BRICS ಶೃಂಗಸಭೆ ಎಫೆಕ್ಟ್‌: ದೆಹಲಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ; ಪ್ರಯಾಣಕ್ಕೂ ಮುನ್ನ ಇದನ್ನು ಚೆಕ್ ಮಾಡಿ! BRICS Summit

ದೆಹಲಿ ರೈಲು ನಿಲ್ದಾಣ ಹಾಗೂ ರೈಲು ಸಂಚಾರದ ಸಾಂಕೇತಿಕ ಚಿತ್ರ
ದೆಹಲಿ ರೈಲು ನಿಲ್ದಾಣ ಹಾಗೂ ರೈಲು ಸಂಚಾರದ ಸಾಂಕೇತಿಕ ಚಿತ್ರ
Published on
ನವದೆಹಲಿ: ಶನಿವಾರ (ಸೆ.12) ಹಾಗೂ ಭಾನುವಾರ (ಸೆ.13) ದೆಹಲಿಯಲ್ಲಿ ಬ್ರಿಕ್ಸ್​ (BRICS Summit) ಶೃಂಗ ಸಭೆ ಆಯೋಜನೆಯಾಗಿರುವ ಹಿನ್ನಲೆ ದೆಹಲಿಯಿಂದ ಹೊರಡುವ ಹಾಗೂ ದೆಹಲಿಯತ್ತ ಸಂಚರಿಸುವ ರೈಲ್ವೆ ಸಮಯ ಹಾಗೂ ಸೇವೆಯಲ್ಲಿ ವ್ಯತ್ಯಯ ಕಂಡುಬರಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಜಾಗತಿಕ ಮಟ್ಟದ ಕಾರ್ಯಕ್ರಮ ಆಯೋಜನೆಯಾಗುತ್ತಿರುವ ಹಿನ್ನಲೆ, ಭದ್ರತೆ ಹಾಗೂ ಅಥಿತಿಗಳ ಸಂಚಾರವನ್ನು ಸುಗಮಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಹಲವಾರು ಉಪನಗರ EMU ಮತ್ತು MEMU ರೈಲುಗಳನ್ನು ರದ್ದುಗೊಳಿಸಲಾಗುವುದು, ಹಾಗೂ ಅನೇಕ ದೂರದ ಪ್ರಯಾಣದ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ. ಕೆಲವು ರೈಲುಗಳು ತಮ್ಮ ಸಾಮಾನ್ಯ ಆರಂಭಿಕ ಮತ್ತು ಅಂತಿಮ ನಿಲ್ದಾಣಗಳ ಬದಲಿಗೆ ಬೇರೆ ನಿಲ್ದಾಣಗಳಿಂದ ಹೊರಡಲಿವೆ ಅಥವಾ ಅಲ್ಲಿಯೇ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ ಎಂದು ಉತ್ತರ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ರೈಲು ಸೇವೆ ದೊರೆಯುವುದಿಲ್ಲ!

ಅಧಿಕ ಭದ್ರತೆ ಉದ್ದೇಶದಿಂದ ಶುಕ್ರವಾರ (ಸೆ.11) ದಿಂದಲೇ ಅನೇಕ ಉಪನಗರ ರೈಲುಗಳ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಪಲ್ವಾಲ್ ಮತ್ತು ಶಕೂರ್‌ಬಸ್ತಿ, ನವದೆಹಲಿ ಮತ್ತು ಗಾಜಿಯಾಬಾದ್, ನವದೆಹಲಿಯಿಂದ ಪಲ್ವಾಲ್‌, ದೆಹಲಿ ಜಂಕ್ಷನ್ ಮತ್ತು ಶಾಮ್ಲಿ ಸಂಪರ್ಕಿಸಲಿದ್ದ ರೈಲುಗಳ ಸೇವೆಯನ್ನು ಮೂರು ದಿನಗಳ ಮಟ್ಟಿಗೆ ನಿಲ್ಲಿಸಲಾಗಿದೆ. ಅಲಿಗಢಕ್ಕೆ ನವದೆಹಲಿಯಿಂದ ಹೊರಡಲಿದ್ದ ರೈಲುಗಳು ಈಗ ಗಾಜಿಯಾಬಾದ್​ನಿಂದ ಪ್ರಯಾಣ ಆರಂಭಿಸಲಿದೆ ಎನ್ನಲಾಗಿದೆ.
ರಾಜಧಾನಿ ಮಾರ್ಗ ಬದಲಾವಣೆ!
ದೂರದ ಪ್ರಯಾಣದ ಹಲವು ಪ್ರಮುಖ ರೈಲುಗಳ ಮಾರ್ಗವನ್ನೂ ಸಹ ಬದಲಾಯಿಸಲಾಗಿದೆ. ಇವುಗಳಲ್ಲಿ ನವದೆಹಲಿ ಹಾಗೂ ರಾಂಚಿ, ದಿಬ್ರುಗಢ, ಸೀಲ್ದಾ, ಹೌರಾ ಮತ್ತು ಭುವನೇಶ್ವರ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ಹಾಗೂ ಸಂಪೂರ್ಣ ಕ್ರಾಂತಿ ಎಕ್ಸ್‌ಪ್ರೆಸ್​ಗಳು ದೆಹಲಿ ಬದಲಿಗೆ ದೆಹಲಿ ಜಂಕ್ಷನ್-ಸಾಹಿಬಾಬಾದ್ ಮಾರ್ಗವನ್ನು ಬಳಸಲಿವೆ ಎನ್ನಲಾಗಿದೆ.
ಶನಿವಾರ (ಸೆ.12) ರಂದು ಗೋಮತಿ ಎಕ್ಸ್‌ಪ್ರೆಸ್, ನವದೆಹಲಿ-ರಾಜಗೀರ್ ಶ್ರಮಜೀವಿ ಎಕ್ಸ್‌ಪ್ರೆಸ್, ದಿಬ್ರುಗಢ-ನವದೆಹಲಿ ರಾಜಧಾನಿ, ನವದೆಹಲಿ-ಸೀಲ್ದಾ ರಾಜಧಾನಿ ಮತ್ತು ನವದೆಹಲಿ-ಹೌರಾ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನ ಓಡಾಟದಲ್ಲಿಯೂ ವ್ಯತ್ಯಯ ಕಂಡುಬರಲಿದೆ.
ಇದರ ಜೊತೆಗೆ ವಂದೇ ಭಾರತ್ ಎಕ್ಸ್​​ಪ್ರೆಸ್​, ಗಾಜಿಯಾಬಾದ್-ಮಥುರಾ ಮತ್ತು ಗಾಜಿಯಾಬಾದ್-ಪಲ್ವಾಲ್ ಇಎಂಯುಗಳು, ರೇವಾರಿ-ಮೀರತ್ ಕ್ಯಾಂಟ್ ಪ್ಯಾಸೆಂಜರ್, ಕುರುಕ್ಷೇತ್ರ-ಖಜುರಾಹೊ ಎಕ್ಸ್‌ಪ್ರೆಸ್, ದೆಹಲಿ ಜಂಕ್ಷನ್-ಸಹಾರನ್‌ಪುರ ಪ್ಯಾಸೆಂಜರ್, ನವದೆಹಲಿ-ಲಲಿತಗ್ರಾಮ್ ವೈಶಾಲಿ ಎಕ್ಸ್‌ಪ್ರೆಸ್, ಮಗಧ್ ಎಕ್ಸ್‌ಪ್ರೆಸ್ ಮತ್ತು ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಕೂಡ ತನ್ನ ಸೇವೆಯಲ್ಲಿ ವ್ಯತ್ಯಯ ಕಂಡುಬರಲಿದ್ದು, ಹೆಚ್ಚಿನ ರೈಲುಗಳು ಸೇವೆ ರದ್ದಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಯಾಣದ ಮುನ್ನ ಪರೀಕ್ಷಿಸಿ!

ಶುಕ್ರವಾರದಿಂದ ಭಾನುವಾರದ ವರೆಗೆ ಬ್ರಿಕ್ಸ್​ ಶೃಂಗ ಸಭೆ ಕಾರಣದಿಂದ ದೆಹಲಿಗೆ ಬರುವ ಹಾಗೂ ದೆಹಲಿಯಿಂದ ಪ್ರಯಾಣ ಬೆಳಿಸುವ ರೈಲಿನಲ್ಲಿ ಭಾರಿ ವ್ಯತ್ಯಯ ಕಂಡುಬರುವ ಹಿನ್ನಲೆ, ಪ್ರಯಾಣವನ್ನು ಆರಂಭಿಸುವ ಮೊದಲೇ ಸಂಚರಿಸಲಿರುವ ರೈಲು ಆ ದಿನ ರದ್ದಾಗಿದೆಯೇ? ತಡೆಯಲ್ಲಿದೆಯೇ? ಅಥವಾ ಬೇರೆ ನಿಲ್ದಾಣದ ಮೂಲಕ ಪ್ರಯಾಣ ನಡೆಸಲಿದೆಯೇ? ಎನ್ನುವುದನ್ನು ಪ್ರಯಾಣಿಕರು ಪೂರ್ವದಲ್ಲಿಯೇ ಪರೀಕ್ಷಿಸಿಕೊಳ್ಳಿ ಎಂದು ರೈಲ್ವೆ ಇಲಾಖೆ ತಿಳಿಸಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net