ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಬೆಳಗಾವಿಯ ನಮ್ಮ ಕೆಎಲ್ಇ ಜೆಎನ್ಎಂಸಿ ಅಂಗಳದಲ್ಲಿ 2006ರಲ್ಲಿ ಹಾಗೂ 2009ರಲ್ಲಿ ವಿಧಾನಸೌಧ ಅಧಿವೇಶನ ನಡೆದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಗಟ್ಟಿತನವನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಕಾರ್ಯವೈಖರಿ ಅಗಾಧವಾಗಿತ್ತು. ರೈತರ ಸಮಸ್ಯೆಗಳ ಕುರಿತು ಅವರ ಸ್ಪಂದನೆ, ಗ್ರಾಮೀಣಾಭಿವೃದ್ಧಿ ಮೇಲಿನ ಒಲವು ಮತ್ತು ಮೂಲಸೌಕರ್ಯ ವೃದ್ಧಿಗೆ ನೀಡಿದ ಆದ್ಯತೆ ಅವರ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನ ತಿಳಿಸುತ್ತವೆ. ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದ ಅವರು, ಪ್ರತ್ಯೇಕವಾಗಿ ರೈತರ ಬಜೆಟ್ ಮಂಡಿಸಿದ ಮೊದಲ ನಾಯಕರು. ರೈತರ ಬೆಳೆ ಸಾಲಮನ್ನಾ, ನೀರಾವರಿ ಯೋಜನೆ ಕಾರ್ಯಗತಗೊಳಿಸಿದ್ದು, ಶೀಘ್ರವಾಗಿ ರಸಗೊಬ್ಬರ ವಿತರಿಸುವ ಕ್ರಮ, ಆಧುನಿಕ ಕೃಷಿ ಪರಿಕರಗಳು ಹಾಗೂ ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆ ಹೀಗೆ ಹಲವು ಉಪಕ್ರಮ ಕೈಗೊಂಡ ರೈತರ ಹೃದಯ ಸಾಮ್ರಾಜ್ಯದ ಪೂಜಕರಾದರು.