ಬ್ರಾಹ್ಮಣ ಹುಡುಗನ ಮುಸ್ಲಿಂ ಯುವತಿಯ ಪ್ರೇಮ: ಶಿವಂ ದುಬೆ-ಅಂಜುಮ್ ಖಾನ್ ಅಪರೂಪದ ಲವ್ ಸ್ಟೋರಿ! | Shivam Dube

Shivam Dube
Shivam Dube
Published on
ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್, ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ 'ಸಿಕ್ಸರ್ ಕಿಂಗ್' ಶಿವಂ ದುಬೆ(Shivam Dube) ಅವರ ವೈಯಕ್ತಿಕ ಬದುಕು ಯಾವುದೋ ಫಿಲ್ಮಿ ಕಥೆಗಿಂತ ಕಡಿಮೆ ಇಲ್ಲ. ಹೌದು,ಉತ್ತರ ಪ್ರದೇಶದ ಮಾಡೆಲ್ ಅಂಜುಮ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾದ ಶಿವಂ ದುಬೆ, ಇಂದು ಯಶಸ್ವಿ ಕ್ರಿಕೆಟಿಗನಾಗಿ ಮಾತ್ರವಲ್ಲದೆ ಒಬ್ಬ ಜವಾಬ್ದಾರಿಯುತ ಕುಟುಂಬಸ್ಥನಾಗಿಯೂ ಗುರುತಿಸಿಕೊಂಡಿದ್ದಾರೆ.
ಮೂಲತಃ ಮುಂಬೈನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಶಿವಂ ದುಬೆ ಅವರ ತಂದೆ ರಾಜೇಶ್ ದುಬೆ ಮತ್ತು ತಾಯಿ ಮಾಧುರಿ ದುಬೆ. ಶಿವಂ ತಮ್ಮ ಮನಸ್ಸನ್ನು ಸೋತಿದ್ದು ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಹಳೆಯ ವಿದ್ಯಾರ್ಥಿನಿ ಮತ್ತು ಮಾಡೆಲ್ ಆಗಿದ್ದ ಅಂಜುಮ್ ಖಾನ್ ಅವರಿಗೆ.

ಫ್ರೆಂಡ್ಸ್​​ ಟು ಲವರ್ಸ್​​

ಇಬ್ಬರ ನಡುವೆ ಸಾಮಾನ್ಯ ಸ್ನೇಹಿತರ ಮೂಲಕ ಪರಿಚಯವಾಗಿ, ಅದು ಸ್ನೇಹಕ್ಕೆ ತಿರುಗಿ ನಂತರ ಪ್ರೇಮವಾಗಿ ಮೊಳೆಯಿತು. ಅಂಜುಮ್ ಖಾನ್ ಅವರು ಶಿವಂ ದುಬೆ ಅವರಿಗಿಂತ ಸುಮಾರು 6-7 ವರ್ಷ ದೊಡ್ಡವರಾಗಿದ್ದರೂ, ಅವರ ಪ್ರೀತಿಗೆ ವಯಸ್ಸು ಮತ್ತು ಧರ್ಮ ಅಡ್ಡಿಯಾಗಲಿಲ್ಲ.

ಎರಡು ಸಂಪ್ರದಾಯಗಳಂತೆ ಅದ್ಧೂರಿ ವಿವಾಹ

ಜುಲೈ 16, 2021 ರಂದು ಶಿವಂ ದುಬೆ ಮತ್ತು ಅಂಜುಮ್ ಖಾನ್ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ವಿವಾಹದ ವಿಶೇಷತೆಯೆಂದರೆ, ಇದು ಹಿಂದೂ ಮತ್ತು ಮುಸ್ಲಿಂ ಎರಡೂ ಸಂಪ್ರದಾಯಗಳ ಪ್ರಕಾರ ನೆರವೇರಿತು. ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿಯುವ ಮೂಲಕ ಹಿಂದೂ ಧರ್ಮದಂತೆ ಮದುವೆಯಾದರು. ಅಲ್ಲದೆ, ಮುಸ್ಲಿಂ ಸಂಪ್ರದಾಯದಂತೆ ನಿಕಾಹ್ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯಿತು.

ಸೋಷಿಯಲ್ ಮೀಡಿಯಾ ಟ್ರೋಲಿಂಗ್!

ಈ ಅಂತರಧರ್ಮೀಯ ವಿವಾಹಕ್ಕೆ ಕುಟುಂಬದಲ್ಲಿ ಆರಂಭದಲ್ಲಿ ಅಸಮಾಧಾನವಿತ್ತು ಎನ್ನಲಾಗಿದೆ. ಶಿವಂ ದುಬೆ ಅವರ ತಂದೆ ರಾಜೇಶ್ ದುಬೆ ಅವರು ತಮ್ಮ ಕೆಲವು ಸಂಬಂಧಿಕರಿಂದ ಕಠಿಣ ಟೀಕೆಗಳನ್ನು ಮತ್ತು ಅಪಹಾಸ್ಯಗಳನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿಯೂ ಈ ಜೋಡಿ ತೀವ್ರವಾದ ಟ್ರೋಲಿಂಗ್‌ಗೆ ಒಳಗಾಯಿತು. ಆದರೆ, ಶಿವಂ ಮತ್ತು ಅಂಜುಮ್ ಈ ಎಲ್ಲಾ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಂಡರು.
ಇಂದು ಶಿವಂ ದುಬೆ ಮತ್ತು ಅಂಜುಮ್ ಖಾನ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಯಾನ್ (Ayaan) 2022 ರಲ್ಲಿ ಜನಿಸಿದ ಹಿರಿಯ ಮಗ. ಮೆಹ್ವಿಶ್ (Mehwish) ಜನವರಿ 2025 ರಲ್ಲಿ ಜನಿಸಿದ ಮುದ್ದಾದ ಹೆಣ್ಣು ಮಗು.
ಇತ್ತೀಚೆಗಷ್ಟೇ 2026ರ ಟಿ20 ವಿಶ್ವಕಪ್ ಜಯಿಸಿದ ನಂತರ ಶಿವಂ ದುಬೆ ಅವರು ಅಹಮದಾಬಾದ್‌ನಿಂದ ಮುಂಬೈಗೆ ವಿಮಾನ ಸಿಗದೆ ಸಾಮಾನ್ಯ ರೈಲಿನಲ್ಲಿ ಪ್ರಯಾಣಿಸಿ ತಮ್ಮ ಮಕ್ಕಳನ್ನು ಭೇಟಿಯಾಗಲು ಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಅಂದು ರೈಲಿನಲ್ಲಿ ಯಾರಿಗೂ ಗುರುತು ಸಿಗದಂತೆ ಶಿವಂ ಮುಖಕ್ಕೆ ಮಾಸ್ಕ್ ಧರಿಸಿದ್ದರೆ, ಅಂಜುಮ್ ಅವರು ಪತಿಗೆ ರಕ್ಷಣೆಯಾಗಿ ನಿಂತಿದ್ದರು.
ಶಿವಂ ದುಬೆ ಅವರ ಯಶಸ್ಸಿನ ಹಿಂದೆ ಅಂಜುಮ್ ಖಾನ್ ಅವರ ದೊಡ್ಡ ಬೆಂಬಲವಿದೆ. ಟೀಕೆಗಳನ್ನು ಮೆಟ್ಟಿ ನಿಂತು ಪ್ರೀತಿಯನ್ನು ಗೆಲ್ಲಬಹುದು ಎಂಬುದಕ್ಕೆ ಈ ಜೋಡಿ ಇಂದು ಮಾದರಿಯಾಗಿದೆ,(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net