ಹಣ ವಿದೇಶಿಯಾದ ಮಾತ್ರಕ್ಕೆ ದೇಶವಿರೋಧಿಯಾಗಬಹುದೇ?

money
money
Published on
ಮೇ ತಿಂಗಳಲ್ಲಿ ಮತ್ತು ಜೂನ್​ನಲ್ಲಿ ಇಲ್ಲಿಯವರೆಗೆ ಭಾರತದಲ್ಲಿ ಅಕ್ಷರಶಃ ಡಿಪ್ಲೊಮ್ಯಾಟಿಕ್ ಟ್ರಾಫಿಕ್ ಜಾಮ್ ವಿಯೆಟ್ನಾಂ, ಲಾವೋಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಮ್ಯಾನ್ಮಾರ್, ನೇಪಾಳ, ವೆನೆಜುವೆಲಾ, ಬ್ರಿಟನ್ ರಾಷ್ಟ್ರಗಳ ಉನ್ನತ ರಾಜಕೀಯ ನೇತಾರರು ಒಬ್ಬರ ಹಿಂದೊಬ್ಬರು ಇಲ್ಲಿಗೆ ಬಂದರು; ಅದು ಸಾಲದು ಎಂಬಂತೆ ಕ್ವಾಡ್ ಮತ್ತು ಬ್ರಿಕ್ಸ್ ದೇಶಗಳ ವಿದೇಶಮಂತ್ರಿಗಳ ಸಮಾವೇಶಗಳು ಬೇರೆ! ಅವೆಲ್ಲವುಗಳ ನಡುವೆ ಸಮಯ ಹೊಂದಿಸಿಕೊಂಡು ವಿದೇಶಮಂತ್ರಿ ಎಸ್. ಜೈಶಂಕರ್ ಜಮೈಕಾ, ಟ್ರಿನಿಡಾಡ್, ಟೊಬಾಗೋಕ್ಕೂ; ಪ್ರಧಾನಿ ನರೇಂದ್ರ ಮೋದಿ ಯುಎಇ, ನೆದರ್​ಲ್ಯಾಂಡ್ಸ್, ನಾರ್ವೆ, ಸ್ವೀಡನ್, ಇಟಲಿಗೆ ಹೋಗಿಬಂದರು; ಈಗಲೂ ಫ್ರಾನ್ಸ್ ಮತ್ತು ಸ್ಲೊವಾಕಿಯಾ ಪ್ರವಾಸದಲ್ಲಿದ್ದಾರೆ.

ಈ ಎಲ್ಲ ವಿದೇಶಿ ಗಣ್ಯರಲ್ಲಿ ಇಂದಿನ ನಮ್ಮ ವಿಶ್ಲೇಷಣೆಗಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ ಮತ್ತು ಮ್ಯಾನ್ಮಾರ್​ನ ಅಧ್ಯಕ್ಷ ಉ ಮಿನ್ ಆಂಗ್ ಹ್ಲೈಂಗ್ ಅವರ ಭೇಟಿಗಳನ್ನಷ್ಟೇ ಗಮನಿಸೋಣ. ಅವರಿಬ್ಬರೂ ತಂತಮ್ಮ ಭಾರತ-ಭೇಟಿಯ ಮೊದಲ ಹೆಜ್ಜೆಗೆ ಆಯ್ಕೆ ಮಾಡಿಕೊಂಡ ಸ್ಥಳಗಳು ಕುತೂಹಲಕರ.
ಸೇನಾ ಶಾಸಕನ ಸ್ಥಾನದಿಂದ ಇದೇ ಜನವರಿಯಲ್ಲಿ ಚುನಾಯಿತ ಅಧ್ಯಕ್ಷರ ಸ್ಥಾನಕ್ಕೇರಿದ ನಂತರ ತಮ್ಮ ಮೊದಲ ವಿದೇಶಯಾತ್ರೆಗೆ ಅಧ್ಯಕ್ಷ ಹ್ಲೈಂಗ್ ಆಯ್ಕೆ ಮಾಡಿಕೊಂಡದ್ದು ಭಾರತವನ್ನು. ಉತ್ತರ ಮ್ಯಾನ್ಮಾರ್​ನ ಕಾಚಿನ್ ರಾಜ್ಯದ ದುರ್ಲಭ ಖನಿಜ ಸಂಪತ್ತಿನ ಮೇಲಿದ್ದ ಚೀನಿ ಹಿಡಿತವನ್ನು ಸಡಿಲಿಸಿ ಭಾರತ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವ ಹಾಗೂ ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪದ ಮೂಲಕ ಅಲ್ಲಿಗೆ ದಾರಿ ಮಾಡಿಕೊಳ್ಳುವ ಕನಸು ಕಂಡು ಈಗ ಕೈಗೆ ಬಂದ ತುತ್ತು ಬಾಯಿಗಿಲ್ಲವಾಯಿತಲ್ಲ ಎಂದು ಅಮೆರಿಕ ಹಳಹಳಿಸುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಬಂದ ಅವರು ಮೊದಲಿಗೆ ಬೋಧ್​ಗಯಾಗೆ ಹೋದರು. ಬೌದ್ಧರಾಗಿ ಪವಿತ್ರ ಕ್ಷೇತ್ರ ಬೋಧ್​ಗಯಾಗೆ ಹೋದದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆಮೇಲೆ ದೆಹಲಿಗೆ ಆಗಮಿಸಿ ತಾವು ಯಾವ ಮಹತ್ವದ ಕೆಲಸಕ್ಕಾಗಿ ಭಾರತಕ್ಕೆ ಬಂದರೋ ಅದರತ್ತ ಗಮನ ಕೊಟ್ಟರು, ಭಾರತದ ಹಿತಾಸಕ್ತಿಗಳಿಗೆ ಹಾನಿಯಾಗುವಂತಹ ಚಟುವಟಿಕೆಗಳಿಗೆ ತಮ್ಮ ದೇಶದ ನೆಲ ಬಳಕೆಯಾಗುವುದಿಲ್ಲ ಎಂದೂ ಘೊಷಿಸಿದರು ಬಿಡಿ.
ಆದರೆ ಮೇ 26ಕ್ಕೆ ನಿಗದಿಯಾಗಿದ್ದ ಕ್ವಾಡ್ ಸಮಾವೇಶಕ್ಕಾಗಿ ಮೂರು ದಿನ ಮೊದಲೇ ಭಾರತಕ್ಕೆ ಬಂದ ಕಾರ್ಯದರ್ಶಿ ರೂಬಿಯೋ ಮೊದಲಿಗೆ ಕೋಲ್ಕತಾಗೆ ಹೋಗಲು ಇದ್ದ ಕಾರಣವಾದರೂ ಏನು? ಅದು ಧಾರ್ವಿುಕ ಕಾರಣವಾಗಿದ್ದರೆ ಅವರು ಐತಿಹಾಸಿಕ ಸೇಂಟ್ ಪಾಲ್ ಕೆಥೆಡ್ರಲ್​ಗೆ ಹೋಗಬಹುದಾಗಿತ್ತು. ಆದರೆ ಅವರು ಹೋದದ್ದು ಮಿಷನರೀಸ್ ಆಫ್ ಚಾರಿಟೀಸ್​ಗೆ! ಅಲ್ಲೇನೂ ಧಾರ್ವಿುಕ ಕಾರಣ ಇಲ್ಲ. ಅಥವಾ ನಿಜವಾಗಿಯೂ ಇಲ್ಲವೇ? ಈ ಅನುಮಾನ ಮೂಡುವುದು ರೂಬಿಯೋರ ಭೇಟಿಯ ಹಿಂದಿನ ಬೆಳವಣಿಗೆಗಳು ಮತ್ತು ಮುಂದೆ ಆಗಲಿರುವ ಬೆಳವಣಿಗೆಗಳನ್ನು ಗಮನಿಸಿದಾಗ.
ಮದರ್ ಥೆರೆಸಾ ಸ್ಥಾಪಿಸಿ ಬೆಳೆಸಿದ ಮಿಷನರೀಸ್ ಆಫ್ ಚಾರಿಟೀಸ್​ನ ದೀನರ ಸೇವೆ ಸರ್ವವಿದಿತ. ಅದಕ್ಕಾಗಿ ಆ ಸಂಸ್ಥೆ ಭಾರತದಲ್ಲಿ ಗೌರವ ಹಾಗೂ ಪ್ರೀತಿಗೆ ಭಾಜನವಾಗಿದೆ. ಆದರೆ ಆ ಸಂಸ್ಥೆಯ, ಅಷ್ಟೇಕೆ, ಖುದ್ದು ಮದರ್ ಥೆರೆಸಾರ ಮತಾಂತರ ಕಾರ್ಯಯೋಜನೆಗಳೂ ಸರ್ವವಿದಿತವೇ ಮತ್ತು ಅದು ಈ ದೇಶದಲ್ಲಿ ಅಸಮ್ಮತಿ, ಆಕ್ಷೇಪ, ತಿರಸ್ಕಾರಕ್ಕೆ ಒಳಗಾಗಿರುವುದೂ ಅಷ್ಟೇ ನಿಜ. ಈ ಸಂಸ್ಥೆ ನೇರವಾಗಿ ಸಂಪರ್ಕ ಹೊಂದಿರುವುದು ವ್ಯಾಟಿಕನ್​ನೊಂದಿಗೆ ಮತ್ತು ವ್ಯಾಟಿಕನ್ ಸಂಬಂಧ ಹೊಂದಿರುವುದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಜತೆ. ಸಿಐಎ ಅಮೆರಿಕದ ಜಾಗತಿಕ ಯಜಮಾನಿಕೆ ಕುಸಿಯದಂತೆ ನಿರಂತರವಾಗಿ ಕಾಯುವ ಡೀಪ್ ಸ್ಟೇಟ್ ಅಂದರೆ ಕಣ್ಣಿಗೆ ಕಾಣುವ ಶ್ವೇತಭವನದ ಹಿಂದೆ ಕತ್ತಲಲ್ಲಿ ನಿಂತಿರುವ ಬಲಿಷ್ಠ ಹಾಗೂ ಕರಾಳ ಕಪ್ಪು ಶಕ್ತಿಯ ಉದ್ದನೆಯ ಕೈ! ಇನ್ನೂ ಮುಂದಕ್ಕೆ ಹೋಗುವುದಾದರೆ ಡೀಪ್ ಸ್ಟೇಟ್ ಕಾರ್ಯ ನಿರ್ವಹಿಸುವುದು ಜಗತ್ತಿನ ಮೇಲೆ ಪಶ್ಚಿಮದ ಆರ್ಥಿಕ, ಸಾಮರಿಕ ಹಾಗೂ ಅಂತಿಮವಾಗಿ ಧಾರ್ವಿುಕ ಹಿಡಿತವನ್ನು ಕಾಯ್ದಿರಿಸಿಕೊಳ್ಳಲು ಶತಮಾನದಿಂದಲೂ ಕಂಕಣಬದ್ಧವಾಗಿರುವ ಯೂರೋಪ್​ನ ಕ್ರೌನ್ ಕೌನ್ಸಿಲ್ ಎಂಬ ಪೆಡಂಭೂತದ ಲೆಕ್ಕಾಚಾರಗಳಿಗನುಗುಣವಾಗಿ. ಅಂದರೆ ಕೋಲ್ಕತಾದ ಸಂಬಂಧ ಎಲ್ಲಿಯವರೆಗೆ ಹರಡಿದೆ ಎಂಬುದನ್ನು ಲೆಕ್ಕಹಾಕಿ. ದೀನರ ಸೇವೆ ಅಂದರೆ ದೇವರ ಸೇವೆಯಂತೆ!
ಹೀಗೆ ತನಗೆ ಸೇವೆ ನಿತ್ಯವೂ ಸಾಂಗವಾಗಿ ನಡೆಯಬೇಕೆಂದು ದೇವರು ಕಾಲಧರ್ಮಕ್ಕನುಗುಣವಾಗಿ ದೂತರನ್ನು ಸೃಷ್ಟಿಸಿಕೊಳ್ಳುತ್ತಾನಂತೆ. ಈ ದಿನದ ಅಂತಹ ಒಬ್ಬ ದೂತ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿರುವ ಮಾಕೋ ರೂಬಿಯೋ ಆಗಿರುವಂತೆ ಕಾಣುತ್ತದೆ. ದೀನರ ಸೇವೆಗೈಯುವವರೇ ದೀನಾವಸ್ಥೆಗೆ ತಲುಪಿದಾಗ ದೇವರ ದೂತ ಬರಲೇಬೇಕು. ಇದು ನಿಯಮ.
ಭಾರತದಲ್ಲಿ ಮತಾಂತರಕ್ಕಾಗಿಯೇ ಲೆಕ್ಕವಿಲ್ಲದಷ್ಟು ಎನ್​ಜಿಓಗಳು ಹುಟ್ಟಿಕೊಂಡಿವೆ. ಅವೆಲ್ಲಕ್ಕೂ ಹಣ ವಿದೇಶಗಳಿಂದ ಮುಖ್ಯವಾಗಿ ಅಮೆರಿಕ ಮತ್ತು ಸ್ಕಾ್ಯಂಡಿನೇವಿಯನ್ ದೇಶಗಳಿಂದ ನೇರವಾಗಿ ಅಥವಾ ವ್ಯಾಟಿಕನ್ ಮೂಲಕ ಬರುತ್ತದೆಂದು ಸುದ್ದಿ. ಆ ಹಣದಿಂದ ಮತಾಂತರಿಗಳು ಮತಾಂತರದೊಂದಿಗೆ ಐಷಾರಾಮಿ ಬದುಕನ್ನೂ ನಡೆಸುತ್ತಿದ್ದುದಕ್ಕೆ ಕಡಿವಾಣ ಬಿದ್ದದ್ದು 2020ರ ಸೆಪ್ಟೆಂಬರ್​ನಲ್ಲಿ, ಕೇಂದ್ರ ಸರ್ಕಾರ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಗೆ (ಫೆರಾ) ಕೆಲವು ಬದಲಾವಣೆಗಳನ್ನು ತಂದಾಗ. ಆಗ ದೀನರ ಸೇವೆ, ಪರಿಸರ ಕಾಳಜಿ, ಮಾನವಹಕ್ಕುಗಳ ರಕ್ಷಣೆ ಎಂಬ ಉದಾತ್ತ ಹೆಸರುಗಳಲ್ಲಿ ವಿದೇಶಗಳಿಂದ ಹಣ ತೆಗೆದುಕೊಂಡು ಅದನ್ನು ಮತಾಂತರಕ್ಕೆ, ದೇಶವಿರೋಧಿ ಹಾಗೂ ಅಭಿವೃದ್ಧಿವಿರೋಧಿ ಕಾರ್ಯಯೋಜನೆಗಳಿಗೆ ಬಳಸುವುದು ಕಷ್ಟಕರವಾಯಿತು. 
ವಿದೇಶಿ ಹಣ ಯಾವ ಕೆಲಸಕ್ಕೆಂದು ಈ ದೇಶಕ್ಕೆ ಬರುತ್ತದೋ ಅದಕ್ಕಾಗಿಯೇ ಬಳಕೆಯಾಗಬೇಕು, ನಿಯಮಿತವಾಗಿ ಲೆಕ್ಕಪತ್ರಗಳು ಸಲ್ಲಿಕೆಯಾಗಬೇಕು, ಎನ್​ಜಿಓ ಮುಖ್ಯಸ್ಥರು ಹಿಂದಿನಂತೆ ವಿದೇಶಿ ಹಣದ ಅರ್ಧದಷ್ಟನ್ನು ತಮ್ಮ ಸಂಬಳ ಹಾಗೂ ಭತ್ಯೆಗಳಿಗೆಂದು ಬಳಸಿಕೊಳ್ಳುವ ಹಾಗಿಲ್ಲ, ಕೇವಲ ಶೇ. 20ನ್ನು ಮಾತ್ರ ಬಳಸಿಕೊಳ್ಳಬೇಕು ಎಂಬಂತಹ ಹೊಸ ನಿಯಮಗಳು ಸಹಜವಾಗಿಯೇ ಹಲವರ ಕೈಗಳನ್ನು ಕಟ್ಟಿಹಾಕಿದವು. ಹಲವು ಎನ್​ಜಿಓಗಳು ಕಚೇರಿ ಬಂದ್ ಮಾಡಿಕೊಂಡು ಎತ್ತಲೋ ಮಾಯವಾದದ್ದೂ ಆಯಿತು. ಆದರೆ ಕೆಲವು ಎನ್​ಜಿಓಗಳು ರಂಗೋಲಿ ಕೆಳಗೆ ತೂರಿದವು. ಅಂತಹದನ್ನು ತಡೆಯುವ ಉದ್ದೇಶದಿಂದಲೇ ಈಗ ಅದೇ ಫೆರಾ ನಿಯಮಗಳಿಗೆ ಕೇಂದ್ರ ಸರ್ಕಾರ ಇನ್ನಷ್ಟು ಬದಲಾವಣೆಗಳನ್ನು ತರಲಿದೆ. ಆ ಪ್ರಕಾರ ಈ ವರ್ಷದ ಡಿಸೆಂಬರ್ ನಂತರ ಹಲವು ಎನ್​ಜಿಓಗಳು ಮತ್ತು ವಿದೇಶಿ ಹಣದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ವಿದೇಶಿ ಹಣ ಬರುವುದೇ ನಿಂತುಹೋಗಬಹುದು. ಇಂತಹ ನಕಾರಾತ್ಮಕ ಭವಿಷ್ಯವನ್ನು ಎದುರಿಸುತ್ತಿರುವ ಸಂಸ್ಥೆಗಳಲ್ಲಿ ಮಿಷನರೀಸ್ ಆಫ್ ಚಾರಿಟಿಯೂ ಒಂದು ಎಂದು ಸುದ್ದಿಯಾಗುತ್ತಿದೆ. ಕಾರ್ಯದರ್ಶಿ ರೂಬಿಯೋ ತಮ್ಮ ಭಾರತ ಭೇಟಿಯ ಮೊದಲ ದಿನ ಅಲ್ಲಿಗೆ ಭೇಟಿ ನೀಡಿದ್ದಾರೆ.
ಈ ನಡುವೆ ಮತಾಂತರಿ ಸಂಸ್ಥೆಗಳು ರಂಗೋಲಿ ಕೆಳಗೆ ತೂರುವ ಪ್ರಯತ್ನವೊಂದು ಬಯಲಾಗಿದೆ. ಇದೇ ಏಪ್ರಿಲ್​ನಲ್ಲಿ ಅಮೆರಿಕದ ನಾಗರಿಕರೊಬ್ಬರು ಬೆಂಗಳೂರು ವಿಮಾನನಿಲ್ದಾಣದಲ್ಲಿ ಡೆಬಿಟ್ ಕಾರ್ಡ್​ಗಳ ಪೊಟ್ಟಣದೊಂದಿಗೆ ಸಿಕ್ಕಿಬಿದ್ದರು. ಆ ಕಾರ್ಡ್​ಗಳನ್ನು ಭಾರತದಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಅಮೆರಿಕದ ಬ್ಯಾಂಕ್​ಗಳು ಇಶ್ಯೂ ಮಾಡಿದ್ದವು. ಅವುಗಳನ್ನು ಬಳಸಿ ಆ ವ್ಯಕ್ತಿಗಳು ಎಟಿಎಂಗಳಿಂದ ಹಣ ತೆಗೆಯಬಹುದಾಗಿದ್ದ ನಿಯಮಾವಳಿ ರೂಪಿಸಲಾಗಿತ್ತು. ವಿದೇಶಿ ಹಣ ಸ್ಟೇಟ್ ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಅಥವಾ ಇಂಡಿಯಾದಲ್ಲಿ ತೆರೆಯಲಾದ ಖಾತೆಗಳಿಗೇ ಬರಬೇಕು, ಅದು ನಿಯಮಾನುಸಾರವೇ ಬಳಕೆಯಾಗಬೇಕು ಎಂಬ ಫೆರಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲು ಕೆಲವರು ಹೂಡಿದ ರಂಗೋಲಿ ಕೆಳಗೆ ತೂರುವ ಪ್ರಯತ್ನವೇ ಇದು. 
ಆ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಮನಕ್ಕೆ ಬಾರದಂತೆ, ಸರ್ಕಾರದ ನಿಯಮಗಳಿಗೂ ಬದ್ಧವಾಗದಂತೆ ವಿದೇಶಿ ಹಣ ಇಲ್ಲಿಗೆ ಬರುತ್ತಿತ್ತು, ಮತಾಂತರ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತಿತ್ತು. ಹಾಗೆ ಅಮೆರಿಕನ್ ಬ್ಯಾಂಕ್​ಗಳ ಡೆಬಿಟ್ ಕಾರ್ಡ್​ಗಳನ್ನು ಬಳಸಿ ಇಲ್ಲಿ ಎಟಿಎಂಗಳಲ್ಲಿ ಹಣ ತೆಗೆದ ಆರೋಪದ ಮೇಲೆ ಆರು ವ್ಯಕ್ತಿಗಳು ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಬಂಧಿತರಾಗಿದ್ದಾರೆ. ವಿದೇಶಿ ಹಣ ಹೀಗೆ ಸರ್ಕಾರದ ಗಮನಕ್ಕೆ ಬಾರದೇ ದೇಶದೊಳಗೆ ಬಂದು ಬಳಕೆಯಾಗುತ್ತಿರುವುದು ಕೇವಲ ಮತಾಂತರಕ್ಕೆ ಮಾತ್ರವೇ ಅಥವಾ ದೇಶವಿರೋಧಿ ಕೃತ್ಯಗಳಿಗಾಗಿಯೇ ಎನ್ನುವುದು ಪತ್ತೆಯಾಗಬೇಕಾಗಿದೆ. ಅಂತಹ ಪ್ರಯತ್ನಗಳ ಸುಳಿವು ಕೇಂದ್ರ ಸರ್ಕಾರಕ್ಕೆ ಸಿಕ್ಕಿರಲೂಬಹುದು, ಅದರಿಂದಾಗಿಯೇ ಫೆರಾ ಕಾಯ್ದೆಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಹೊರಟಿರಬೇಕು. ಹಿಂದೆ ಹೀಗೆ ವಿದೇಶಿ ಹಣದಿಂದ ದೇಶವಿರೋಧಿ ಕೃತ್ಯಗಳನ್ನೆಸಗುವುದು ಬಹಿರಂಗವಾಗಿಯೇ ನಡೆಯುತ್ತಿತ್ತು. 2011-12ರಲ್ಲಿ ಕೆಲವು ಧಾರ್ವಿುಕ ಎನ್​ಜಿಓಗಳು ಸ್ಕಾ್ಯಂಡಿನೇವಿಯನ್ ದೇಶಗಳಿಂದ ಹಣ ಪಡೆದು ಬಳಸಿದ್ದು ತಮಿಳುನಾಡಿನ ಕೂಡಂಕುಳಂನಲ್ಲಿ ರಷ್ಯನ್ ತಂತ್ರಜ್ಞಾನದಿಂದ ನಿರ್ವಣವಾಗುತ್ತಿದ್ದ ಅಣುಸ್ಥಾವರದ ವಿರುದ್ಧ ಪರಿಸರ ಕಾಳಜಿಯ ನೆಪವೆತ್ತಿ ವಿರೋಧಿಸಿದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಮಾಮೂಲಿನ ಸೌಮ್ಯ ಸ್ವಭಾವವನ್ನು (ಮೌನವನ್ನು!) ಬದಿಗೊತ್ತಿ ಕಿಡಿ ಕಾರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 
ನಂತರ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಕಾಶ್ಮೀರದ ವಿಷಯವನ್ನೆತ್ತಿಕೊಂಡು ಮಾನವಹಕ್ಕುಗಳ ನೆಪವೆತ್ತಿಕೊಂಡು ಭಾರತ ಸರ್ಕಾರ ಮತ್ತು ಭಾರತೀಯ ಸೇನೆಯ ವಿರುದ್ಧ ಕೆಲಸ ಮಾಡಿದ್ದೂ ನಡೆಯಿತು. ನಂತರ ಫೆರಾ ಕಾಯ್ದೆಗೆ ಆದ ಬದಲಾವಣೆಗಳಿಂದಾಗಿ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಭಾರತದಿಂದ ಹೊರಹೋಗುವಂತಾದದ್ದು ಈಗ ಇತಿಹಾಸ. ಅಮ್ನೆಸ್ಟಿಯ ಭಾರತ ವಿಭಾಗದ ಮುಖ್ಯಸ್ಥರಾಗಿದ್ದ ಆಕಾರ್ ಪಟೇಲ್ ಈಗೆಲ್ಲಿದ್ದಾರೋ. ಎರಡು ದಶಕಗಳಿಗೂ ಹಿಂದೆ ಎಡಿಟರ್ಸ್ ಗಿಲ್ಡ್​ನ ಮುಖ್ಯ ಸ್ಥಾನದಲ್ಲಿದ್ದಾಗಿನಿಂದಲೂ ನರೇಂದ್ರ ಮೋದಿಯವರ ವಿರುದ್ಧ ಕತ್ತಿ ಮಸೆಯುತ್ತ, ಅಮ್ನೆಸ್ಟಿ ಇಂಟರ್​ನ್ಯಾಷನಲ್​ನ ಭಾರತ ವಿಭಾಗದ ಮುಖ್ಯಸ್ಥರಾದ ಮೇಲೆ ಅದೇ ಸ್ವಭಾವವನ್ನು ಭಾರತದ ವಿರುದ್ಧವಾಗಿ ಬೆಳೆಸಿಕೊಂಡ ಆಕಾರ್ ಪಟೇಲ್ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಆಪ್ತರಾಗಿದ್ದ ಅಹ್ಮದ್ ಪಟೇಲ್ ಅವರ ಮಗ ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬಹುದಾದ ವಿಷಯ.
ಈಗ ಫೆರಾ ಕಾಯ್ದೆಯಲ್ಲಾಗುವ ಮಾರ್ಪಾಡುಗಳಿಂದಾಗಿ ಹಣದ ಕೊರತೆ ಅನುಭವಿಸಲಿರುವ, ಅಂದರೆ ತನ್ನ ಮತಾಂತರ ಚಟುವಟಿಕೆಗಳು ಬಾಧೆಗೊಳಗಾಗುವ ಅಪಾಯ ಎದುರಿಸುತ್ತಿರುವ ಮಿಷನರೀಸ್ ಆಫ್ ಚಾರಿಟಿಗೆ ಕಾರ್ಯದರ್ಶಿ ರೂಬಿಯೋ ಭೇಟಿ ನೀಡಿದ್ದು ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ. ಆ ಸಂಸ್ಥೆಗೆ ಸಹಾಯವಾಗುವಂತಹ ಆಶ್ವಾಸನೆಗಳು ಅವರಿಂದ ಬಂದಿವೆಯೇ, ಅದರಿಂದಾಗಿ ಮಿಷನರೀಸ್ ಆಫ್ ಚಾರಿಟಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದೇ ಎನ್ನುವುದನ್ನು ಈ ದೇಶ ತಿಳಿಯಬೇಕಾಗಿದೆ.
ಕಾರ್ಯದರ್ಶಿ ರೂಬಿಯೋರ ಭೇಟಿಗೆ 2 ದಿನ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತಾದ ಆ ಸಂಸ್ಥೆಗೆ ಭೇಟಿ ನೀಡಿದ್ದರು ಎಂಬ ಸುದ್ದಿ ಇದೆ. ಅದರ ಹಿಂದುಮುಂದಿನ ಕಥೆಯೇನು ಎನ್ನುವುದು ಪ್ರತ್ಯೇಕ ಆದರೆ ಪೂರಕ ವಿಶ್ಲೇಷಣೆಯ ವಿಷಯ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net