'ನನ್ನ ಮನಸ್ಸಿನ ಮಾತು ಕೇಳ್ತಿದ್ದೇನೆ, ಬೈ ಬೈ ಪಪ್ಪಾ'; ತಂದೆಯೊಂದಿಗೆ ಫೋನ್‌ನಲ್ಲಿ ಅಂತಿಮವಾಗಿ ಮಾತನಾಡಿದ ಬಳಿಕ Chenab ನದಿಗೆ ಹಾರಿದ ಯುವತಿ!

 Woman jumped into Chenab river to end her life
Woman jumped into Chenab river to end her life
Published on: 

ಪ್ರಮುಖ ಮುಖ್ಯಾಂಶಗಳು

  • ಕೃಷ್ಣ ಲಾಲ್ ಅವರ ಪುತ್ರಿ 21 ವರ್ಷದ ಪಾಯಲ್ ದೇವಿ ಆತ್ಮಹತ್ಯೆ.
  • ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿ ಇದು ನನ್ನ ಸ್ವಂತ ನಿರ್ಧಾರ ಎಂದು ನದಿಗೆ ಹಾರಿದ ಯುವತಿ.
  • ಪಾಯಲ್​ಗಾಗಿ ಪೊಲೀಸರು, SDRFನಿಂದ ತೀವ್ರ ಶೋಧ ಕಾರ್ಯ ಮುಂದುವರಿಕೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. 21 ವರ್ಷದ ಯುವತಿಯೊಬ್ಬರು ತಮ್ಮ ತಂದೆ ಜೊತೆಗೆ ಕಾಲ್​ನಲ್ಲಿದ್ದಾಗಲೇ ಬಾಯ್​ ಬಾಯ್ ಪಪ್ಪಾ​ ಎಂದು ಹೇಳುತ್ತಾ ನದಿಗೆ ಹಾರುವ ದೃಶ್ಯಗಳು  ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ. 
 21 ವರ್ಷದ ಯುವತಿ ಪಾಯಲ್ ದೇವಿ ಎಂಬುವವರೇ ಪ್ರೇಮ್ ನಗರ್ ಸೇತುವೆಯಿಂದ ಚೆನಾಬ್ ನದಿಗೆ ಹಾರಿ ಜೀವ ಕಳೆದುಕೊಂಡಿದ್ದಾರೆ.
ಏನಾಗಿತ್ತು?
ಕೃಷ್ಣ ಲಾಲ್ ಎಂಬುವವರ ಪುತ್ರಿಯಾದ ಪಾಯಲ್ ದೇವಿ, ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ ಗ್ರಾಮದ ಪರಿಚಯಸ್ಥರೊಬ್ಬರೊಂದಿಗೆ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಪಾಯಲ್ ಅವರ ದುಪಟ್ಟಾ ಮೋಟಾರ್ ಸೈಕಲ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಬಿಡಿಸಲು ಬೈಕ್ ಸವಾರ ವಾಹನ ನಿಲ್ಲಿಸಿದ್ದನು. ಆ ಕೂಡಲೇ ನದಿ ಕಂಡ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಲ್ಲಿಗೆ ತೆರಳಿದ್ದಾಳೆ.
ನದಿಯ ಮೇಲ್ಸೇತುವೆ ಮೇಲೆ ನಿಂತಿದ್ದ ಸಾರ್ವಜನಿಕರು ಆಕೆಯನ್ನು ತಡೆಯಲು ಯತ್ನಿಸಿದರು. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ವಿನಂತಿಸಿದ್ದಾರೆ. ಆದರೆ, ಯಾರು ಹತ್ತಿರ ಬರಬೇಡಿ ಎಂದು ತಾಕೀತು ಮಾಡಿದ್ದಾಳೆ. ಅದೇ ಸಮಯದಲ್ಲಿ ಬೈಕ್ ಸವಾರ ಪಾಯಲ್ ಅವರ ತಂದೆಗೆ ಫೋನ್ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾನೆ. 
ನನ್ನದೇ ಸ್ವಂತ ನಿರ್ಧಾರ
ತಂದೆ ಕೃಷ್ಣ ಲಾಲ್ ಫೋನ್ ಮೂಲಕ ಮಗಳೊಂದಿಗೆ ಮಾತನಾಡಿ ಸಮಾಧಾನಪಡಿಸಲು ಯತ್ನಿಸಿದರೂ, ಪಾಯಲ್ ಕೇಳಲಿಲ್ಲ.  ತಂದೆ ಬಳಿ ಮಾತನಾಡುತ್ತಾ, 'ಇದು ನನ್ನದೇ ಆದ ಸ್ವಂತ ಜೀವನ, ನನ್ನ ಮನಸ್ಸು ಈ ದಾರಿಯಲ್ಲಿ ಹೋಗಲು ಹೇಳುತ್ತಿದೆ. ನಾನು ಹೀಗೆ ಮಾಡುತ್ತೇನೆ' ಎಂದು ತಿಳಿಸಿದ ಪಾಯಲ್, ಕೊನೆಯದಾಗಿ 'ಬಾಯ್​ ಬಾಯ್​ ಪಪ್ಪಾ' ಎಂದು ಹೇಳಿ ಫೋನ್ ಕಟ್ ಮಾಡಿ ಚೆನಾಬ್ ನದಿಗೆ ಹಾರಿದ್ದಾರೆ. ಘಟನೆಯ ಮೊದಲು ಸ್ಥಳದಲ್ಲಿದ್ದ ಜನರು ಆಕೆಯನ್ನು ತಡೆಯಲು ಯತ್ನಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿವೆ.  
ಯುವತಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನದಿಯಲ್ಲಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ನದಿ ನೀರಿನ ಬಿರುಸಿಗೆ ಆಕೆಯ ಮೃತದೇಹ ಇನ್ನು ಪತ್ತೆಯಾಗಿಲ್ಲ. ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net