ತಮಿಳುನಾಡಿನಲ್ಲಿ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್! Crop Loan Waiver

ತಮಿಳುನಾಡಿನಲ್ಲಿ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್!
ತಮಿಳುನಾಡಿನಲ್ಲಿ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್!
Published on
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರೈತ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ತೀವ್ರ ಒತ್ತಾಯಕ್ಕೆ ಮಣಿದು, ತಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಬೆಳೆ ಸಾಲ(Crop Loan Waiver) ಮನ್ನಾ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ಪರಿಷ್ಕರಿಸಿದ್ದಾರೆ. ಪರಿಷ್ಕೃತ ಯೋಜನೆಯಡಿ ರಾಜ್ಯದ ಸಣ್ಣ, ಅತಿ ಸಣ್ಣ ಹಾಗೂ ದೊಡ್ಡ ರೈತರು ಸಹಿತ ಸುಮಾರು 14.43 ಲಕ್ಷಕ್ಕೂ ಅಧಿಕ ಜನರಿಗೆ ಭರ್ಜರಿ ಸಾಲ ಮನ್ನಾ ಕೊಡುಗೆಯನ್ನು ಮಂಗಳವಾರ ಪ್ರಕಟಿಸಿದ್ದಾರೆ.
ಹೊಸ ಆದೇಶದ ಪ್ರಕಾರ, ಸಹಕಾರಿ ಬ್ಯಾಂಕ್‌ಗಳಿಂದ 75,000 ರೂಪಾಯಿ ವರೆಗೆ ಬೆಳೆ ಸಾಲ ಪಡೆದ ಎಲ್ಲಾ ವರ್ಗದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುವುದು. ಅಲ್ಲದೆ, ಇನ್ನು 75,000 ರೂಪಾಯಿಗಿಂತ ಹೆಚ್ಚಿನ ಸಾಲ ಹೊಂದಿರುವ ರೈತರಿಗೆ ತಲಾ 35,000 ರೂಪಾಯಿ ವರೆಗೆ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದಾಗಿ ಕಳೆದ ವರ್ಷ ಮೇ 1 ರಿಂದ ಈ ವರ್ಷ ಫೆಬ್ರವರಿ 28 ರ ನಡುವೆ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದ ಒಟ್ಟು 14,43,504 ರೈತರಿಗೆ ನೇರ ಆರ್ಥಿಕ ಲಾಭವಾಗಲಿದೆ.
ℹ️

ಪ್ರತಿಭಟನೆಗೆ ಮಣಿದ ಟಿವಿಕೆ ಸರ್ಕಾರ!
ಇದಕ್ಕೂ ಮುನ್ನ ಮೇ 25 ರಂದು ವಿಜಯ್ ಸರ್ಕಾರವು ಕೇವಲ 50,000 ರೂಪಾಯಿ ವರೆಗಿನ ಸಾಲ ಮನ್ನಾ ಘೋಷಿಸಿತ್ತು. ಆದರೆ, ಇದು ತಮಿಳಗ ವೆಟ್ರಿ ಕಳಗಂ ಪಕ್ಷದ ಚುನಾವಣಾ ಪ್ರಣಾಳಿಕೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರಹಾಕಿದ್ದ ರೈತರು, 5 ಎಕರೆ ವರೆಗೆ ಭೂಮಿ ಹೊಂದಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಅದಕ್ಕಿಂತ ಹೆಚ್ಚು ಜಮೀನು ಇರುವವರಿಗೆ ಶೇ. 50 ರಷ್ಟು ರಿಯಾಯಿತಿ ನೀಡಬೇಕು ಎಂದು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದರು. ರೈತರ ಈ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿಗಳು ಸೋಮವಾರ ಸಚಿವಾಲಯದಲ್ಲಿ ಕೃಷಿ, ಸಹಕಾರ ಮತ್ತು ಹಣಕಾಸು ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಪರಾಮರ್ಶನಾ ಸಭೆ ನಡೆಸಿ, ಯೋಜನೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಆದೇಶಿಸಿದ್ದಾರೆ.

ಖಜಾನೆಗೆ ಬಿದ್ದ ಬಿಗ್ ಹೊರೆ; ಯಾರಿಗೆ ಎಷ್ಟು ಲಾಭ?

ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ತಮಿಳುನಾಡು ಸರ್ಕಾರದ ಬೊಕ್ಕಸಕ್ಕೆ ಬೀಳುವ ಆರ್ಥಿಕ ಹೊರೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಮೊದಲು ಸಾಲ ಮನ್ನಾಕ್ಕಾಗಿ 2,044.46 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ಈಗ ಅದು ಒಟ್ಟಾರೆ 5,932.23 ಕೋಟಿ ರೂಪಾಯಿಗಳಿಗೆ ತಲುಪಿದೆ.
ಸಂಪೂರ್ಣ ಸಾಲ ಮನ್ನಾ: 75,000 ರೂಪಾಯಿ ವರೆಗೆ ಸಾಲ ಹೊಂದಿರುವ 6,22,313 ರೈತರ ಒಟ್ಟು 3,058.06 ಕೋಟಿ ರೂಪಾಯಿ ಸಾಲವನ್ನು ಶೇ. 100 ರಷ್ಟು ಮನ್ನಾ ಮಾಡಲಾಗುತ್ತಿದೆ. ಇದರಲ್ಲಿ 5.22 ಲಕ್ಷ ಅತಿ ಸಣ್ಣ ರೈತರು, 94,427 ಸಣ್ಣ ರೈತರು ಮತ್ತು 4,753 ದೊಡ್ಡ ರೈತರಿದ್ದಾರೆ.
ಭಾಗಶಃ ಸಾಲ ಮನ್ನಾ: 75,000 ರೂಪಾಯಿಗಿಂತ ಹೆಚ್ಚು ಸಾಲ ಇಟ್ಟುಕೊಂಡಿರುವ 8.21 ಲಕ್ಷ ರೈತರಿಗೆ ತಲಾ 35,000 ರೂಪಾಯಿಯಂತೆ ಒಟ್ಟು 2,874.17 ಕೋಟಿ ರೂಪಾಯಿ ಮುಕ್ತಿ ಸಿಗಲಿದೆ. ಈ ಫಲಾನುಭವಿಗಳಲ್ಲಿ 3.10 ಲಕ್ಷ ಅತಿ ಸಣ್ಣ ರೈತರು, 4.21 ಲಕ್ಷ ಸಣ್ಣ ರೈತರು ಮತ್ತು 88,795 ದೊಡ್ಡ ರೈತರು ಸೇರಿದ್ದಾರೆ.

60 ದಿನಗಳಲ್ಲಿ ಬ್ಯಾಂಕ್‌ಗಳಿಗೆ ಹಣ ಪಾವತಿ

ರಾಜ್ಯದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಈ ಜನಪರ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಸಾಲ ಮನ್ನಾ ಯೋಜನೆಯಡಿ ಸಹಕಾರಿ ಬ್ಯಾಂಕ್‌ಗಳಿಗೆ ಸರ್ಕಾರದಿಂದ ಪಾವತಿಯಾಗಬೇಕಾದ ಒಟ್ಟು ಮೊತ್ತವನ್ನು ತಮಿಳುನಾಡು ಸರ್ಕಾರವು ಮುಂದಿನ 45 ರಿಂದ 60 ದಿನಗಳ ಒಳಗಾಗಿ ಸಂಪೂರ್ಣವಾಗಿ ಚುಕ್ತಾ ಮಾಡಲಿದೆ ಎಂದು ಸ್ಪಷ್ಟಪಡಿಸಿದೆ. ಸಿಎಂ ವಿಜಯ್ ಅವರ ಈ ಹೆಜ್ಜೆಯು ತಮಿಳುನಾಡು ಕೃಷಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸಂಕಷ್ಟದಲ್ಲಿದ್ದ ಲಕ್ಷಾಂತರ ರೈತ ಕುಟುಂಬಗಳಿಗೆ ದೊಡ್ಡ ನಿಟ್ಟುಸಿರು ತಂದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net