40 ವರ್ಷಗಳ ಬಳಿಕ ಕೆನಡಾದ ಅಧಿಕೃತ ಒಪ್ಪಿಗೆ; Air India 'ಕನಿಷ್ಕ' ಸ್ಫೋಟದ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡ

 Air India
Air India
Published on
ಒಟ್ಟಾವಾ: 1985ರಲ್ಲಿ 329 ಮಂದಿಯನ್ನು ಬಲಿ ಪಡೆದ ಏರ್ ಇಂಡಿಯಾ(Air India) ಫ್ಲೈಟ್ 182 (ಕನಿಷ್ಕ) ವಿಮಾನ ಸ್ಫೋಟದ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂದು ಕೆನಡಾದ ಭದ್ರತಾ ಗುಪ್ತಚರ ಸಂಸ್ಥೆ (CSIS) ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಮೂಲಕ ಹಲವು ವರ್ಷಗಳಿಂದ ಭಾರತ ಪ್ರತಿಪಾದಿಸುತ್ತಿದ್ದ ನಿಲುವಿಗೆ ಕೆನಡಾದಿಂದಲೇ ಅಧಿಕೃತ ಬೆಂಬಲ ಸಿಕ್ಕಂತಾಗಿದೆ.

'ಕೆನಡಾದ ಇತಿಹಾಸದಲ್ಲೇ ಅತಿ ಭೀಕರ ಉಗ್ರ ದಾಳಿ'

ಜೂನ್ 23, 1985ರಂದು ಕೆನಡಾ ಮೂಲದ ಖಲಿಸ್ತಾನಿ ಉಗ್ರರು ವಿಮಾನದಲ್ಲಿ ಬಾಂಬ್ ಇರಿಸಿದ್ದರಿಂದ ಎಲ್ಲ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು ಎಂದು ಸಿಎಸ್‌ಐಎಸ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ. ಈ ದಾಳಿ ಕೆನಡಾದ ಇತಿಹಾಸದಲ್ಲೇ ಅತಿ ಭೀಕರ ಉಗ್ರ ದಾಳಿಯಾಗಿದ್ದು, ದೇಶದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಮಹತ್ವದ ತಿರುವು ನೀಡಿದ ಘಟನೆ ಎಂದು ಸಂಸ್ಥೆ ಹೇಳಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಕೂಡ ಈ ದಾಳಿಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಉಗ್ರ ದಾಳಿ ಎಂದು ಪುನರುಚ್ಚರಿಸಿದ್ದು, ಉಗ್ರವಾದವನ್ನು ಯಾವುದೇ ರೂಪದಲ್ಲೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಸ್ಫೋಟ ನಡೆದಿದ್ದು ಹೇಗೆ?

ಬೋಯಿಂಗ್ 747 ಮಾದರಿಯ 'ಎಂಪರರ್ ಕನಿಷ್ಕ' ಹೆಸರಿನ ಏರ್ ಇಂಡಿಯಾ ವಿಮಾನವು ಟೊರೊಂಟೊದಿಂದ ಮುಂಬೈಗೆ ಪ್ರಯಾಣಿಸುತ್ತಿತ್ತು. ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಸದಸ್ಯನೊಬ್ಬ ವಿಮಾನದ ಲಗೇಜ್ ವಿಭಾಗದಲ್ಲಿ ಬಾಂಬ್ ಇರಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಆತ ವಿಮಾನಕ್ಕೆ ಹತ್ತಿರಲಿಲ್ಲ. ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣ ತಲುಪಲು ಸುಮಾರು 45 ನಿಮಿಷ ಬಾಕಿ ಇರುವಾಗ ಮಧ್ಯಾಕಾಶದಲ್ಲೇ ಬಾಂಬ್ ಸ್ಫೋಟಗೊಂಡಿತ್ತು. ಈ ದುರಂತದಲ್ಲಿ 329 ಮಂದಿ ಸಾವನ್ನಪ್ಪಿದ್ದರು. ಆದರೆ ಅಟ್ಲಾಂಟಿಕ್ ಸಾಗರದಿಂದ ಕೇವಲ 131 ಮೃತದೇಹಗಳು ಮಾತ್ರ ಪತ್ತೆಯಾಗಿದ್ದವು.
ℹ️

ಭಾರತಕ್ಕೆ ಈ ಒಪ್ಪಿಗೆ ಏಕೆ ಮಹತ್ವದ್ದು?

ಈ ದಾಳಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆದೇಶದ 'ಆಪರೇಷನ್ ಬ್ಲೂಸ್ಟಾರ್'ಗೆ ಪ್ರತೀಕಾರವಾಗಿ ನಡೆಸಲಾಗಿತ್ತು ಎಂದು ಆಗ ತನಿಖೆಯಲ್ಲಿ ಹೇಳಲಾಗಿತ್ತು. 2010ರಲ್ಲಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೇಜರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ತನಿಖೆಯಲ್ಲಿ, ತನಿಖಾ ಸಂಸ್ಥೆಗಳ ಹಲವು ವೈಫಲ್ಯಗಳಿಂದ ಪ್ರಕರಣದ ತನಿಖೆಗೆ ಹಿನ್ನಡೆಯಾಯಿತು ಎಂದು ವರದಿ ಹೇಳಿತ್ತು. ಅಲ್ಲದೆ, ಇದನ್ನು 'ಭಾರತದ ಸಮಸ್ಯೆ' ಎಂದು ಪರಿಗಣಿಸಿದ್ದರಿಂದ ಸೂಕ್ತ ಗಂಭೀರತೆ ನೀಡಲಾಗಲಿಲ್ಲ ಎಂಬುದೂ ಬಹಿರಂಗವಾಗಿತ್ತು.
ಅದೇ ವರ್ಷ ಅಂದಿನ ಪ್ರಧಾನಿ ಸ್ಟೀಫನ್ ಹಾರ್ಪರ್, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಬಳಿ ಕೆನಡಾ ಸರ್ಕಾರದ ಪರವಾಗಿ ಅಧಿಕೃತವಾಗಿ ಕ್ಷಮೆ ಯಾಚಿಸಿದ್ದರು. ಜೂನ್ 23 ಅನ್ನು ಉಗ್ರವಾದದ ಸಂತ್ರಸ್ತರ ರಾಷ್ಟ್ರೀಯ ಸ್ಮರಣಾ ದಿನವನ್ನಾಗಿ ಕೆನಡಾ ಘೋಷಿಸಿದೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net