_1769539272780.webp?w=480&auto=format%2Ccompress&fit=max)
_1769539272780.webp?w=480&auto=format%2Ccompress&fit=max)
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರದಿಂದ ಆರಂಭವಾಗುತ್ತಿದ್ದು, ಸದನದಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದು, ಅವರ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.
ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಸಿಪಿಐ(ಎಂ)ನ ನಾಯಕ ಜಾನ್ ಬ್ರಿಟ್ಸಾನ್ ಅಧಿವೇಶನದ ಸದನ ವ್ಯವಹಾರಗಳ ಪಟ್ಟಿಯನ್ನು ಹಂಚಿಕೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಎಸ್ಐಆರ್ ಹಾಗು ಮನರೇಗಾ ಯೋಜನೆಯ ಬದಲಿಗೆ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ, ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳು, ವಿದೇಶಾಂಗ ನೀತಿ, ವಾಯು ಮಾಲಿನ್ಯದ ಸಮಸ್ಯೆ, ದೇಶದ ಆರ್ಥಿಕ ಸ್ಥಿತಿ ಹಾಗೂ ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮಗಳ ನಿಷೇಧ ಹೇರುವುದು ಸೇರಿದಂತೆ ಹಲವು ವಿಷಗಳ ಚರ್ಚೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯಹಾರಗಳ ಸಚಿವ ಕಿರಣ್ ರಿಜಿಜು ‘ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸ ಲ್ಪಟ್ಟು, ಕಾಯ್ದೆಯಾಗಿ ಜಾರಿಗೆ ಬಂದಿದೆ. ಒಮ್ಮೆ ಕಾನೂನು ಜಾರಿಗೆ ಬಂದರೆ ನಾವು ಅದನ್ನು ಪಾಲಿಸಬೇಕಾಗುತ್ತದೆ. ರಿವರ್ಸ್ ಗೇರ್ನಲ್ಲಿ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ. ಇದೇ ವೇಳೆ ಇತರೆ ವಿಷಯಗಳನ್ನು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ಮತ್ತು ಬಜೆಟ್ ಕುರಿತು ಚರ್ಚೆ ವೇಳೆ ಪ್ರಸ್ತಾಪಿಸಬಹುದು. ಇದು ವರ್ಷದ ಮೊದಲ ಅಧಿವೇಶನವಾಗಿದ್ದು, ಸಾಮಾನ್ಯವಾಗಿ ರಾಷ್ಟ್ರಪತಿಗಳ ಭಾಷಣದ ಬಳಿಕ ಸದನದ ವ್ಯವಹಾರಗಳ ಪಟ್ಟಿಯನ್ನು ಹಂಚಿಕೊಳ್ಳಲಾಗುತ್ತದೆ. ಆದರೂ ನಾನು ಪಟ್ಟಿಯನ್ನು ಈಗಲೇ ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆ ಕುರಿತು ಚಳಿಗಾಲದ ಅಧಿವೇಶನದಲ್ಲಿ ಸುದೀರ್ಘ ವಾಗಿ ಚರ್ಚೆ ನಡೆದಿದೆ. ವಿರೋಧ ಪಕ್ಷಗಳ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡಲಾಗಿತ್ತು. ಈಗ ಮತ್ತೊಮ್ಮೆ ಈ ವಿಷಯದ ಚರ್ಚೆಗೆ ಒತ್ತಾಯಿಸುವುದು ಅನಗತ್ಯ ಎಂದು ರಿಜಿಜು ವಿಪ್ಕಷಗಳ ಪ್ರಸ್ತಾವನೆಯನ್ನು ತಳ್ಳಿಹಾಕಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮನರೇಗಾ) ರದ್ದುಪಡಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ವಿುಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇತ್ತೀಚೆಗೆ ನರೇಗಾ ಕಾರ್ವಿುಕರೊಂದಿಗೆ ನಡೆಸಿದ ಸಂವಾದದ ವಿಡಿಯೋ ಹಂಚಿಕೊಂಡಿರುವ ರಾಹುಲ್ ‘ನರೇಗಾ ನಮ್ಮ ಬದುಕನ್ನೇ ಬದಲಿಸಿತು ಎಂದು ತಿಳಿಸುತ್ತಿದ್ದ ಕಾರ್ವಿುಕರು ಇಂದು ಮೋದಿ ಸರ್ಕಾರ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ನರೇಗಾವನ್ನು ನಾಶಪಡಿಸುವ ಮೋದಿ ಅವರ ಉದ್ದೇಶದ ಹಿಂದಿನ ಅಸಲಿ ಮರ್ಮವೇನು? ಕಾರ್ವಿುಕರ ದೈನಂದಿನ ಕೂಲಿ ಬಗ್ಗೆ ಚೌಕಾಶಿ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು, ಪಂಚಾಯತ್ಗಳ ಅಧಿಕಾರ ಕಿತ್ತುಕೊಳ್ಳುವುದು, ರಾಜ್ಯಗಳ ಅಧಿಕಾರವನ್ನು ಕಸಿದುಕೊಂಡು ದೆಹಲಿಯಲ್ಲಿ ಅಧಿಕಾರವನ್ನು ಕೇಂದ್ರೀಕರಿಸುವುದು ಮತ್ತು ದೇಶವನ್ನು ಮತ್ತೆ ರಾಜ-ಮಹಾರಾಜರ ಕಾಲಕ್ಕೆ ಕೊಂಡೊಯ್ಯುವುದು ಮೋದಿ ಸರ್ಕಾರದ ಉದ್ದೇಶವಾಗಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.