ದೇಶದಷ್ಟೇ ವಯಸ್ಸು, ರಕ್ತದಲ್ಲೇ ದೇಶಪ್ರೇಮ: ಸ್ವಾತಂತ್ರ್ಯ ಸಿಕ್ಕ ಮಧ್ಯರಾತ್ರಿ ಜನಿಸಿದ ಮಹಿಳೆಯ ಪ್ರೇರಣಾದಾಯಿ ಕಥೆ ಇದು! | Vijay Kumari

Vijay Kumari | ಸ್ವಾತಂತ್ರ್ಯ ಸಿಕ್ಕ ಮಧ್ಯರಾತ್ರಿ ಜನಿಸಿದ ಮಹಿಳೆಯ ಪ್ರೇರಣಾದಾಯಿ ಕಥೆ ಇದು!
Vijay Kumari | ಸ್ವಾತಂತ್ರ್ಯ ಸಿಕ್ಕ ಮಧ್ಯರಾತ್ರಿ ಜನಿಸಿದ ಮಹಿಳೆಯ ಪ್ರೇರಣಾದಾಯಿ ಕಥೆ ಇದು!
Published on

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಹುಟ್ಟುಹಬ್ಬ ಎಂಬುದು ಅವರ ವೈಯಕ್ತಿಕ ಜೀವನದ ಒಂದು ಮೈಲಿಗಲ್ಲು. ಆದರೆ ಲಖನೌ ನಿವಾಸಿ, ನಿವೃತ್ತ ಸೇನಾಧಿಕಾರಿ ಮೇಜರ್ ಧೀರೇಂದ್ರ ನಾಥ್ ಸಿಂಗ್ ಪತ್ನಿ ವಿಜಯ್ ಕುಮಾರಿ ಅವರಿಗೆ ಇದು ದೇಶದೊಂದಿಗೆ ಹಂಚಿಕೊಂಡ ವಿಶೇಷ ದಿನವಾಗಿದೆ. ತಮ್ಮ ವಯಸ್ಸು ಮತ್ತು ದೇಶದ ವಯಸ್ಸು ಎರಡೂ ಒಂದೇ ಎಂದು ಹೇಳುವ ಕುಮಾರಿ, 1947 ಆಗಸ್ಟ್ 15 ರ ಮಧ್ಯರಾತ್ರಿ 12 ಗಂಟೆಗೆ ವಾರಣಾಸಿಯಲ್ಲಿ ಜನಿಸಿದರು.

ಭಾರತವು ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಸಂಪೂರ್ಣವಾಗಿ ಮುಕ್ತಗೊಂಡು ಸ್ವತಂತ್ರ ದೇಶವಾಗಿ ಹೊರಹೊಮ್ಮಿದ ಕ್ಷಣದಲ್ಲೇ ತಾವೂ ಜನಿಸಿದ್ದಾಗಿ ತಿಳಿಸುವ ವಿಜಯ್​ ಕುಮಾರಿ, ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಂತ್ಯವನ್ನು ಸಾರುತ್ತಾ ತ್ರಿವರ್ಣ ಧ್ವಜವನ್ನು ಹಾರಿಸಿ ತಮ್ಮ ಪ್ರಸಿದ್ಧ ಭಾಷಣವನ್ನು ಮಾಡುತ್ತಿದ್ದಾಗ, ವಾರಣಾಸಿಯಲ್ಲಿ ಸರಿಯಾಗಿ ಮಧ್ಯರಾತ್ರಿ 12 ಗಂಟೆಗೆ ನಾನು ಜನಿಸಿದೆ ಎಂದು ನೆನಪಿಸಿಕೊಂಡಿದ್ದಾರೆ.

ನನ್ನ ಹುಟ್ಟುಹಬ್ಬವನ್ನು ದೇಶವೇ ಆಚರಿಸುತ್ತೆ!..

ಬೆಳೆಯುತ್ತಿರುವಾಗ ಕುಮಾರಿ ಅವರ ಈ ವಿಶಿಷ್ಟ ಹುಟ್ಟುಹಬ್ಬವು ಅವರ ಶಾಲಾ ಸ್ನೇಹಿತರ ನಡುವೆ ಅವರನ್ನು ವಿಶೇಷವಾಗಿ ಗುರುತಿಸುವಂತೆ ಮಾಡಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನನ್ನ ಸ್ನೇಹಿತರು ಯಾವಾಗಲೂ ನನ್ನ ಜನ್ಮದಿನಾಂಕದ ಬಗ್ಗೆ ಮಾತನಾಡುತ್ತಿದ್ದರು. ಶಾಲಾ ಕಾರ್ಯಕ್ರಮಗಳು, ರ್‍ಯಾಲಿಗಳು ಮತ್ತು ಪ್ರಭಾತ್ ಪೇರಿಗಳು ಆ ದಿನದ ನಿಯಮಿತ ಭಾಗವಾಗಿದ್ದವು. ನನ್ನ ಹುಟ್ಟುಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದು ನನ್ನ ಪೋಷಕರು ನನಗೆ ಹೇಳುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ. ಸ್ವಾತಂತ್ರ್ಯ ದಿನದಂದೇ ಜನಿಸಿದ ಕಾರಣಕ್ಕೆ ಅವರ ತಂದೆ ವಿಜಯ (ಗೆಲುವು) ಎಂದು ಅರ್ಥಪೂರ್ಣವಾಗಿ ಹೆಸರಿಟ್ಟಿದ್ದರು.
ಕುಮಾನ್‌ ರೆಜಿಮೆಂಟ್‌ನ ಮೇಜರ್ ಧೀರೇಂದ್ರ ನಾಥ್ ಸಿಂಗ್ ಅವರೊಂದಿಗೆ ಮದುವೆಯಾದ ನಂತರ ವಿಜಯ್ ಕುಮಾರಿ ಅವರ ಜನ್ಮದಿನಕ್ಕೆ (ಆಗಸ್ಟ್ 15) ಮತ್ತಷ್ಟು ಆಳವಾದ ಅರ್ಥ ಸಿಕ್ಕಿತು. ನಿನ್ನ ಹುಟ್ಟಿದ ದಿನ ಮತ್ತು ಸಮಯ ದೇಶದ ಸ್ವಾತಂತ್ರ್ಯದ ದಿನಕ್ಕೇ ಸಮಾನವಾಗಿರುವುದರಿಂದ, ನಿನ್ನ ಭವಿಷ್ಯವೂ ಭಾರತದೊಂದಿಗೆ ಬೆಸೆದುಕೊಂಡಿದೆ ಎಂದು ಅವರ ಪತಿ ಆಗಾಗ್ಗೆ ಹೇಳುತ್ತಿದ್ದರು. ಮೇಜರ್ ಧೀರೇಂದ್ರ ನಾಥ್ ಸಿಂಗ್ ಅವರು 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತೋರಿದ ಅಪ್ರತಿಮ ಶೌರ್ಯಕ್ಕಾಗಿ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವೀರಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದರು.

ರಾಷ್ಟ್ರಪತಿಗಳಿಂದ ಟೆಲಿಗ್ರಾಂ ಸಂದೇಶ!...

ಈ ಕುಟುಂಬದ ದೇಶಸೇವೆ ಕೇವಲ ಮೇಜರ್ ಸಿಂಗ್‌ ಅವರಿಗೆಷ್ಟೇ ಸೀಮಿತವಾಗಲಿಲ್ಲ. ಕುಮಾರಿ ಅವರ ಇಬ್ಬರು ಪುತ್ರರು 1988 ಮತ್ತು 1989ರಲ್ಲಿ ಸೇನಾಧಿಕಾರಿಗಳಾಗಿ ಸೇರ್ಪಡೆಯಾದರೆ, 2016ರಲ್ಲಿ ಒಬ್ಬ ಮೊಮ್ಮಗ ಸೇನೆಗೆ ಸೇರಿದರು. ಪ್ರಸ್ತುತ ಮತ್ತೊಬ್ಬ ಮೊಮ್ಮಗ ಮಧ್ಯಪ್ರದೇಶದ ಮೌನಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದಾನೆ. ಇವರ ಮೂರನೇ ಮಗ ದಂತವೈದ್ಯರಾಗಿದ್ದು, ಒಬ್ಬ ಮಗಳೂ ಇದ್ದಾರೆ. ನಮ್ಮ ಇಡೀ ಕುಟುಂಬವೇ ರಾಷ್ಟ್ರದ ಸೇವೆಯಲ್ಲಿ ಜೀವನವನ್ನು ಕಳೆದಿದೆ ಎಂದು ವಿಜಯ್ ಕುಮಾರಿ ಅಪಾರ ಹೆಮ್ಮೆಯಿಂದ ಸ್ಮರಿಸುತ್ತಾರೆ.
ವಿಜಯ್ ಕುಮಾರಿ ಅವರಿಗೆ ತಮ್ಮ ಪತಿಯ ವೀರಚಕ್ರ ಪ್ರಶಸ್ತಿಗೆ ಸಂಬಂಧಿಸಿದ ನೆನಪುಗಳು ಅತ್ಯಂತ ಪ್ರೀತಿಯ ಸಂಗತಿಯಾಗಿವೆ. 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ 25 ವರ್ಷದ ಮೇಜರ್ ಧೀರೇಂದ್ರ ನಾಥ್ ಸಿಂಗ್ ಅವರು ಕುಮಾನ್ ರೆಜಿಮೆಂಟ್‌ನ ಬೆಟಾಲಿಯನ್ ಕಂಪನಿಯ ನೇತೃತ್ವ ವಹಿಸಿ ಕೇರಿಯನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿದ್ದರು. ಈ ವೇಳೆ ಶತ್ರುಗಳ ಮೈನ್ ಸ್ಫೋಟಗೊಂಡು ತಮ್ಮ ಒಂದು ಕಾಲನ್ನು ಕಳೆದುಕೊಂಡರೂ, ಧೈರ್ಯಗುಂದದೆ ಶತ್ರುಗಳ ಬಂದೂಕುಗಳನ್ನು ಮೌನಗೊಳಿಸಿ ಶೌರ್ಯ ಮೆರೆದಿದ್ದರು.
ಪತಿಯ ಈ ಸಾಹಸಕ್ಕಾಗಿ ರಾಷ್ಟ್ರಪತಿಗಳಿಂದ ಬಂದಿದ್ದ ನಿಮ್ಮ ಶೌರ್ಯಕ್ಕಾಗಿ ವೀರಚಕ್ರ ಪ್ರಶಸ್ತಿ ನೀಡಲು ಸಂತೋಷಪಡುತ್ತೇವೆ ಎಂಬ ಟೆಲಿಗ್ರಾಂ ಸಂದೇಶ ಹಾಗೂ ಅವರ ಯುದ್ಧ ಪದಕಗಳನ್ನು ಕುಮಾರಿ ಅವರು ಇಂದಿಗೂ ತಮ್ಮ ಅಮೂಲ್ಯ ಸಂಪತ್ತಾಗಿ ಕಾಯ್ದುಕೊಂಡಿದ್ದಾರೆ ಮತ್ತು ತಮ್ಮ ಪತಿಯ ಈ ಸಾಧನೆಯ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಧಾನ್ಯದ ಬಿಕ್ಕಟ್ಟಿಗೆ ಒಂದು ಹೊತ್ತಿನ ಊಟವನ್ನೇ ತ್ಯಜಿಸಿದ್ದ ಕುಟುಂಬ

ಭಾರತ ಸ್ವಾತಂತ್ರ್ಯಗೊಂಡ ಆರಂಭಿಕ ವರ್ಷಗಳಲ್ಲಿ ಎದುರಾದ ಆಹಾರ ಧಾನ್ಯದ ಬಿಕ್ಕಟ್ಟಿನ ದಿನಗಳನ್ನು ವಿಜಯ್ ಕುಮಾರಿ ನೆನಪಿಸಿಕೊಳ್ಳುತ್ತಾರೆ. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕರೆಗೆ ಓಗೊಟ್ಟು, ದೇಶದ ಕಷ್ಟದ ಸಮಯದಲ್ಲಿ ನೆರವಾಗಲು ಇವರ ಕುಟುಂಬವು ಪ್ರತಿದಿನ ಒಂದು ಹೊತ್ತಿನ ಊಟವನ್ನು ತ್ಯಜಿಸಿ ಸಣ್ಣ ಕೊಡುಗೆ ನೀಡಿತ್ತು. ತಮ್ಮ ವೈಯಕ್ತಿಕ ಜೀವನ ಮತ್ತು ದೇಶದ ಪ್ರಯಾಣದ ನಡುವೆ ಹಲವು ಸಾಮ್ಯತೆಗಳನ್ನು ಕಾಣುವ ಅವರು, 1965ರ ಯುದ್ಧದಲ್ಲಿ ತಮ್ಮ ಪತಿ ಕಾಲನ್ನು ಕಳೆದುಕೊಂಡಿದ್ದನ್ನು ಜೀವನದ ದೊಡ್ಡ ಹಿನ್ನಡೆ ಎಂದು ಭಾವುಕರಾಗುತ್ತಾರೆ.
1966ರಲ್ಲಿ ಕೃತಕ ಕಾಲು ಪಡೆದ ಮೇಜರ್ ಸಿಂಗ್, ಗಾಯದ ಸಮಸ್ಯೆಯಿಂದಾಗಿ 1971ರಲ್ಲಿ ಸೇನಾ ಸೇವೆಯಿಂದ ನಿವೃತ್ತರಾಗಬೇಕಾಯಿತು. ಆದಾಗ್ಯೂ, ಎದೆಗುಂದದೆ ತಮ್ಮ ಇಬ್ಬರೂ ಪುತ್ರರನ್ನು ಸೇನೆಗೆ ಸೇರಿಸುವ ಮೂಲಕ ದೇಶಪ್ರೇಮ ಮೆರೆದರು. ಪುತ್ರರ ಪಾಸಿಂಗ್ ಔಟ್ ಪರೇಡ್‌ನಲ್ಲಿ ಭಾಗವಹಿಸಿದ್ದು ಅವರ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು. ಸ್ವತಂತ್ರ ಭಾರತ ಹುಟ್ಟಿದ ದಿನವೇ ಜನ್ಮ ತಾಳಿದ ವಿಜಯ್ ಕುಮಾರಿ ಅವರ ಕುಟುಂಬದ ಕಥೆಯು ದೇಶದ ಇತಿಹಾಸದೊಂದಿಗೇ ಬೆಸೆದುಕೊಂಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net