ರಕ್ಷಾಬಂಧನದ ಬೆನ್ನಲ್ಲೇ ಘೋರ ದುರಂತ... ಒಂದೇ ಕುಟುಂಬದ ಮೂವರು ಬಲಿ! | Rakshabandhan tragedy

ಫಾರ್ಚುನರ್ ಡಿಕ್ಕಿಯಾಗಿ ರಕ್ಷಾಬಂಧನಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು ಬಲಿ
ಫಾರ್ಚುನರ್ ಡಿಕ್ಕಿಯಾಗಿ ರಕ್ಷಾಬಂಧನಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು ಬಲಿ
Published on
Faridabad Accident: ರಕ್ಷಾಬಂಧನದ ಸಂಭ್ರಮದಲ್ಲಿ ಒಂದಾಗಿದ್ದ ಕುಟುಂಬಕ್ಕೆ ಮರುದಿನವೇ ಬರಸಿಡಿಲು ಬಡಿದಿದೆ. ಅಣ್ಣ-ತಂಗಿಯರ ಬಾಂಧವ್ಯವನ್ನು ಸಂಭ್ರಮಿಸಲು ಒಂದೆಡೆ ಸೇರಿದ್ದ ನಾಲ್ವರು ಸಹೋದರ-ಸಹೋದರಿಯರ ಪೈಕಿ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಸಹೋದರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಖಿಲೇಶ್ ಅವರ ಮನೆಯಲ್ಲಿ ರಕ್ಷಾಬಂಧನ ಆಚರಿಸಲು ನಾಲ್ವರು ಅಣ್ಣ-ತಂಗಿಯರು ಸೇರಿದ್ದರು. ರಾತ್ರಿ ಇಡೀ ಒಟ್ಟಿಗೆ ಕಾಲ ಕಳೆದ ಅವರು, ಸಹೋದರರ ಕೈಗೆ ರಾಖಿ ಕಟ್ಟಿಕೊಂಡು ಹಬ್ಬದ ಖುಷಿಯಲ್ಲಿದ್ದರು. ಆದರೆ ಮರುದಿನ ಬೆಳಗ್ಗೆ ತಮ್ಮ ಬದುಕಿನ ಕೊನೆಯ ಕ್ಷಣವಾಗಲಿದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಬಸ್‌ಸ್ಟ್ಯಾಂಡ್​ಲ್ಲಿ ​ನಿಂತಿದ್ದವರ ಪ್ರಾಣ ಕಸಿದ ಜವರಾಯ

ಮೂವರು ಸಹೋದರ-ಸಹೋದರಿಯರು ಊರಿಗೆ ವಾಪಸ್ ಹೋಗಲು ರೆಡಿಯಾಗಿದ್ದರು. ಅವರನ್ನು ಬೀಳ್ಕೊಡಲು ಅಖಿಲೇಶ್ ಕೂಡ ಬಸ್‌ಸ್ಟ್ಯಾಂಡ್‌ಗೆ ಬಂದಿದ್ದರು. ನಾಲ್ವರೂ ಬಸ್‌ಗಾಗಿ ಕಾಯುತ್ತಿದ್ದಾಗ, ಏಕಾಏಕಿ ವೇಗವಾಗಿ ಬಂದ ಫಾರ್ಚುನರ್ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಅಖಿಲೇಶ್ ಮತ್ತು ಅವಧೇಶ್ ಸ್ಥಳದಲ್ಲೇ ಮೃತಪಟ್ಟರೆ, ಸರೋಜ್ ಹಾಗೂ ರಾಜಕುಮಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಫಲಿಸದೆ ಮತ್ತೊಂದು ಸಾವು

ಗಂಭೀರವಾಗಿ ಗಾಯಗೊಂಡಿದ್ದ ಸರೋಜ್ ಅವರನ್ನು ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಿಸಲಿದೆ ಸರೋಜ್ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಮೃತಪಟ್ಟಂತಾಗಿದೆ. ಇನ್ನು ರಾಜಕುಮಾರಿ ಅವರು ಫರೀದಾಬಾದ್‌ನ ಎಸ್‌ಎಸ್‌ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಒಂದೇ ಕುಟುಂಬದ ಮೂವರು ಬಲಿ

ಮಾಹಿತಿ ಪ್ರಕಾರ, ಅವಧೇಶ್, ಸರೋಜ್ ಮತ್ತು ರಾಜಕುಮಾರಿ ಪಲ್ವಾಲ್‌ನ ಕುಲೇನಾ ನಿವಾಸಿಗಳು. ನಾಲ್ವರೂ ಮೂಲತಃ ಉತ್ತರ ಪ್ರದೇಶದ ಅಮೇಥಿಯ ಖರಕ್‌ಪುರದವರು ಎನ್ನಲಾಗಿದೆ. ಅಪಘಾತದ ಸದ್ದು ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರೊಬ್ಬರು, ರಸ್ತೆ ಮೇಲೆ ನಾಲ್ವರೂ ಗಾಯಗೊಂಡು ಬಿದ್ದಿದ್ದನ್ನು ಕಂಡಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಇಬ್ಬರು ಸಹೋದರರು ಮೃತಪಟ್ಟಿದ್ದರೆ, ಓರ್ವ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಹೇಳಿದ್ದಾರೆ

ಡಿಕ್ಕಿ ಹೊಡೆದು ಪರಾರಿಯಾದ ಚಾಲಕ

ಅಪಘಾತದ ಬಳಿಕ ಫಾರ್ಚುನರ್ ಚಾಲಕ ಕಾರು ನಿಲ್ಲಿಸದೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಇದು ಹಿಟ್‌ ಆ್ಯಂಡ್‌ ರನ್‌ ಪ್ರಕರಣವಾಗಿದೆ. ಪೊಲೀಸರು ಬಿಎನ್ಎಸ್​ನ 281, 125ಎ ಮತ್ತು 106(1) ಸೆಕ್ಷನ್‌ಗಳಡಿ ಕೇಸ್ ದಾಖಲಿಸಿಕೊಂಡು, ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪಘಾತಕ್ಕೆ ಕಾರಣವಾದ ಫಾರ್ಚುನರ್ ಯೂನಿಮೆಕ್ ಓವರ್‌ಸೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ.

ಕೆಲಸ ಮಾಡದ ಸಿಸಿಟಿವಿ

ಅಪಘಾತದ ಬಳಿಕ ಈ ಸ್ಥಳದ ರಸ್ತೆ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಬಸ್‌ಸ್ಟ್ಯಾಂಡ್‌ ಬಳಿ ವಾಹನಗಳು ಅತಿವೇಗವಾಗಿ ಓಡಾಡುತ್ತಿದ್ದು, ಪ್ರಯಾಣಿಕರಿಗೆ ಅಪಾಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅದರಲ್ಲೂ ಅಪಘಾತ ನಡೆದ ಜಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ.

ರಾಖಿ ಕಟ್ಟಿದ ಕೈಗಳಲ್ಲೇ ಉಳಿದದ್ದು ನೆನಪು

ರಕ್ಷಾಬಂಧನ ಅಂದ್ರೆ ಅಣ್ಣ-ತಂಗಿಯರ ಪ್ರೀತಿ, ಬಾಂಧವ್ಯದ ಹಬ್ಬ. ಆದ್ರೆ ರಾಖಿ ಕಟ್ಟಿದ ಮರುದಿನವೇ ನಡೆದ ಭೀಕರ ಅಪಘಾತ ಇಡೀ ಕುಟುಂಬದ ಸಂತಸವನ್ನೇ ಕಿತ್ತುಕೊಂಡಿದೆ. ಒಟ್ಟಿಗೆ ಕಳೆದ ಆ ರಾತ್ರಿ ಈಗ ಕುಟುಂಬಕ್ಕೆ ಮರೆಯಲಾಗದ ಕೊನೆಯ ನೆನಪಾಗಿದೆ. ಮೂವರನ್ನು ಕಳೆದುಕೊಂಡ ನೋವಿನ ನಡುವೆ, ಮತ್ತೊಬ್ಬ ಸಹೋದರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net