಾನದಲ್ಲಿ ಒಟ್ಟು 174 ಜನರಿದ್ದರು.
ಭಾರತೀಯ ಹೀರೋಗೆ ಪ್ರಶಂಸೆಗಳ ಮಹಾಪೂರ ಹರಿದುಬಂದಂತೆ, ಜನರು ಆ ಪೈಲಟ್ ಉಪನಾಮದ ಕಡೆಗೆ ಗಮನಹರಿಸಲಾರಂಭಿಸಿದರು. ನಾವು ಭಾರತೀಯರು ಹೀಗೆಯೇ, ನಾವು ಕುತೂಹಲಿಗಳು ಮತ್ತು ಜಿಜ್ಞಾಸೆಯುಳ್ಳವರು ಎಂದು ಪತ್ರಕರ್ತೆ ಶೀಲಾ ಭಟ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಕ್ಯಾಪ್ಟನ್ ಸ್ಮಿತ್ ಅವರ ಉಪನಾಮ ಏಕೆ ಮಚ್ಚಾರ್ ಎಂದು ನನ್ನ ವಾಟ್ಸಾಪ್ ಚಾಟ್‌ಗಳಲ್ಲಿ ಅನೇಕರು ಆಶ್ಚರ್ಯ ಪಡುತ್ತಿದ್ದಾರೆ. ಗುಜರಾತ್‌ನಲ್ಲಿ ಇದು ಅಪರೂಪವೇನಲ್ಲ ಎಂದಿರುವ ಭಟ್, ನಾಗರ್ ಸಮುದಾಯದಲ್ಲಿರುವ ಹಾತಿ, ಮಂಕಾಡ್ ಮತ್ತು ಮಂಕೋಡಿ ಮುಂತಾದ ಉಪನಾಮಗಳನ್ನು ಅವರು ಉಲ್ಲೇಖಿಸಿದರು ಮತ್ತು ಮಚ್ಚಾರ್ ಅನ್ನು ವಿಶಾಲವಾದ ಗುಜರಾತಿ ಹೆಸರಿಡುವ ಸಂಪ್ರದಾಯದೊಂದಿಗೆ ಜೋಡಿಸಿದರು.
ಮುಂಬೈ ಮೂಲದ ಪತ್ರಕರ್ತ-ಲೇಖಕ ಸೌರಭ್ ಶಾ ಮತ್ತೊಂದು ವಿವರಣೆಯನ್ನು ನೀಡಿದರು. ಭಗವದ್ ಗೋಮಂಡಲ್ ಕೋಶ್ ಎಂಬ ಬೃಹತ್ ಗುಜರಾತಿ ವಿಶ್ವಕೋಶ ನಿಘಂಟಿನ ಸಂಪುಟ 7, ಪುಟ 6873 ಅನ್ನು ಉಲ್ಲೇಖಿಸಿ, ಮಚ್ಚಾರ್‌ನ ಹಲವು ಅರ್ಥಗಳಲ್ಲಿ ಚೈತನ್ಯ ಅಥವಾ ಉತ್ಸಾಹ ಎಂಬುದು ಒಂದಾಗಿದೆ ಎಂದು ಸೌರಭ್ ಶಾ ಎಕ್ಸ್‌ನಲ್ಲಿ ಬರೆದಿದ್ದಾರೆ. ಮಚ್ಚಾರ್ ಎಂಬುದು ಗುಜರಾತಿ ನಾಗರ್ ಬ್ರಾಹ್ಮಣರೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದೆ ಎಂದು ಹೇಳಿದ ಶಾ, ಮಂಕಾಡ್, ಹಾತಿ, ಘೋಡಾ ಮತ್ತು ಮಂಕೋಡಿಗಳನ್ನು ಸಮುದಾಯದಲ್ಲಿ ಕಂಡುಬರುವ ಇತರ ಉಪನಾಮಗಳಾಗಿ ಉಲ್ಲೇಖಿಸಿದ್ದಾರೆ.
ಮುಂಬೈ ನಿವಾಸಿ ಅರ್ಜುನ್ ಮೋದಿ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಿಮ್ಮ ಉಪನಾಮ ಮಚ್ಚಾರ್ ಆಗಿದ್ದು ನೀವು ಭಾರತದಲ್ಲಿ ಬೆಳೆದಿದ್ದರೆ, ನಿಮ್ಮ ಜೀವನದುದ್ದಕ್ಕೂ ನೀವು ಬಹುಶಃ ಸೊಳ್ಳೆ ಜೋಕ್‌ಗಳನ್ನು ಕೇಳಿಯೇ ಇರುತ್ತೀರಿ, ಆದರೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅದನ್ನು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವನ್ನಾಗಿ ಪರಿವರ್ತಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಖಂಡಿತವಾಗಿಯೂ ಅರ್ಜುನ್ ಹೇಳಿದಂತೆ, ಸ್ಮಿತ್ ಮಚ್ಚಾರ್ ಅವರ ಶೌರ್ಯ ಮತ್ತು ಸಾಹಸಗಳು ಈಗ ಅಸ್ತಿತ್ವದಲ್ಲಿದ್ದ ಪ್ರದೇಶದ ಗಡಿಯನ್ನು ಮೀರಿ ಗುಜರಾತಿ ಉಪನಾಮಕ್ಕೆ ಹೊಸ ಮೆರುಗು ತಂದುಕೊಟ್ಟಿವೆ. ಮಚ್ಚಾರ್ ಅಂದರೆ ಅಕ್ಷರಶಃ ಸೊಳ್ಳೆ ಎಂದಿರಬಹುದು, ಆದರೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈಗ ತಮ್ಮ ಉಪನಾಮಕ್ಕೆ ಧೈರ್ಯದ ಗತ್ತು ತಂದುಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ(ಏಜೆನ್ಸೀಸ್).