

ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಜೈಲಿನಿಂದ ಸೋಮವಾರ 17 ವಿಚಾರಣಾಧೀನ ಕೈದಿಗಳು ಪರಾರಿ.
'ಬ್ರೇಕಿಂಗ್ ಬ್ಯಾಡ್' ಬಳಿಕ ಈಗ ತಮಿಳುನಾಡಿನಲ್ಲಿ 'ಪ್ರಿಸನ್ ಬ್ರೇಕ್' ಶುರುವಾಗಿದೆ ಎಂದು ಸ್ಟಾಲಿನ್ ಲೇವಡಿ.
ಪರಾರಿಯಾದವರಲ್ಲಿ ಇದುವರೆಗೆ ನಾಲ್ವರ ಬಂಧನ, ಡ್ರೋನ್‌ಗಳನ್ನು ಬಳಸಿ ತೀವ್ರ ಶೋಧ.
ಚೆನ್ನೈ: ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಉಪಕಾರಾಗೃಹದಿಂದ 17 ವಿಚಾರಣಾಧೀನ ಕೈದಿಗಳು ಸೋಮವಾರ ರಾತ್ರಿ ಪರಾರಿಯಾದ ಘಟನೆಯು ಸದ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಸರ್ಕಾರದಿಂದ ಜನರನ್ನು ರಕ್ಷಿಸಲಾಗುತ್ತಿಲ್ಲ. ಸಾರ್ವಜನಿಕರೇ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸ್ಥಿತಿಗೆ..ತಮಿಳುನಾಡಿನ ಸರ್ಕಾರ ತಲುಪಿದೆ ಎಂದು ಮಾಜಿ ಸಿಎಂ ಎಂಕೆ ಸ್ಟಾಲಿನ್ ಅವರು ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರದ ವಿರುದ್ಧ ಪಾಪ್-ಕಲ್ಚರ್ ಶೈಲಿಯಲ್ಲಿ ವ್ಯಂಗ್ಯವಾಡಿದ ಸ್ಟಾಲಿನ್, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಟೀಕಿಸುತ್ತಾ, ಬ್ರೇಕಿಂಗ್ ಬ್ಯಾಡ್ ನಂತರ, ತಮಿಳುನಾಡಿನಲ್ಲಿ ಪ್ರಿಸನ್ ಬ್ರೇಕ್ ಕೂಡ ಶುರುವಾಗಿದೆ. ಈ ಸರ್ಕಾರವು ಜಾಮೀನಿನಲ್ಲಿ ಹೊರಬರುವ ಅಪರಾಧಿಗಳನ್ನಷ್ಟೇ ಕಾವಲು ಕಾಯುವುದಿಲ್ಲ ಎಂದಕೊಂಡಿದ್ದೆ. ಆದರೆ, ಜೈಲಿನ ಒಳಗಿರುವ ಕೈದಿಗಳನ್ನೂ ತಪ್ಪಿಸಿಕೊಳ್ಳಲು ಬಿಡುವಂತಹ ದುಸ್ಥಿತಿಯಲ್ಲಿದೆ. ಪುಝಲ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿಯಾದ ಆಘಾತದಿಂದ ನಾವು ಚೇತರಿಸಿಕೊಳ್ಳುವಷ್ಟರಲ್ಲಿ, ಥೇನಿಯ ಜೈಲಿನಿಂದ 17 ಕೈದಿಗಳು ಪರಾರಿಯಾಗಿದ್ದಾರೆ.
ಗೃಹ ಇಲಾಖೆಯು ನೇರವಾಗಿ ಮುಖ್ಯಮಂತ್ರಿ ವಿಜಯ್ ಅವರ ನಿಯಂತ್ರಣದಲ್ಲಿದೆ. 1995 ರ ನಂತರ ಇಷ್ಟು ದೊಡ್ಡ ಸಂಖ್ಯೆಯ ಕೈದಿಗಳು ಒಟ್ಟಿಗೆ ಪರಾರಿಯಾಗಿರುವುದು ಬಹುಶಃ ಇದುವೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಒಪ್ಪಲಾಗುತ್ತಿಲ್ಲ. ಭದ್ರತಾ ವ್ಯವಸ್ಥೆಗಳು ಮತ್ತು ಕಣ್ಗಾವಲು ವ್ಯವಸ್ಥೆಗಳು ಸಾಕಷ್ಟು ತಾಂತ್ರಿಕ ಬೆಳವಣಿಗೆ ಕಂಡಿರುವ 2026 ರ ಕಾಲಘಟ್ಟದಲ್ಲಿ ಇಂತಹ ದೊಡ್ಡ ವೈಫಲ್ಯವು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.
ಜೈಲಿನಿಂದ ಹೊರಗಿರುವ ಸ್ವಾತಂತ್ರ್ಯವಾಗಿ ತಪ್ಪುಗಳನ್ನು ಮಾಡುತ್ತಿದ್ದಾರೆ. ಜೈಲಿನಲ್ಲಿರುವವರು ಧೈರ್ಯವಾಗಿ ಪರಾರಿಯಾಗುತ್ತಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದೊಂದು ಸಂಪೂರ್ಣವಾಗಿ ನಿಷ್ಪ್ರಯೋಜಕ ಸರ್ಕಾರ. ಗುಡ್ ಫಾರ್ ನಥಿಂಗ್. ಅವರಿಗೆ ಸಾರ್ವಜನಿಕರನ್ನು ರಕ್ಷಿಸಲು ಸಾಧ್ಯವಿಲ್ಲ. ಜನರೇ ತಮ್ಮನ್ನು ತಾವು ಕಾಪಾಡಿಕೊಳ್ಳುವ ಶೋಚನೀಯ ಸ್ಥಿತಿಗೆ ತಮಿಳುನಾಡು ತಲುಪಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಡಿಎಂಕೆಯ ಟಿ.ಕೆ.ಎಸ್. ಇಳಂಗೋವನ್ ಮಾತನಾಡಿದ್ದು, ಪರಾರಿಯಾದ ಕೈದಿಗಳು ವಿಜಯ್ ಅವರ ಅಭಿಮಾನಿಗಳೇ ಅಥವಾ ಟಿವಿಕೆಗೆ ಸೇರಿದವರೇ ಎಂಬುದನ್ನು ನಾವು ಪರಿಶೀಲಿಸಬೇಕು ಎಂದರು. ಇನ್ನು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಮಸ್ವಾಮಿ ಸಹ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಕಿಡಿಕಾರಿದ್ದಾರೆ. "ಕೈದಿಗಳು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿ ಜೈಲಿನಿಂದ ಪರಾರಿಯಾಗಲು ಸಾಧ್ಯವಾದರೆ, ಸಾಮಾನ್ಯ ಜನರು ಬೀದಿಗಳಲ್ಲಿ ಯಾವ ಭದ್ರತೆಯನ್ನು ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಯನ್ನು ಟಿವಿಕೆ ಸರ್ಕಾರದ ಮುಂದಿಟ್ಟಿದ್ದಾರೆ.
ಸೋಮವಾರ ರಾತ್ರಿ..ತೆಕ್ಕಂಪಟ್ಟಿ ಉಪಕಾರಾಗೃಹದಿಂದ ಕೈದಿಯೊಬ್ಬನಿಗೆ ಫಿಟ್ಸ್ ಬಂದಿದೆ ಎನ್ನುವಂತೆ ನಟಿಸುವ ಮೂಲಕ ಜೈಲಿನಿಂದ ಪರಾರಿಯಾಗಲು ಪ್ಲ್ಯಾನ್ ಮಾಡಲಾಗಿತ್ತು. ಅದರಂತೆ ಒಂದೇ ಕೋಣೆಯಲ್ಲಿದ್ದ ಕೈದಿಗಳು ತಮ್ಮ ಜೊತೆಗಿದ್ದ ಒಬ್ಬನಿಗೆ ತೀವ್ರ ಆರೋಗ್ಯ ಸರಯಿಲ್ಲ ಚಿಕಿತ್ಸೆ ಬೇಕು ಎಂದು ಕರ್ತವ್ಯದಲ್ಲಿದ್ದ ವಾರ್ಡನ್ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು,..ಕೋಣೆಯತ್ತ ಬಂದ ಸಿಬ್ಬಂದಿ ಬೀಗ ತೆರೆದು ಒಳ ಹೊಕ್ಕಾಗ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ಭದ್ರತಾ ಸಿಬ್ಬಂದಿ ಮತ್ತು ಮೂವರು ಅಧಿಕಾರಿಗಳ ಮೇಲೂ ದಾಳಿ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಚೆನ್ನೈನ ಹೊರವಲಯದಲ್ಲಿರುವ ಪುಝಲ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿಯಾದ ಕೇವಲ ಕೆಲವೇ ದಿನಗಳ ನಂತರ ಈ ಘಟನೆ ಸಂಭವಿಸಿದೆ.
ಸದ್ಯ ಘಟನೆಯಿಂದ ಒಟ್ಟು ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಜಿ ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ಸಿಕ್ಕುತ್ತಲೇ ಪೊಲೀಸ್ ಇಲಾಖೆಯು ಪರಾರಿಯಾದ ವಿಚಾರಣಾಧೀನ ಕೈದಿಗಳನ್ನು ಪತ್ತೆ ಹಚ್ಚಲು 17 ವಿಶೇಷ ತಂಡವನ್ನು ರಚಿಸಿದೆ. ಈ ಬಗ್ಗೆ ಪೊಲೀಸ್ ಮಹಾನಿರೀಕ್ಷಕರಾದ ವಿಜಯೇಂದ್ರ ಬಿದರಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಪರಾರಿಯಾದ 17 ಜನರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ, (ಏಜೆನ್ಸೀಸ್).