ಇಲಾಖೆಗಳ ನಡುವಿನ ಗೋಡೆ ಒಡೆದು ಹಾಕಿ: ಕೇಂದ್ರ ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ! PM Modi

ಇಲಾಖೆಗಳ ನಡುವಿನ ಗೋಡೆ ಒಡೆದು ಹಾಕಿ: ಕೇಂದ್ರ ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ!
ಇಲಾಖೆಗಳ ನಡುವಿನ ಗೋಡೆ ಒಡೆದು ಹಾಕಿ: ಕೇಂದ್ರ ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ!
Published on
ನವದೆಹಲಿ: ದೇಶದಲ್ಲಿ ಸುಲಭ ಉದ್ಯಮ ನಿರ್ವಹಣೆ ಹಾಗೂ ಜನಸಾಮಾನ್ಯರ ಸುಲಭ ಜೀವನಕ್ಕೆ ಪೂರಕವಾಗಿ ಆಡಳಿತದಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಮತ್ತು 'ಆತ್ಮನಿರ್ಭರ ಭಾರತ'ದ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಕರೆ ನೀಡಿದ್ದಾರೆ. ದೆಹಲಿಯ 'ಸೇವಾ ತೀರ್ಥ'ದಲ್ಲಿ ಭಾರತ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮಹತ್ವದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಈ ವಿಷಯವನ್ನು ಗಂಭೀರವಾಗಿ ಒತ್ತಿಹೇಳಿದ್ದಾರೆ.
ಈ ಉನ್ನತ ಮಟ್ಟದ ಸಭೆಯು ಪ್ರಮುಖವಾಗಿ ಎರಡು ಆಶಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಮೊದಲನೆಯದಾಗಿ, 'ನಿಯಂತ್ರಣ ಮುಕ್ತ ಆಡಳಿತ ಹಾಗೂ ಸುಲಭ ಉದ್ಯಮ ಮತ್ತು ಸುಲಭ ಜೀವನಕ್ಕಾಗಿ ಸುಧಾರಣೆಗಳು' ಮತ್ತು ಎರಡನೆಯದಾಗಿ 'ಆತ್ಮನಿರ್ಭರತೆಗೆ ಉತ್ತೇಜನ ನೀಡುವುದು'. ಪ್ರಧಾನಿಯವರ ಈ ದೂರದೃಷ್ಟಿಯ ಚಿಂತನೆಗಳನ್ನು ಹೇಗೆ ಜಾರಿಗೆ ತರಲಾಗುತ್ತಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ಅಧಿಕಾರಿಗಳು ಸಭೆಯ ಮುಂದಿಟ್ಟರು.

ಯೋಜನೆಗಳು ಜನರ ಬದುಕನ್ನು ತಲುಪಲಿ

ಸಭೆಯಲ್ಲಿ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಯೋಜನೆಗಳು ಕೇವಲ ಕಾಗದದ ಮೇಲೋ ಅಥವಾ ಅಂಕಿ-ಅಂಶಗಳಲ್ಲೋ ಉಳಿಯಬಾರದು. ಅವುಗಳ ನೈಜ ಮತ್ತು ಧನಾತ್ಮಕ ಪರಿಣಾಮವು ಕಟ್ಟಕಡೆಯ ನಾಗರಿಕನ ಜೀವನದ ಮೇಲಾಗಬೇಕು. ಜನರ ದಿನನಿತ್ಯದ ಬದುಕಿನಲ್ಲಿ ಬದಲಾವಣೆ ತರುವುದೇ ಪ್ರತಿಯೊಂದು ಯೋಜನೆಯ ಅಂತಿಮ ಗುರಿಯಾಗಬೇಕು ಎಂದರು.

ಇಲಾಖಾ ಮತ್ಸರ ಬಿಟ್ಟು ಒಟ್ಟಾಗಿ ಕೆಲಸ ಮಾಡಿ: ಪ್ರಧಾನಿ ಕರೆ

ಅಧಿಕಾರಶಾಹಿಯಲ್ಲಿ ಕಂಡುಬರುವ ವಿಳಂಬ ನೀತಿ ಮತ್ತು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆಯ ಕುರಿತು ಪ್ರಸ್ತಾಪಿಸಿದ ಪ್ರಧಾನಿ, "ಯಾವುದೇ ಒಂದು ಸಚಿವಾಲಯ ಅಥವಾ ಇಲಾಖೆ ಪ್ರತ್ಯೇಕ ದ್ವೀಪದಂತೆ ಕೆಲಸ ಮಾಡಬಾರದು. ಇಲಾಖೆಗಳ ನಡುವಿನ ಗೋಡೆಗಳನ್ನು ಒಡೆದು ಹಾಕಿ, ಇಡೀ ಸರ್ಕಾರ ಒಂದೇ ಕುಟುಂಬ ಎಂಬ 'ಸಮಗ್ರ ಸರ್ಕಾರ' ವಿಧಾನವನ್ನು ಅಳವಡಿಸಿಕೊಳ್ಳಬೇಕು," ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಇಲಾಖೆಗಳ ನಡುವೆ ಸಮಗ್ರ ಯೋಜನೆ ಮತ್ತು ಸುಗಮ ಸಮನ್ವಯವನ್ನು ಸಾಧಿಸಲು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಬೇಕು ಎಂದ ಪ್ರಧಾನಿ, 'ಪಿಎಂ ಗತಿಶಕ್ತಿ' ರಾಷ್ಟ್ರೀಯ ಮಾಸ್ಟರ್ ಪ್ಲಾನ್ ವೇದಿಕೆಯನ್ನು ಕೇವಲ ಮೂಲಸೌಕರ್ಯಕ್ಕೆ ಮಾತ್ರವಲ್ಲದೆ, ಇಲಾಖೆಗಳ ನಡುವಿನ ಪರಸ್ಪರ ಸಮನ್ವಯ ಮತ್ತು ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.

ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಸವಾಲುಗಳ ಚರ್ಚೆ

ಸುದೀರ್ಘವಾಗಿ ನಡೆದ ಈ ಸಂವಾದದಲ್ಲಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ತಮ್ಮ ಇಲಾಖೆಗಳು ಕೈಗೊಂಡಿರುವ ಪ್ರಮುಖ ಸುಧಾರಣಾ ಕ್ರಮಗಳ ಕುರಿತು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿಯವರ ಆಶಯಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಜಾರಿಯಲ್ಲಿರುವ ಯೋಜನೆಗಳು, ಕೈಗಾರಿಕಾ ವಲಯದಲ್ಲಿನ ನಿಯಮಗಳ ಸರಳೀಕರಣ ಮತ್ತು ಆಡಳಿತಾತ್ಮಕ ಸುಧಾರಣೆಗಳ ಕುರಿತು ಅವರು ವಿವರಣೆ ನೀಡಿದರು.
ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಆಯಾ ವಲಯಗಳು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳು ಹಾಗೂ ಅವುಗಳನ್ನು ಮೆಟ್ಟಿ ನಿಲ್ಲಲು ರೂಪಿಸಲಾಗಿರುವ ಭವಿಷ್ಯದ ಕಾರ್ಯತಂತ್ರಗಳ ಕುರಿತು ಅಧಿಕಾರಿಗಳು ಸಭೆಯಲ್ಲಿ ಮುಕ್ತವಾಗಿ ಚರ್ಚಿಸಿದರು. ಸಾರ್ವಜನಿಕ ಸೇವಾ ವಿತರಣೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ವೇಗಗೊಳಿಸಲು ತಂತ್ರಜ್ಞಾನ ಆಧಾರಿತ ಸುಧಾರಣೆಗಳಿಗೆ ಒತ್ತು ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net