ಎಥೆನಾಲ್ ವಿರುದ್ಧದ ಅಭಿಯಾನ ಪ್ರಾಯೋಜಿತ; ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಮಾತ್ರ ನನ್ನ ಗಮನ: ನಿತಿನ್ ಗಡ್ಕರಿ | Nitin Gadkari

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
Published on
ನವದೆಹಲಿ: ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ದೇಶಾದ್ಯಂತ ತೀವ್ರ ಟೀಕೆಗಳ ನಡುವೆಯೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ಎಥೆನಾಲ್ ಮಿಶ್ರಣ ವಿರುದ್ಧದ ಅಭಿಯಾನ ಪ್ರಾಯೋಜಿತವಾಗಿದೆ. ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಮಾತ್ರ ನನ್ನ ಗಮನ ಎಂದು ಹೇಳಿದ್ದಾರೆ.
ಇಂಗ್ಲೀಷ್​ ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಥೆನಾಲ್ ಮತ್ತು ತಮ್ಮ ವಿರುದ್ಧದ ನಕರಾತ್ಮಕ ಅಭಿಯಾನವು ಪ್ರಸ್ತುತ ಅಸ್ತಿತ್ವದಲ್ಲಿರುವ ಕಚ್ಚಾತೈಲ ಆಮದು ವ್ಯವಸ್ಥೆಯಿಂದ ಲಾಭ ಪಡೆಯುವ ಲಾಭಿಗಳಿಂದ ಪ್ರಾಯೋಜಿಸಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ.
ಈ ಯಾವ ಟೀಕೆಗಳಿಂದ ನಾವು ಪ್ರಭಾವಿತರಾಗಿಲ್ಲ ಮತ್ತು ಕಚ್ಚಾತೈಲ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ನಿಯಂತ್ರಿಸುವುದು ಮತ್ತು ಇಂಧನ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಮಾತ್ರ ಗಮನಹರಿಸಿದ್ದೇವೆ. ನಾವು ಎಥೆನಾಲ್ ಮತ್ತು ಪರ್ಯಾಯ ಇಂಧನಗಳನ್ನು ಏಕೆ ಉತ್ತೇಜಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಭಾರತವು ಪ್ರತಿ ವರ್ಷ ಸುಮಾರು 22 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಹಣವು ದೇಶದಿಂದ ಹೊರಹೋಗುತ್ತದೆ. ಮತ್ತು ಕಚ್ಚಾತೈಲವು ಪರಿಸರ ಮಾಲಿನ್ಯಕ್ಕೂ ಆಗಾಧವಾದ ಕೊಡುಗೆ ನೀಡುತ್ತದೆ. ಆಮದುಗಳನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಭಾರತವನ್ನು ಇಂಧನ ವಲಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಆರಂಭದಿಂದಲೂ ನನ್ನ ದೃಷ್ಟಿ ಕೃಷಿಯನ್ನು ಇಂಧನ ಮತ್ತು ವಿದ್ಯುತ್ ಕ್ಷೇತ್ರದ ಕಡೆಗೆ ವೈವಿಧ್ಯಗೊಳಿಸುವುದಾಗಿದೆ. ನಾನು ಯಾವಾಗಲೂ ಎಥೆನಾಲ್ ಮಾತ್ರವಲ್ಲ, ಪರ್ಯಾಯ ಇಂಧನಗಳು ಮತ್ತು ಜೈವಿಕ ಇಂಧನಗಳ ಬಗ್ಗೆ ಮಾತನಾಡಿದ್ದೇನೆ. ಇವುಗಳಲ್ಲಿ ಎಥೆನಾಲ್, ಮೆಥನಾಲ್, ಜೈವಿಕ-ಸಿಎನ್‌ಜಿ, ವಿದ್ಯುತ್ ವಾಹನಗಳು ಮತ್ತು ಹೈಡ್ರೋಜನ್ ಸೇರಿವೆ ಎಂದು ಪ್ರತಿಪಾದಿಸಿದ್ದಾರೆ.
ಎಥೆನಾಲ್ ಭಾರತಕ್ಕೆ ಮಾತ್ರ ಸೀಮಿತವಾದ ಪ್ರಯೋಗವಲ್ಲ. ಎಥೆನಾಲ್ ಮಿಶ್ರಣ ಹೊಸದಲ್ಲ. ಬ್ರೆಜಿಲ್, ಯುನೈಟೆಡ್ ಸ್ಟೇಟ್ಸ್ (ಯುಎಸ್), ಥೈಲ್ಯಾಂಡ್ ಮತ್ತು ಯುರೋಪಿಯನ್ ದೇಶಗಳಂತಹ ದೇಶಗಳು ದಶಕಗಳಿಂದ ಎಥೆನಾಲ್ ಅನ್ನು ಬಳಸುತ್ತಿವೆ. ಬ್ರೆಜಿಲ್ 1970 ರಿಂದ ಫ್ಲೆಕ್ಸ್-ಇಂಧನ ಎಂಜಿನ್‌ಗಳನ್ನು ಹೊಂದಿದೆ ಎಂದಿದ್ದಾರೆ.
ಎಥೆನಾಲ್ ಮಿಶ್ರಣವನ್ನು ಪರಿಚಯಿಸುವ ಮೊದಲು, ವಾಹನ ತಯಾರಕರು ಮತ್ತು ಪರೀಕ್ಷಾ ಸಂಸ್ಥೆಗಳು ಪ್ರಯೋಗಗಳನ್ನು ನಡೆಸಿದವು. ಭಾರತೀಯ ಆಟೋಮೋಟಿವ್ ಸಂಶೋಧನಾ ಸಂಘ (ARAI) ವಾಹನಗಳನ್ನು ಪರೀಕ್ಷಿಸಿತು ಮತ್ತು ಯಶಸ್ವಿ ಪ್ರಯೋಗಗಳ ನಂತರ, ಸರ್ಕಾರ ಅಧಿಸೂಚನೆಗಳನ್ನು ಹೊರಡಿಸಿತು. ಹೊಸ ವಾಹನಗಳು ವಾಷರ್‌ಗಳಂತಹ ಘಟಕಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ ಅಗತ್ಯ ಮಾರ್ಪಾಡುಗಳಿಗೆ ಒಳಗಾಗಿವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಓಡುವ ವಾಹನಗಳನ್ನು ಜಾಗತಿಕ ಆಟೋಮೊಬೈಲ್ ಕಂಪನಿಗಳು ತಯಾರಿಸುತ್ತವೆ. ಮತ್ತು ಈ ಕಂಪನಿಗಳು ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತವೆ. ಎಥೆನಾಲ್ ಮಿಶ್ರಣವು ಅಸುರಕ್ಷಿತವಾಗಿದ್ದರೆ, ಈ ಕಂಪನಿಗಳು ಎಥೆನಾಲ್-ಹೊಂದಾಣಿಕೆಯ ವಾಹನಗಳನ್ನು ಬೆಂಬಲಿಸುವುದಿಲ್ಲ ಅಥವಾ ಅಭಿವೃದ್ಧಿಪಡಿಸುವುದಿಲ್ಲ. ಪ್ರಸ್ತುತ ಈ ಕಂಪನಿಗಳು ಎಥೆನಾಲ್-ಹೊಂದಾಣಿಕೆಯ ವಾಹನಗಳು ಮತ್ತು ಫ್ಲೆಕ್ಸ್-ಇಂಧನ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ. ಅಸುರಕ್ಷಿತ ವಾಹನಗಳನ್ನು ಉತ್ಪಾದಿಸುವ ಮೂಲಕ ತಮ್ಮ ಖ್ಯಾತಿಯನ್ನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುಟುಂಬ ಲಾಭದ ಬಗ್ಗೆ ಸ್ಪಷ್ಟೀಕರಣ

ಇನ್ನೂ ಈ ಎಥೆನಾಲ್ ಮಿಶ್ರಣದಿಂದ ತಮ್ಮ ಕುಟುಂಬ ಲಾಭ ಪಡೆಯುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಇದು ಆಧಾರರಹಿತ ಆರೋಪ. ಸರ್ಕಾರವು ಟೆಂಡರ್ ಪ್ರಕ್ರಿಯೆಯ ಮೂಲಕ ಎಥೆನಾಲ್ ಅನ್ನು ಖರೀದಿಸುತ್ತದೆ ಮತ್ತು ಬೆಲೆಯನ್ನು ಕ್ಯಾಬಿನೆಟ್ ನಿರ್ಧರಿಸುತ್ತದೆ. ಯಾವ ಕಂಪನಿಯು ಒಪ್ಪಂದವನ್ನು ಪಡೆಯುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ನನ್ನ ಪಾತ್ರವಿಲ್ಲ.ಸುಮಾರು 550 ಕೈಗಾರಿಕೆಗಳು ಎಥೆನಾಲ್ ಉತ್ಪಾದಿಸುತ್ತಿವೆ.
ಎಥೆನಾಲ್ ನೀತಿ ಬರುವ ಮೊದಲು, ನಾನು ಮದ್ಯ ಉತ್ಪಾದಿಸುವ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿದೆ; ಈಗ ನನ್ನ ಪುತ್ರರು ಅದನ್ನು ನೋಡಿಕೊಳ್ಳುತ್ತಾರೆ. ಅಂತಹ ಆರೋಪಗಳನ್ನು ಮಾಡುವುದು ಗೋಧಿ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿಯೊಬ್ಬ ರೈತನೂ ಸರ್ಕಾರದ ಆಹಾರ ನೀತಿಯಿಂದ ಲಾಭ ಪಡೆಯುತ್ತಿದ್ದಾನೆ ಎಂದು ಹೇಳುವಂತಿದೆ. ನನ್ನ ಕುಟುಂಬದ ಪಾಲು ದೇಶದ ಒಟ್ಟು ಎಥೆನಾಲ್ ಉತ್ಪಾದನೆಯಲ್ಲಿ ಕೇವಲ ಒಂದು ಪ್ರತಿಶತ ಮಾತ್ರ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net