Budget 2026 : 'ಕನ್ನಡಿಗರಿಗೆ ಬಜೆಟ್‌ನಲ್ಲಿ ಮತ್ತೆ ಖಾಲಿ ಚೊಂಬು': ಕೇಂದ್ರದ ವಿರುದ್ಧ CM ಗುಡುಗು!

Budget 2026
Budget 2026
Published on
ಕಲುಬುರ್ಗಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್ ಕುರಿತು ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಇದನ್ನು "ಕರ್ನಾಟಕದ ಪಾಲಿಗೆ ಶೂನ್ಯ ಬಜೆಟ್" ಎಂದು ಟೀಕಿದರು.
"ನಮ್ಮ ರಾಜ್ಯ ಅತಿ ಹೆಚ್ಚು ತೆರಿಗೆ ನೀಡಿದರೂ, ನಮಗೆ ಸಿಗುತ್ತಿರುವ ಪಾಲು ಮಾತ್ರ ಅತ್ಯಲ್ಪ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಈ ಬಾರಿಯ ಬಜೆಟ್ ಕೂಡ ಸರಿಪಡಿಸಿಲ್ಲ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
"ಕಳೆದ ಮೂರು ಬಜೆಟ್‌ಗಳಿಂದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಲಾಗುತ್ತಿದೆ. ಆದರೆ, ಈವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲೂ ಅದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ರಾಜ್ಯದ ರೈತರಿಗೆ ಮಾಡಿದ ದ್ರೋಹ," ಎಂದು ಕಿಡಿಕಾರಿದರು.
ಬೆಂಗಳೂರು ನಗರದ ಮೂಲಸೌಕರ್ಯಕ್ಕಾಗಿ ರಾಜ್ಯ ಸರ್ಕಾರ 27,793 ಕೋಟಿಗಳ ವಿಶೇಷ ಪ್ಯಾಕೇಜ್ ಕೇಳಿತ್ತು. ಆದರೆ ಬಜೆಟ್‌ನಲ್ಲಿ ಸಬರ್ಬನ್ ರೈಲ್ವೆ ಅಥವಾ ಮೆಟ್ರೋ ವಿಸ್ತರಣೆಗೆ ಯಾವುದೇ ವಿಶೇಷ ಹೂಡಿಕೆ ಘೋಷಣೆಯಾಗಿಲ್ಲ ಎಂದು ಸಿಎಂ ಆರೋಪಿಸಿದರು.
"ನಮ್ಮ ರಾಜ್ಯದ ತೆರಿಗೆ ಪಾಲು ಶೇ. 4.71 ರಿಂದ ಶೇ. 3.64 ಕ್ಕೆ ಕುಸಿದಿದೆ. ಇದರಿಂದ ನಮಗೆ 80,000 ಕೋಟಿ ನಷ್ಟವಾಗಿದೆ. ಇಂತಹ 'ಆರ್ಥಿಕ ದೌರ್ಜನ್ಯ'ವನ್ನು ನಾವು ಸಹಿಸುವುದಿಲ್ಲ. ಹದಿನಾರನೇ ಹಣಕಾಸು ಆಯೋಗದ ಮುಂದೆ ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ," ಎಂದು ಅವರು ಗುಡುಗಿದರು.
"ಈ ಬಜೆಟ್ ಕೇವಲ ಚುನಾವಣಾ ದೃಷ್ಟಿಯದಾಗಿದೆ. ಕರ್ನಾಟಕಕ್ಕೆ ಮತ್ತೆ 'ಖಾಲಿ ಚೊಂಬು' ನೀಡುವ ಮೂಲಕ ಕೇಂದ್ರ ಸರ್ಕಾರ ಕನ್ನಡಿಗರನ್ನು ಹಗುರವಾಗಿ ಕಂಡಿದೆ." - ಮುಖ್ಯಮಂತ್ರಿ ಸಿದ್ದರಾಮಯ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net