ಹಳೆ ದ್ವೇಷಕ್ಕೆ ಯುವಕನ ಭೀಕರ ಹತ್ಯೆ; ಇನ್‌ಸ್ಟಾಗ್ರಾಮ್‌ನಲ್ಲಿ ಕೊಲೆ ಒಪ್ಪಿಕೊಂಡ ಆರೋಪಿ! | Murdered

Murdered
Murdered
Published on
ನವದೆಹಲಿ: ಈಶಾನ್ಯ ದೆಹಲಿಯ ಮೌಜ್‌ಪುರದಲ್ಲಿ ಗುರುವಾರ ರಾತ್ರಿ ನಡೆದ 24 ವರ್ಷದ ಯುವಕನ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಈ ಭೀಕರ ಕೃತ್ಯ ಎಸಗಿದ ಆರೋಪಿಯು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ವೆಲ್ಕಮ್ ಏರಿಯಾ ನಿವಾಸಿ ಫೈಜಾನ್ (24) ಎಂಬಾತನನ್ನು ಮೌಜ್‌ಪುರದ 'ಮಿಸ್ಟರ್ ಕಿಂಗ್ ಲಾಂಜ್ ಅಂಡ್ ಕೆಫೆ'ನಲ್ಲಿ ಗುರುವಾರ ರಾತ್ರಿ ಸುಮಾರು 10:28ಕ್ಕೆ ಗುಂಡಿಕ್ಕಿ ಕೊಲ್ಲಲಾಗಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫೈಜಾನ್‌ನನ್ನು ಗುರು ತೇಗ್ ಬಹದ್ದೂರ್ (GTB) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಮೃತನ ದೇಹದಲ್ಲಿ ತಲೆಗೆ ಒಂದು ಮತ್ತು ಎದೆಗೆ ಎರಡು ಬುಲೆಟ್‌ಗಳು ತಗುಲಿದ್ದು, ಕೈ ಮೇಲೆ ಇರಿತದ ಗುರುತುಗಳೂ ಪತ್ತೆಯಾಗಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಲಕ್ಷಣ ತಪ್ಪೊಪ್ಪಿಗೆ

ಘಟನೆಯ ಬೆನ್ನಲ್ಲೇ 'moinqureshiii_' ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ವಿಡಿಯೋವೊಂದು ಹರಿದಾಡುತ್ತಿದೆ. ಅದರಲ್ಲಿ ಆರೋಪಿಯು, "ನಾನು ಫೈಜಾನ್‌ನನ್ನು ವೈಯಕ್ತಿಕ ದ್ವೇಷದ ಕಾರಣಕ್ಕೆ ಕೊಂದಿದ್ದೇನೆ. ನಾಲ್ಕು ತಿಂಗಳ ಹಿಂದೆ ಆತ ನನಗೆ ಕೆನ್ನೆಗೆ ಹೊಡೆದಿದ್ದ, ಅದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದೇನೆ. ಇದರಲ್ಲಿ ನನ್ನ ತಂದೆಯಾಗಲಿ ಅಥವಾ ಗೆಳೆಯರಾಗಲಿ ಭಾಗಿಯಾಗಿಲ್ಲ. ಯಾರೋ ಹೇಳಿದ ಮಾತು ಕೇಳಿ ಅಥವಾ ಹಣಕ್ಕಾಗಿ ನಾನು ಈ ಕೊಲೆ ಮಾಡಿಲ್ಲ," ಎಂದು ಹೇಳಿಕೊಂಡಿದ್ದಾನೆ.

ಕುಟುಂಬದ ಗಂಭೀರ ಆರೋಪ

ಆದರೆ, ಮೃತ ಫೈಜಾನ್ ಸಹೋದರ ಸಲ್ಮಾನ್ ನೀಡುತ್ತಿರುವ ಹೇಳಿಕೆ ಬೇರೆಯೇ ಆಗಿದೆ. "ಆರೋಪಿ ಮತ್ತು ಆತನ ತಂದೆ ಫೈಜಾನ್‌ಗೆ ಸಾಲ ನೀಡಿದ್ದರು. ಅದನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಅವರು ಮನೆಗೆ ಬಂದು ಗಲಾಟೆ ಮಾಡಿದ್ದರು. ಈ ಬಗ್ಗೆ ನಾವು ಮೊದಲೇ ಪೊಲೀಸರಿಗೆ ದೂರು ನೀಡಿದ್ದೆವು, ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ನನ್ನ ಸಹೋದರನನ್ನು ಅವರೇ ಕೊಂದಿದ್ದಾರೆ. ತಂದೆ-ಮಗ ಇಬ್ಬರನ್ನೂ ಬಂಧಿಸಬೇಕು," ಎಂದು ಅವರು ಆಗ್ರಹಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು

ಆರೋಪಿಯ ವಿಡಿಯೋ ವೈರಲ್ ಆದ ನಂತರ ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಹಲವು ವಿಶೇಷ ತಂಡಗಳನ್ನು ರಚಿಸಲಾಗಿದೆ. ಹಣದ ವ್ಯವಹಾರದ ಬಗ್ಗೆ ಕುಟುಂಬದ ಆರೋಪ ಮತ್ತು ಆರೋಪಿಯ ತಪ್ಪೊಪ್ಪಿಗೆ ವಿಡಿಯೋ ಎರಡನ್ನೂ ಗಮನದಲ್ಲಿಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net