ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್‌ಗಳ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ | Anil Ambani

Anil Ambani
Anil Ambani
Published on
ಮುಂಬೈ: ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಸಮೂಹ ಸಂಸ್ಥೆಗಳ ಕುರಿತು 2020ರಲ್ಲಿ ನಡೆದ ಲೆಕ್ಕ ಪರಿಶೋಧನಾ ತಪಾಸಣೆ ವರದಿ ಆಧರಿಸಿ ಉದ್ಯಮಿ ಅನಿಲ್ ಅಂಬಾನಿ (Anil Ambani) ವಿರುದ್ಧ ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್ ಕೈಗೊಂಡಿದ್ದ ಎಲ್ಲ ಬಲವಂತದ ಕ್ರಮಗಳಿಗೆ ಬಾಂಬೆ ಹೈಕೋರ್ಟ್ ಬುಧವಾರ ಡಿ.24 ತಡೆ ನೀಡಿದೆ.
ವಂಚನೆ ಕುರಿತು 2016ರಲ್ಲಿದ್ದ ವ್ಯವಸ್ಥೆಯ ಬದಲಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2024ರಲ್ಲಿ ನೀಡಿದ್ದ ಮಹಾ ನಿರ್ದೇಶನಗಳಡಿ ಅಗತ್ಯವಿರುವಂತೆ ಆ ವರದಿಗೆ ಅರ್ಹ ಚಾರ್ಟರ್ಡ್ ಅಕೌಂಟೆಂಟ್ ಅವರ ಸಹಿ ಇರಲಿಲ್ಲವಾದ್ದರಿಂದ ಬಿಡಿಒ ಸಂಸ್ಥೆ ನೀಡಿದ ಲೆಕ್ಕಪರಿಶೋಧನಾ ವರದಿ ನಂಬಲರ್ಹವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ನ್ಯಾ. ಮಿಲಿಂದ್ ಜಾಧವ್ ಅವರಿದ್ದ ನ್ಯಾಯ ಪೀಠ ತಿಳಿಸಿತು.
ಆರ್‌ಬಿಐ 2024ರಲ್ಲಿ ನೀಡಿದ್ದ ಮಹಾ ನಿರ್ದೇಶನಗಳಲ್ಲಿ, ಬಾಹ್ಯ ಲೆಕ್ಕಪರಿಶೋಧಕರು ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಡ್ಡಾಯ ಅರ್ಹತೆ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದ ಬಳಿಕ, ಚಾರ್ಟರ್ಡ್ ಅಕೌಂಟೆಂಟ್ ಅಲ್ಲದ ವ್ಯಕ್ತಿಯ ಸಹಿಯಿರುವ ವಿಶೇಷ ಲೆಕ್ಕಪರಿಶೋಧನಾ ವರದಿಯನ್ನು ಅರ್ಹ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇಂತಹ ವರದಿಯನ್ನು ಬ್ಯಾಂಕ್‌ಗಳು ದಂಡಾತ್ಮಕ ಕ್ರಮಗಳಿಗೆ ಬಳಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಬ್ಯಾಂಕ್‌ಗಳು ತಾವೇ ಆರ್‌ಬಿಐ ನಿರ್ದೇಶನಗಳಲ್ಲಿ ತಿಳಿಸಿರುವ ಕಾನೂನಾತ್ಮಕ ನಡಾವಳಿಯನ್ನು ಮತ್ತು ಕಾಲಮಿತಿಗಳನ್ನು ಪರಿಪಾಲಿಸದೆ ಇದ್ದರೆ ಮತ್ತು ಕ್ರಮ ಕೈಗೊಳ್ಳದೆ ಹೋದರೆ ಅದು ದೇಶದ ವಿಶಾಲ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ದೀರ್ಘಕಾಲದ ನಿದ್ರೆಯಿಂದ ಎಚ್ಚೆತ್ತ ಬ್ಯಾಂಕ್‌ಗಳು 2013ರಿಂದ 2017ರ ನಡುವಿನ ಲೆಕ್ಕಪರಿಶೋಧನಾ ಅವಧಿಗೆ ಸಂಬಂಧಿಸಿದಂತೆ 2019ರಲ್ಲಿ ಲೆಕ್ಕಪರಿಶೋಧನಾ ತಪಾಸಣೆ ನಡೆಸಿವೆ. ಆದರೆ, 2016ರ ಆರ್‌ಬಿಐ ಮಹಾ ನಿರ್ದೇಶನಗಳಲ್ಲಿ ಉಲ್ಲೇಖಿಸಿದ್ದ ಕಾಲಮಿತಿಗಳನ್ನು ಪಾಲಿಸಿಲ್ಲ ಎಂದು ಪೀಠ ಕಿಡಿ ಕಾರಿತು. ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳು ಶೋ–ಕಾಸ್ ನೋಟಿಸ್‌ಗಳು ಮತ್ತು ವಂಚನೆ ವರ್ಗೀಕರಣ ಸಂಬಂಧಿತ ಕ್ರಮಗಳನ್ನು ಮುಂದುವರೆಸದಂತೆ ನ್ಯಾ. ಜಾಧವ್‌ ತಡೆಯಾಜ್ಞೆ ನೀಡಿದರು.
ಅಲ್ಲದೆ ಈ ಆದೇಶದ ಜಾರಿಗೆ ತಡೆ ನೀಡುವಂತೆ ಬ್ಯಾಂಕ್‌ಗಳು ಮತ್ತು ಬಿಡಿಒ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. “ಆರ್‌ಬಿಐಯ ಮಹಾ ನಿರ್ದೇಶನಗಳು ಕೇವಲ ಕಾಗದದ ಮೇಲಿರುವಂತಹವಲ್ಲ. ಬ್ಯಾಂಕ್‌ಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲು ದೀರ್ಘ ನಿದ್ರೆಯಿಂದ ಎಚ್ಚರಗೊಳ್ಳಲು ಅವು ಸಾಧನವೂ ಅಲ್ಲ,” ಎಂದು ನ್ಯಾಯಮೂರ್ತಿಗಳು ಹೇಳಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net