Brave Boy Ivan: 11 ವರ್ಷದ ಬಾಲಕನ ಸಾಹಸ; ಕಿಡ್ನಾಪರ್​ಗಳಿಂದ ತಪ್ಪಿಸಿಕೊಂಡ 'ಲಿಟಲ್ ಹೀರೋ'!

Brave Boy Ivan
Brave Boy Ivan
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಈಗ ಈ 11 ವರ್ಷದ ಬಾಲಕನ ಧೈರ್ಯಕ್ಕೆ ಸಾಕ್ಷಿಯಾಗಿದೆ
  • ಉಸಿರು ಬಿಗಿಹಿಡಿದು ಮೃತ್ಯುವನ್ನೇ ಗೆದ್ದ ಇವಾನ್!
  • ಇದು ಪೋಷಕರಿಗೆ ಎಚ್ಚರಿಕೆಯ ಘಂಟೆಯಾಗಿದೆ!
ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಈಗ ಈ 11 ವರ್ಷದ ಬಾಲಕನ ಧೈರ್ಯಕ್ಕೆ ಸಾಕ್ಷಿಯಾಗಿದೆ. ಬೈಕ್‌ನಲ್ಲಿ ಬಂದ ಮುಸುಕುಧಾರಿ ಕಿಡ್ನಪರ್​ಗಳು ಬಾಲಕನ ಬಾಯಿ ಮುಚ್ಚಿ ಎತ್ತೊಯ್ಯಲು ಯತ್ನಿಸಿದರೂ, ತನ್ನ ಅಪ್ರತಿಮ ಸಮಯಪ್ರಜ್ಞೆ ಮತ್ತು ಅದಮ್ಯ ಧೈರ್ಯದಿಂದ ಆತ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಲಕ್ನೋದ ಕೃಷ್ಣನಗರ ಪ್ರದೇಶದಲ್ಲಿ ನಡೆದ ಈ ಘಟನೆ ಈಗ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಕೃಷ್ಣನಗರದ ಪಂಡಿತ್ ಖೇಡಾ ದ್ವಾರಿಕಾಪುರಿ ನಿವಾಸಿ ವೀರೇಂದ್ರ ಶರ್ಮಾ ಅವರ ಪುತ್ರ, 4ನೇ ತರಗತಿ ವಿದ್ಯಾರ್ಥಿ ಇವಾನ್(Brave Boy Ivan), ಭಾನುವಾರ ಸಂಜೆ 6:30ರ ಸುಮಾರಿಗೆ ಮನೆಯ ಹತ್ತಿರದ ಅಂಗಡಿಗೆ ಪೆನ್ಸಿಲ್ ಖರೀದಿಸಲು ಹೋಗಿದ್ದನು. ಇಬ್ಬರು ಮುಸುಕುಧಾರಿಗಳು ಕಪ್ಪು ಸ್ಪ್ಲೆಂಡರ್ ಬೈಕ್‌ನಲ್ಲಿ ಇವಾನ್‌ನನ್ನು ಹಿಂಬಾಲಿಸಿದ್ದಾರೆ.
ಮೊದಲು "ಮನೆಗೆ ಬಿಡುತ್ತೇವೆ ಬಾ" ಎಂದು ನಂಬಿಸಲು ಯತ್ನಿಸಿದ ಅಪರಾಧಿಗಳು, ಇವಾನ್ ನಿರಾಕರಿಸಿದಾಗ ತಮ್ಮ ಅಸಲಿ ರೂಪ ತೋರಿಸಿದ್ದಾರೆ. ಒಬ್ಬ ಅಪರಾಧಿ ಬೈಕ್‌ನಿಂದ ಇಳಿದು ಬಾಲಕನನ್ನು ಬಲವಂತವಾಗಿ ಹಿಡಿದು ಅಪಹರಿಸಲು ಮುಂದಾಗಿದ್ದಾನೆ.
ಉಸಿರು ಬಿಗಿಹಿಡಿದು ಮೃತ್ಯುವನ್ನೇ ಗೆದ್ದ ಇವಾನ್!
ಅಪಹರಣಕಾರರು ಇವಾನ್‌ನನ್ನು ಹಿಡಿದುಕೊಂಡ ತಕ್ಷಣ, ಅವನು ಕಿರುಚದಂತೆ ತಡೆಯಲು ಕೆಮಿಕಲ್ ಮಿಶ್ರಿತ (ಮಾದಕ ದ್ರವ್ಯ) ಕರವಸ್ತ್ರವನ್ನು ಅವನ ಬಾಯಿಗೆ ತುರುಕಿದ್ದಾರೆ. ಆದರೆ, ಆ ಕ್ಷಣದಲ್ಲಿ ಇವಾನ್ ತೋರಿದ ಬುದ್ಧಿವಂತಿಕೆ ಅಸಾಮಾನ್ಯವಾದದ್ದು, ಹೌದು, ಕರವಸ್ತ್ರದಲ್ಲಿ ಔಷಧವಿರುವುದನ್ನು ಅರಿತ ಇವಾನ್ ತಕ್ಷಣವೇ ತನ್ನ ಉಸಿರನ್ನು ಬಿಗಿಹಿಡಿದನು. ಇದರಿಂದ ಅವನು ಪ್ರಜ್ಞೆ ತಪ್ಪುವುದರಿಂದ ಪಾರಾದನು. ಕಳ್ಳನಿಂದ ಹಿಡಿತದಿಂದ ತಪ್ಪಿಸಿಕೊಳ್ಳಲು ಇವಾನ್ ಅವನ ಕೈಗೆ ಬಲವಾಗಿ ಕಚ್ಚಿದ್ದಾನೆ. ನೋವಿನಿಂದ ಅಪರಾಧಿ ಹಿಡಿತ ಸಡಿಲಿಸುತ್ತಿದ್ದಂತೆ, ಇವಾನ್ ಅಲ್ಲಿಂದ ಮಿಂಚಿನ ವೇಗದಲ್ಲಿ ಓಡಿ ಮನೆ ತಲುಪಿದ್ದಾನೆ.
ಪೊಲೀಸರ ವಿಳಂಬ ಧೋರಣೆ
ಮನೆಗೆ ಬಂದು ತಾಯಿ ನೀತು ಶರ್ಮಾ ಅವರಿಗೆ ಘಟನೆ ವಿವರಿಸಿದ ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಇಂತಹ ಗಂಭೀರ ಪ್ರಕರಣದಲ್ಲೂ ಪೊಲೀಸರು ಒಂದೂವರೆ ಗಂಟೆ ತಡವಾಗಿ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೀರೇಂದ್ರ ಶರ್ಮಾ ಅವರು ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.
ಪೋಷಕರಿಗೆ ಎಚ್ಚರಿಕೆ!
ಲಕ್ನೋದ ಈ ಘಟನೆ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಅಪರಿಚಿತರೊಂದಿಗೆ ಮಾತನಾಡಬೇಡಿ ಎಂಬ ಪಾಠವನ್ನು ಇವಾನ್ ಪಾಲಿಸಿದ್ದರಿಂದಲೇ ಇಂದು ಆತ ಸುರಕ್ಷಿತವಾಗಿದ್ದಾನೆ. ಇವಾನ್‌ನ ಈ ಸಾಹಸಗಾಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net