ಶಿವನ ದೇವಾಲಯ ಕೆಡವಿದರೆ...ಮಮತಾ ಬ್ಯಾನರ್ಜಿ ವಿಡಿಯೋ ಪೋಸ್ಟ್ ಬೆನ್ನಲ್ಲೇ ಶುರುವಾಯ್ತು ರಾಜಕೀಯ ಕೆಸರೆರೆಚಾಟ | West Bengal Election

West Bengal Election | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಅಮಿತ್ ಮಾಳವೀಯ
West Bengal Election | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಅಮಿತ್ ಮಾಳವೀಯ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಗೆ (West Bengal Election) ಕೆಲವೇ ದಿನ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಜೋರಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಕಾಲ ಕಳೆದಂತೆ ಈ ಸಂಘರ್ಷವು ಮತ್ತೊಂದು ಘಟ್ಟಕ್ಕೆ ತಲುಪಿದ್ದು, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಳ್ಳುವ ಮೂಲಕ ಧಾರ್ಮಿಕ ವಿಷಯದ ಕುರಿತಾದ ಆರೋಪ ಮಾಡಿದ್ದಾರೆ.
ಅಮಿತ್ ಮಾಳವೀಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಎಂಟು ಸೆಕೆಂಡುಗಳ ಈ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಶಿವ ದೇವಾಲಯವನ್ನು ಕೆಡವಿದರೆ ಅದರ ಮೇಲೆ ಬಿಜೆಪಿ ಎಷ್ಟು ನಾಟಕ ಸೃಷ್ಟಿಸುತ್ತದೆ ಎಂದು ಹೇಳುತ್ತಿರುವುದು ಸ್ಪಷ್ಟವಾಗಿದೆ. ಈ ವಿಡಿಯೋ ಆಧರಿಸಿ ಮಾಳವೀಯ ಮುಖ್ಯಮಂತ್ರಿಯವರು ದೇವಾಲಯದ ಧ್ವಂಸವನ್ನು ಅಣಕಿಸುತ್ತಿದ್ದಾರೆ ಮತ್ತು ಹಿಂದೂಗಳ ವಿರುದ್ಧ ತಮ್ಮ ಮತ ಬ್ಯಾಂಕ್ ಅನ್ನು ಪ್ರಚೋದಿಸುವ ಇತಿಹಾಸವನ್ನು ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ಪುನರಾವರ್ತಿತ ಹೇಳಿಕೆಗಳು ನಾಯಕತ್ವ ಮತ್ತು ಎಲ್ಲಾ ಸಮುದಾಯಗಳ ಬಗ್ಗೆ ಅವರಿಗೆ ಇರುವ ಗೌರವದ ಬಗ್ಗೆ ಕಳವಳ ಮೂಡಿಸುತ್ತವೆ, ಆದ್ದರಿಂದಲೇ ರಾಜ್ಯದಲ್ಲಿ ಬದಲಾವಣೆ ಅನಿವಾರ್ಯ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿಯ ಈ ಆರೋಪವನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಮಾಳವೀಯ ಹಂಚಿಕೊಂಡಿರುವ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಜನರ ದಾರಿತಪ್ಪಿಸಲಾಗುತ್ತಿದೆ ಎಂದು ತಿರುಗೇಟು ನೀಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟಿಎಂಸಿ 23 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಮುಖ್ಯಮಂತ್ರಿಯವರು ದೇವಾಲಯಗಳ ಧ್ವಂಸವನ್ನು ತಾನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.
ಬಿಜೆಪಿಯು ಸುಳ್ಳು ನಿರೂಪಣೆಯನ್ನು ಸೃಷ್ಟಿಸಿ ಸಾರ್ವಜನಿಕರನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದೆ ಎಂದು ಟಿಎಂಸಿ ಆರೋಪಿಸಿದ್ದು, ಇಂತಹ ಉದ್ದೇಶಿತ ದ್ವೇಷದ ಅಭಿಯಾನದ ವಿರುದ್ಧ ಭಾರತೀಯ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಈ ನಡುವೆ, ಮುರ್ಷಿದಾಬಾದ್ ಜಿಲ್ಲೆಯ ರಘುನಾಥಗಂಜ್ ಮತ್ತು ಜಂಗಿಪುರದಲ್ಲಿ ರಾಮ ನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಅಮಿತ್ ಮಾಳವೀಯ ಮತ್ತು ಸಂಬಂಧಿತ ಮಾಧ್ಯಮ ಸಂಸ್ಥೆಯ ವಿರುದ್ಧ ಟಿಎಂಸಿ ದೂರು ದಾಖಲಿಸಿದೆ.
ಸದ್ಯ ಅಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಭದ್ರತಾ ಪಡೆಗಳ ನಿಯೋಜನೆ ಮುಂದುವರಿದಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತದಾನವು ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4 ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ. ಚುನಾವಣೆ ಹತ್ತಿರವಾಗುತ್ತಿರುವಂತೆ ಈ ರೀತಿಯ ಡಿಜಿಟಲ್ ಸಂಘರ್ಷಗಳು ರಾಜ್ಯದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ನೇರ ದಾಳಿ ಎಂದು ಟಿಎಂಸಿ ಆರೋಪಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net