ದೆಹಲಿಯ ಕೆಮ್ಮಿಗೆ ಚೀನೀ ಕಷಾಯ ಮದ್ದಾಗಬಲ್ಲದೇ?

ದೆಹಲಿಯ ಕೆಮ್ಮಿಗೆ ಚೀನೀ ಕಷಾಯ ಮದ್ದಾಗಬಲ್ಲದೇ?
ದೆಹಲಿಯ ಕೆಮ್ಮಿಗೆ ಚೀನೀ ಕಷಾಯ ಮದ್ದಾಗಬಲ್ಲದೇ?
Published on
ದೆಹಲಿಯ ವಾಯುಮಾಲಿನ್ಯದ ಕುರಿತಾದ ಚರ್ಚೆ, ಆರೋಪ&ಪ್ರತ್ಯಾರೋಪ ಇತ್ತೀಚೆಗೆ ಮುಗಿಲುಮುಟ್ಟಿವೆ. ಈ ಬಾರಿಯ ಅಕ್ಟೋಬರ್​ನಲ್ಲಿ ಆಗಾಗ ಮಳೆಯ ಜತೆಗೆ ಕಳೆದ 3 ವರ್ಷಗಳ ಕನಿಷ್ಠ ತಾಪಮಾನ ದಾಖಲಾದರೂ, ರಾಷ್ಟ್ರರಾಜಧಾನಿ ಕಳೆದ 5 ವರ್ಷಗಳ 2ನೇ ಅತಿ ಕಳಪೆ ವಾಯುಗುಣಮಟ್ಟವನ್ನು ಕಂಡಿದೆ. ವಾಯುಮಾಲಿನ್ಯ ಇತ್ತೀಚಿನ ಕೆಲವರ್ಷಗಳಿಂದ ದೆಹಲಿಯ ಚುನಾವಣೆಯ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ.
ಆಡಳಿತ&ವಿರೋಧಪಗಳ ನಡುವೆ ಹಗ್ಗಜಗ್ಗಾಟ, ಕೆಸರೆರಚಾಟ ನಡೆಯುವುದು ಬಿಟ್ಟರೆ ಈ ಸಮಸ್ಯೆಯ ಪರಿಹಾರ ಮರೀಚಿಕೆಯಾಗಿದೆ. ಪ್ರತಿ ವರ್ಷ ದೆಹಲಿಗರು ದಟ್ಟ ಹೊಗೆಯಲ್ಲಿ ಮುಳುಗೇಳುವುದು ಮಾಮೂಲಾಗಿದೆ. ದೆಹಲಿ ವಾಯುಮಾಲಿನ್ಯದ ಮೂಲಕಾರಣಗಳು ಯಾರಿಗೂ ಗೊತ್ತಿಲ್ಲದ್ದೇನಲ್ಲ. ಪಕ್ಕದ ರಾಜ್ಯಗಳಾದ ಹರಿಯಾಣ ಮತ್ತು ಉತ್ತರಪ್ರದೇಶದ ರೈತರು ಪ್ರತಿವರ್ಷ ಕೊಯ್ಲಿನ ನಂತರ, ಅಂದರೆ ಅಕ್ಟೋಬರ್​ನಲ್ಲಿ ಒಣಗಿದ ಪೈರನ್ನು ನಾಶಪಡಿಸಲು ಸುಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಪ್ರತಿವರ್ಷ ಸುಡುವ ಪೈರಿನ ಪ್ರಮಾಣ 35 ಕೋಟಿ ಟನ್​! ಅದರಿಂದ ಹೊಮ್ಮುವ ಹೊಗೆ ಮತ್ತದರೊಳಗಿನ ಅಪಾಯಕಾರಿ ಅನಿಲಗಳ ಜತೆಗೆ ತೇಲುವ ಸೂ ್ಮಕಣಗಳು ದೆಹಲಿಯನ್ನು ಸುತ್ತುವರಿಯುತ್ತವೆ. ಅದಲ್ಲದೆ ದೇಶದಲ್ಲಿ ಅತಿಹೆಚ್ಚು ವಾಹನಗಳನ್ನು ಹೊಂದಿರುವ ನಗರವಿದು. ವಾಹನಗಳ ಹೊಗೆ, ಚಳಿಗಾಲ ಎಂಟ್ರಿ ಕೊಡುತ್ತಿದ್ದಂತೆಯೇ ಸ್ತಬ್ಧವಾಗುವ ಬೀಸುವ ಗಾಳಿ ಹಾಗೂ ಇದೇ ಸಮಯಕ್ಕೆ ಬರುವ ದೀಪಾವಳಿಯಲ್ಲಿ ಆರ್ಭಟಿಸುವ ಪಟಾಕಿಗಳ ಹೊಗೆ ಹೀಗೆ ಎಲ್ಲವೂ ಸೇರಿ ದೆಹಲಿಯಲ್ಲಿ ಉಸಿರಾಡಲೂ ಕಷ್ಟವೆನಿಸುವಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ.
ಭಾರತದಲ್ಲಿ ವಾತಾವರಣದಲ್ಲಿನ ವಾಯುವಿನ ಗುಣಮಟ್ಟವನ್ನು ಅಳೆಯಲು ಏರ್​ ಕ್ವಾಲಿಟಿ ಇಂಡೆಕ್ಸ್​ (ಎಕ್ಯೂಐ) ಬಳಸುತ್ತಾರೆ. ಇದಕ್ಕಾಗಿ ದೇಶಾದ್ಯಂತ 1300 ಮಾಪನ ಕೇಂದ್ರಗಳಿವೆ. ಇವುಗಳಲ್ಲಿ ಎರಡು ಬಗೆ. ಮೊದಲನೆಯದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದರೆ ಎರಡನೆಯದು ಪ್ರತಿ 8 ಗಂಟೆಗಳಿಗೊಮ್ಮೆ ಗಾಳಿಯ ಮಾದರಿ ತೆಗೆದುಕೊಂಡು ಪರೀಸುತ್ತದೆ. ಮೊದಲ ಬಗೆಯ 900 ಕೇಂದ್ರಗಳಿದ್ದು, ಉಳಿದವು ಎರಡನೇ ಬಗೆಯವು. ಮಾಪನ ಕೇಂದ್ರಗಳಲ್ಲಿ ವಾತಾವರಣದಿಂದ ಒಳಗೆಳೆದುಕೊಂಡ ಗಾಳಿಯ ಮಾದರಿಯನ್ನು ಸಂವೇದಕಗಳ ಮೂಲಕ ಹಾಯಿಸಲಾಗುತ್ತದೆ. ಆ ಸಂವೇದಕಗಳು ಗಾಳಿಯಲ್ಲಿರುವ ಇಂಗಾಲದ ಮೊನಾಕ್ಸೆಡ್​, ನೈಟ್ರೋಜನ್​ ಡೈಆಕ್ಸೆಡ್​, ಸಲ್ಫರ್​ ಡೈಆಕ್ಸೆಡ್​ ಮತ್ತು ತೇಲಾಡುವ ಕಲ್ಮಶ ಅರ್ಥಾತ್​ ಧೂಳಿನ ಪ್ರಮಾಣವನ್ನು ಅಳೆಯುತ್ತವೆ. ಸಂವೇದಕಗಳಲ್ಲಿ ಸಾಮಾನ್ಯವಾಗಿ ಎರಡು ಬಗೆ. ಬೀಟಾ ಅಟೆನ್ಯುವೇಷನ್​ ತಂತ್ರಜ್ಞಾನ ಬಳಸುವ ಮೊದಲನೇ ಸಂವೇದಕ ಗಾಳಿಯಲ್ಲಿರುವ ಧೂಳು ಅಥವಾ ತೇಲುವ ಕಲ್ಮಶವನ್ನು ಅಳೆಯುತ್ತದೆ. ಎರಡನೆಯದು ಅಪಾಯಕಾರಿ ಅನಿಲಗಳ ಪ್ರಮಾಣವನ್ನು ಅಳೆಯುತ್ತದೆ. ಈ ಕಲ್ಮಶ ಮತ್ತು ಅನಿಲಗಳು ಎಷ್ಟು ಅಪಾಯಕಾರಿ ಎಂಬುದರ ಮೇಲೆ ಅವುಗಳಿಗೆ ಅಂಕ ನೀಡಲಾಗುತ್ತದೆ. ಸ್ಯಾಂಪಲ್​ನಲ್ಲಿರುವ ಅತಿ ಹೆಚ್ಚು ಅಪಾಯಕಾರಿ ಅಂಕವನ್ನು ಹೊಂದಿರುವ ಅನಿಲ ಅಥವಾ ಕಲ್ಮಶವೇ ವಾಯುವಿನ ಗುಣಮಟ್ಟವನ್ನು ಅರ್ಥಾತ್​ ಎಕ್ಯೂಐಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಗಾಳಿಯ ಸ್ಯಾಂಪಲ್​ವೊಂದರಲ್ಲಿ ಅಪಾಯಕಾರಿ ಅನಿಲದ ಅಂಕ ನೂರು ಮತ್ತು ಕಲ್ಮಶದ ಅಂಕ ಇನ್ನೂರು ಇದ್ದರೆ ಎಕ್ಯೂಐ 200 ಆಗುತ್ತದೆ. ವಾಯು ಗುಣಮಟ್ಟದ ಸೂಚ್ಯಂಕವನ್ನು 1ರಿಂದ 500ರ ಅಳತೆಗೋಲಿನಲ್ಲಿ ಸೂಚಿಸಲಾಗುತ್ತದೆ. ಸೂಚ್ಯಂಕ 1ರಿಂದ 50ರೊಳಗಿದ್ದರೆ ಉತ್ತಮ, 61ರಿಂದ 100ರೊಳಗೆ ಸಾಧಾರಣ, 101ರಿಂದ 150 ಅಶಕ್ತರಿಗೆ ಅಪಾಯಕಾರಿ, 151ರಿಂದ 200 ಅನಾರೋಗ್ಯಕರ, 201ರಿಂದ 300 ಅಪಾಯಕಾರಿ, 300ರಿಂದ 500 ಅತಿ ಅಪಾಯಕಾರಿ.
ದೆಹಲಿಯ ಗಾಳಿಯನ್ನು ಹದಗೆಡಿಸಲು ಅಪಾಯಕಾರಿ ಅನಿಲಗಳಿಗಿಂತ ತೇಲುವ ಕಲ್ಮಶಗಳ ಕಾಣಿಕೆಯೇ ಹೆಚ್ಚಿದೆ. ಕಲ್ಮಶಗಳನ್ನು ಅವುಗಳ ಗಾತ್ರದ ಆಧಾರದ ಮೇಲೆ ಪಿ.ಎಂ 10 ಮತ್ತು ಪಿ.ಎಂ 2.5 ಎಂದು ವಿಂಗಡಿಸಲಾಗುತ್ತದೆ. ಪಿ.ಎಂ 10 ಕಲ್ಮಶಗಳು ಮೂಗಿನ ಒಳಗೆ ಹೊಕ್ಕು ಕಣ್ಣುರಿ, ಮೂಗು ಕಟ್ಟುವಿಕೆಯಂತಹ ಕಿರಿಕಿರಿಯನ್ನುಂಟು ಮಾಡಿದರೂ ಮೂಗಿನಲ್ಲಿರುವ ಕೂದಲುಗಳಲ್ಲಿ ಸಿಕ್ಕಿಕೊಳ್ಳುತ್ತವೆ. ಆದರೆ ಪಿ.ಎಂ 2.5 ತನ್ನ ಪುಟ್ಟ ಗಾತ್ರದ ಕಾರಣ ಎಲ್ಲ ಅಡೆತಡೆಗಳನ್ನು ಮೀರಿ ನೇರವಾಗಿ ಶ್ವಾಸಕೋಶವನ್ನು ತಲುಪಿ ಅಸ್ತಮಾದಂತಹ ರೋಗಗಳನ್ನು ಉಂಟುಮಾಡುತ್ತದೆ. ವೃದ್ಧರು ಮತ್ತು ಮಕ್ಕಳಿಗೆ ಮಾರಣಾಂತಿಕವೂ ಆಗಬಲ್ಲದು. ದೆಹಲಿಯಲ್ಲಿ ಪ್ರತಿವರ್ಷ ಈ ಸಮಯದಲ್ಲಿ ನೇತ್ರಸಂಬಂಧಿ ಕಾಯಿಲೆಗಳ ಪ್ರಮಾಣ ಶೇಕಡ 50ರಿಂದ 60ರಷ್ಟು ಹೆಚ್ಚಾಗುತ್ತದೆ. ಇಂಗಾಲದ ಡೈಆಕ್ಸೆ ಡ್​, ಸಲ್ಫರ್​ ಡೈಆಕ್ಸೆ ಡ್​, ತೇಲುವ ಕಲ್ಮಶಗಳು ಕಣ್ಣಿನೊಳಗಿನ ನೀರಿನೊಡನೆ ಮಿಳಿತವಾಗಿ ನಡೆಯುವ ರಾಸಾಯನಿಕ ಕ್ರಿಯೆ ಇದಕ್ಕೆಲ್ಲ ಕಾರಣ. ಗಾಳಿಯಲ್ಲಿನ ಮಾಲಿನ್ಯದ ಪ್ರಮಾಣ ಒಂದು ಹಂತಕ್ಕಿಂತ ಹೆಚ್ಚಾದಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
ಇನ್ನು ಕೆಮ್ಮು, ಕಫದಂತಹ ರೋಗಿಗಳ ಸಂಖ್ಯೆಯಂತೂ ಕೇಳಲೇಬೇಡಿ.ಉಸಿರಾಡಲು ಏಗಬೇಕಾಗಿರುವಂತಹ ಪರಿಸ್ಥಿತಿಯಲ್ಲಿ ಶುದ್ಧಗಾಳಿಭಾಗ್ಯದ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದಿರುವ ದೆಹಲಿ ಸರ್ಕಾರ ಈ ಬಾರಿ ಟ್ಯಾಂಕರ್​ಗಳ ಮೂಲಕ ಬಡಾವಣೆಗಳಲ್ಲಿ ನೀರು ಚಿಮುಕಿಸುವ ಕಾರ್ಯ ಕೈಗೊಂಡರೂ ಪರಿಸ್ಥಿತಿ ಸುಧಾರಿಸಲಿಲ್ಲ. ಹೀಗಾಗಿ ಜನರ ಆಕ್ರೋಶದ ಒತ್ತಡಕ್ಕೆ ಸಿಲುಕಿ ಕಾನ್ಪುರ ಐಐಟಿಯ ಸಹಯೋಗದಲ್ಲಿ ಮೋಡಬಿತ್ತನೆಯ ಸಾಹಸಕ್ಕೆ ಕೈಹಾಕಿತು. ಮೋಡಬಿತ್ತನೆಯಲ್ಲಿ ವಿಮಾನದ ಮೂಲಕ ಉಪ್ಪು, ಸಿಲ್ವರ್​ ಅಯೋಡೈಡ್​ ಮತ್ತು ನ ಇಂಗಾಲದ ಡೈಆಕ್ಸೆಡ್​ಗಳ ಮಿಶ್ರಣವನ್ನು ಮೋಡಗಳ ಮೇಲೆ ಚಿಮುಕಿಸಲಾಗುತ್ತದೆ. ಇವು ಮೋಡಗಳಲ್ಲಿನ ತೇವ ಮತ್ತು ನೀರಿನ ಕಣಗಳನ್ನು ಸೆಳೆಯುತ್ತವೆ. ಹೀಗೆ ಸೆಳೆಯಲ್ಪಟ್ಟ ನೀರಹನಿಗಳು ಒಟ್ಟುಗೂಡಿದಂತೆ ಭಾರವಾಗಿ ಮಳೆಯ ರೂಪದಲ್ಲಿ ಕೆಳಗೆ ಬೀಳುತ್ತವೆ. ತೊಂದರೆಯೇನೆಂದರೆ ಈ ಕಾರ್ಯಾಚರಣೆ ಯಶಸ್ವಿಯಾಗಲು ಮೋಡಗಳಲ್ಲಿ ಮತ್ತು ವಾತಾವರಣದಲ್ಲಿ ಸಾಕಷ್ಟು ಆರ್ದ್ರತೆ ಇರಬೇಕು. ದೆಹಲಿಯಲ್ಲಿ ಶುಷ್ಕ ವಾತಾವರಣವಿರುವ ಕಾರಣ, ಪರಿಣತರ ಎಚ್ಚರಿಕೆಯನ್ನು ಧಿಕ್ಕರಿಸಿ ಕೈಗೊಂಡ ಈ ಕಾರ್ಯ ನಿರೀತ ಫಲ ನೀಡದೆ 2 ಕೋಟಿ ರೂ. ಹಣವು ಮೋಡದ ಜತೆ ತೇಲಿಹೋಯಿತು.
2008ರಲ್ಲಿ ಚೀನಾದ ಬೀಜಿಂಗ್​ನಲ್ಲಿ ಜರುಗಿದ ಒಲಿಂಪಿಕ್ಸ್​ ಪಂದ್ಯಾವಳಿ ಸಮಯದಲ್ಲಿ ಅಲ್ಲಿನ ವಾಯುಗುಣಮಟ್ಟ ಹದಗೆಟ್ಟ ಕಾರಣ ಸ್ಥಳಿಯ ಸರ್ಕಾರ ಮೋಡಬಿತ್ತನೆಯ ಮೂಲಕ ಮಳೆಬರಿಸಿ ಪರಿಸ್ಥಿತಿ ತಿಳಿಗೊಳಿಸಿತ್ತು. ಅಲ್ಲಿನ ಸರ್ಕಾರ ಇಂತಹ ಕಾರ್ಯಗಳಿಗೆಂದೇ ಹವಾಮಾನ ಮಾರ್ಪಾಡು ಇಲಾಖೆಯನ್ನು ಸ್ಥಾಪಿಸಿ ಪ್ರತಿವರ್ಷ ಅದಕ್ಕೆ ಭಾರಿ ಪ್ರಮಾಣದಲ್ಲಿ ಅನುದಾನವನ್ನೂ ಮೀಸಲಿಡುತ್ತಿದೆ. ಅಲ್ಲಿ ಮೋಡಬಿತ್ತನೆಯ ಮೂಲಕ ವಾಯುಮಾಲಿನ್ಯ ನಿಯಂತ್ರಿಸುವ ಜತೆಗೆ ಪ್ರತಿವರ್ಷ ಆಲಿಕಲ್ಲು ಮಳೆಯ ಕಾರಣ ಭಾರಿ ಪ್ರಮಾಣದಲ್ಲಿ ನಾಶವಾಗುತ್ತಿದ್ದ ಬೆಳೆ ಇದೀಗ ಈ ತಂತ್ರಜ್ಞಾನದಿಂದ ಬಚಾವಾಗುತ್ತಿದೆ. 2008ರ ಬೀಜಿಂಗ್​ನ ಕೃತಕ ಮಳೆಯ ಕಥೆಗೆ ಇನ್ನೊಂದು ಮಜಲೂ ಇದೆ. ಆ ವರ್ಷ ಆಗಸ್ಟ್​ 8ರಂದು ನಡೆಯಬೇಕಿದ್ದ ಉದ್ಘಾಟನಾ ಕಾರ್ಯಕ್ರಮಕ್ಕೆ ಹವಾಮಾನ ಇಲಾಖೆ ಅಂದಾಜಿನ ಪ್ರಕಾರ ಮಳೆಯ ಆತಂಕವಿತ್ತು. ಹೀಗಾಗಿ ಆಯೋಜಕರ ಅಣತಿಯಂತೆ ಹವಾಮಾನ ಮಾರ್ಪಾಡು ಇಲಾಖೆಯು ಉದ್ಘಾಟನಾ ಸ್ಥಳದತ್ತ ತೇಲಿಬರುತ್ತಿದ್ದ ಮಳೆಮೋಡಗಳನ್ನು ಗುರುತಿಸಿ ಅವನ್ನು ಅಲ್ಲಿಗೆ ತಲುಪುವ ಮೊದಲೇ ಮೋಡಬಿತ್ತನೆಯ ಮೂಲಕ ಮಳೆ ಸುರಿಸುವಂತೆ ಮಾಡಿ ಕಾರ್ಯಕ್ರಮವು ರ್ನಿವ್ನಿವಾಗಿ ನಡೆಯುವಂತೆ ನೋಡಿಕೊಂಡಿತು. ಇಂತಹ ಪ್ರಥಮವನ್ನು ಸಾಧ್ಯವಾಗಿಸಿದ ಅಲ್ಲಿನ ಆಡಳಿತ ಇದೇ ತಂತ್ರವನ್ನು ರಾಜಕೀಯ ಸಮಾವೇಶಗಳಲ್ಲೂ ಬಳಸಿಕೊಳ್ಳುತ್ತದೆಯೆಂಬ ಆಪಾದನೆ ಇರುವುದು ಬೇರೆ ಮಾತು. ಮೋಡಬಿತ್ತನೆಯನ್ನು ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಿರುವ ಚೀನಾ ಇದೀಗ ದೆಹಲಿ ವಾಯುಮಾಲಿನ್ಯ ನಿಯಂತ್ರಿಸುವುದಕ್ಕಾಗಿ ಭಾರತಕ್ಕೆ ತಾಂತ್ರಿಕ ನೆರವು ನೀಡಲು ಸಿದ್ಧವಿರುವುದಾಗಿ ೂಷಿಸಿದೆ. ಈ ಆಫರ್​ಗೆ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ. ಚೀನಾದಲ್ಲಿಯೂ ಹಿಂದೆ ದೆಹಲಿಯಂತಹುದೇ ಪರಿಸ್ಥಿತಿಯಿತ್ತು. ಅದನ್ನು ಹತೋಟಿಗೆ ತರಲು ಹಲವು ಪರಿಸರಸ್ನೇಹಿ ರ್ನಿಣಯಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮ ಇದೀಗ ಅಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ.
ಅಷ್ಟಕ್ಕೂ ಚೀನಾದವರು ವಾಯುಮಾಲಿನ್ಯ ನಿಯಂತ್ರಣ ಮಾಡಿದ್ದಾದರೂ ಹೇಗೆ? ಮೊದಲಿಗೆ ಚಾಲ್ತಿಯಲ್ಲಿದ್ದ ವಾಹನಗಳ ಮಾಲಿನ್ಯ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಿ ಹೊಸ ಮಿತಿಗಳನ್ನು ಜಾರಿಗೊಳಿಸಲಾಯಿತು. ನೂತನ ಉದ್ದಿಮೆಗಳಿಗೆ ಅನುಮತಿ ನೀಡುವಾಗ ಅವುಗಳನ್ನು ಮಹಾನಗರಗಳ ಸುತ್ತ ಕೇಂದ್ರೀಕೃತವಾಗಿರದಂತೆ ನೋಡಿಕೊಂಡು 2ನೇ ಮತ್ತು 3ನೇ ಶ್ರೇಣಿಯ ನಗರಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಅವುಗಳಿಗೆ ಪ್ರಾಧಾನ್ಯ ನೀಡಲಾಯಿತು. ಈ ಮೂಲಕ ನಗರಗಳಿಗೆ ವಲಸೆ ಕಡಿಮೆಯಾಗಿ ಅವುಗಳ ಮೇಲಿನ ಒತ್ತಡ ತಗ್ಗಿತು. ನಗರಗಳ ಸುತ್ತ ಭಾರಿ ಪ್ರಮಾಣದಲ್ಲಿ ಅರಣ್ಯ ಬೆಳೆಸಿ ಜನರಲ್ಲಿ ಸಮೂಹಸಾರಿಗೆ ಬಳಸುವ ಕುರಿತು ಅರಿವು ಮೂಡಿಸಲಾಯಿತು. ಹೆಚ್ಚು ಮಾಲಿನ್ಯ ಸೂಸುತ್ತಿದ್ದ ಉದ್ದಿಮೆಗಳಿಗೆ ನೂತನ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಮಾಲಿನ್ಯ ಹತೋಟಿಗೆ ತರಲು ಪ್ರೇರೇಪಿಸಿ ಕಾಲಾವಕಾಶ ನೀಡಿ ತಪ್ಪಿತಸ್ಥ ಕಾರ್ಖಾನೆಗಳಿಗೆ ಬೀಗ ಜಡಿಯಲಾಯಿತು. ವಿದ್ಯುತ್​ ಉತ್ಪಾದನೆಯಲ್ಲಿ ಹೆಚ್ಚು ಕಾಣಿಕೆ ನೀಡುತ್ತಿದ್ದ ಕಲ್ಲಿದ್ದಲಿನ ಸ್ಥಾವರಗಳನ್ನು ಯೋಜಿತ ರೀತಿಯಲ್ಲಿ ಸ್ಥಗಿತಗೊಳಿಸಿ ಪವನ, ಸೌರದಂತಹ ವಿದ್ಯುತ್​ ಮೂಲಗಳಿಗೆ ಆದ್ಯತೆ ನೀಡಲಾಯಿತು.
ಗಮನಿಸಬೇಕಾದ ವಿಷಯವೆಂದರೆ 1998ರಿಂದ ಆರಂಭವಾದ ಚೀನಾದ ಈ ವಾಯುಸುಧಾರಣಾ ಕಾರ್ಯಕ್ರಮದ ಯಶಸ್ಸಿನ ಹಿಂದೆ ದಶಕಗಳ ಪರಿಶ್ರಮವಿದೆ. ಅವರು ಸಾಧಿಸಿ ತೋರಿಸಿದ ಕಾರ್ಯವನ್ನು ನಮ್ಮಲ್ಲಿ ಸಾಧಿಸುವುದು ಅಸಾಧ್ಯವೇನಲ್ಲ. ಪ್ರಬಲ ಯೋಜನೆಯ ಜತೆಗೆ ಇಸಂಗಳನ್ನೆಲ್ಲ ಬದಿಗೊತ್ತಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುವ ಇಚ್ಛಾಶಕ್ತಿಯ ಜರೂರತ್ತಿದೆ. ಇಲ್ಲದಿದ್ದಲ್ಲಿ ದೆಹಲಿಯ ಶುದ್ಧವಾತಾವರಣವೆಂಬುದು ರಾಜಕೀಯ ವೇದಿಕೆಗಳ ಮೇಲಿನ ಭಾಷಣಕ್ಕಷ್ಟೇ ಸೀಮಿತವಾಗಲಿದೆ.

(ಲೇಖಕರು ವಿಜ್ಞಾನ, ತಂತ್ರಾಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net