ಲೀಕ್ ಆಯ್ತಾ ಟೀಮ್ ಇಂಡಿಯಾದ ಹೊಸ ಕ್ಯಾಪ್ಟನ್ ಹೆಸರು..? ಕ್ರಿಕೆಟ್ ಲೋಕದಲ್ಲಿ ಹಲ್​ಚಲ್​ ಎಬ್ಬಿಸಿದೆ ಬಿಪಿಸಿಎಲ್ ಎಕ್ಸ್ ಪೋಸ್ಟ್! | BPCL Post

BPCL Post | ಲೀಕ್ ಆಯ್ತಾ ಟೀಮ್ ಇಂಡಿಯಾದ ಹೊಸ ಕ್ಯಾಪ್ಟನ್ ಹೆಸರು..?
BPCL Post | ಲೀಕ್ ಆಯ್ತಾ ಟೀಮ್ ಇಂಡಿಯಾದ ಹೊಸ ಕ್ಯಾಪ್ಟನ್ ಹೆಸರು..?
Published on
ಮುಂಬೈ: ಭಾರತ ಟಿ20 ಕ್ರಿಕೆಟ್ ತಂಡದ ಮುಂದಿನ ನಾಯಕನಾಗಿ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಸದ್ಯ ಟಿ20 ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಸ್ಥಾನಕ್ಕೆ ಅಯ್ಯರ್ ಅವರನ್ನು ತರಲು ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.
ಇಂದು (ಶನಿವಾರ-ಜೂನ್ 6) ಮುಂಬೈನಲ್ಲಿ ನಡೆಯಲಿರುವ ಆಯ್ಕೆಗಾರರ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಇದ್ದು, ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಅವರ ನಾಯಕತ್ವದ ಸಾಮರ್ಥ್ಯವನ್ನು ಪರಿಗಣಿಸಿ, ಬಿಸಿಸಿಐ ಈ ಜವಾಬ್ದಾರಿಗೆ ಮುಂಚೂಣಿಗೆ ತಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಆದರೆ, ಬಿಸಿಸಿಐ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಮುನ್ನವೇ ಶ್ರೇಯಸ್ ಅಯ್ಯರ್ ಅವರ ಪ್ರಾಯೋಜಕ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಎಡವಟ್ಟು ಮಾಡಿಕೊಂಡಿದೆ. ಅಯ್ಯರ್ ಭಾರತ ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಶುಭ ಕೋರಿ ಬಿಪಿಸಿಎಲ್ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಅಯ್ಯರ್ ಅವರ ಅದ್ಭುತ ನಾಯಕತ್ವದ ಗುಣಗಳು, ಸ್ಥಿರತೆ ಮತ್ತು ಮೈದಾನದಲ್ಲಿನ ಸಂಯಮವನ್ನು ಶ್ಲಾಘಿಸಿ, ಅವರ ಹೊಸ ಜವಾಬ್ದಾರಿಗೆ ಶುಭ ಹಾರೈಸಲಾಗಿತ್ತು. ಆದರೆ ಬಿಸಿಸಿಐನಿಂದ ಇನ್ನೂ ಅಧಿಕೃತ ಪ್ರಕಟಣೆ ಬಾರದಿರುವುದನ್ನು ಅರಿತು, ಸಂಸ್ಥೆಯು ಕೆಲವೇ ನಿಮಿಷಗಳಲ್ಲಿ ಆ ಪೋಸ್ಟ್ ಡಿಲೀಟ್ ಮಾಡಿದೆ.
ಅಷ್ಟರಲ್ಲಾಗಲೇ ಬಿಪಿಸಿಎಲ್ ಮಾಡಿದ್ದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐಗಿಂತ ಮುಂಚಿತವಾಗಿಯೇ ಪ್ರಾಯೋಜಕ ಸಂಸ್ಥೆ ಈ ರಹಸ್ಯವನ್ನು ಆಕಸ್ಮಿಕವಾಗಿ ಸೋರಿಕೆ ಮಾಡಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸದ್ಯಕ್ಕೆ ಈ ಬಗ್ಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಶನಿವಾರ ನಡೆಯಲಿರುವ ಆಯ್ಕೆ ಸಮಿತಿ ಸಭೆಯ ಬಳಿಕ ಹೊರಬೀಳಲಿರುವ ಭಾರತ ತಂಡದ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಅಧಿಕೃತ ಪ್ರಕಟಣೆ ಹೊರಬೀಳುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಇದು ಅಧಿಕೃತಗೊಂಡರೆ, ಮೂರು ವಿಭಿನ್ನ ಐಪಿಎಲ್ ಫ್ರಾಂಚೈಸಿಗಳನ್ನು ಮುನ್ನಡೆಸಿದ ಅನುಭವ ಹೊಂದಿರುವ ಅಯ್ಯರ್ ಅವರ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ದೊಡ್ಡ ಮೈಲಿಗಲ್ಲಾಗಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net