ಮಹಾತ್ಮ ಗಾಂಧಿ ಕುರಿತು ಪ್ರಬಂಧ ಬರೆದ ಪೋಕ್ಸೋ ಕೇಸ್ ಅಪರಾಧಿ; ಜೀವಾವಧಿ ಶಿಕ್ಷೆಯಿಂದ 12 ವರ್ಷಕ್ಕೆ ಶಿಕ್ಷೆ ಇಳಿಸಿದ ಬಾಂಬೆ ಹೈಕೋರ್ಟ್​| High Court

ಬಾಂಬೆ ಹೈಕೋರ್ಟ್​
ಬಾಂಬೆ ಹೈಕೋರ್ಟ್​
Published on
ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿರುವ ಅಪರಾಧಿಯೊಬ್ಬನಿಗೆ ಬಾಂಬೆ ಹೈಕೋರ್ಟ್(High Court)​ ಚಿಕ್ಕ ವಯಸ್ಸು, ಸುಧಾರಣಾ ಪ್ರಯತ್ನ ಹಾಗೂ ಜೈಲಿನಲ್ಲಿ ಮಹಾತ್ಮ ಗಾಂಧಿ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತೀರ್ಣನಾಗಿದ್ದನ್ನು ಪರಿಗಣಿಸಿ ಶಿಕ್ಷೆಯನ್ನು 12 ವರ್ಷಕ್ಕೆ ಇಳಿಸಿ ಆದೇಶ ನೀಡಿದೆ.
2016ರಲ್ಲಿ ನಡೆದ ಅಪ್ರಾಪ್ರ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೋಕ್ಸೊ ನ್ಯಾಯಾಲಯ 20 ವರ್ಷದ ಯುವಕನೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿತ್ತು. ಕಳೆದ 9 ವರ್ಷದಿಂದ ಜೈಲಿನಲ್ಲಿರುವ ಅಪರಾಧಿ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದನು.
ಅಪರಾಧಿಯ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್​ನ ನ್ಯಾ. ಸಾರಂಗ್ ಕೊತ್ವಾಲ್ ಮತ್ತು ಸಂದೇಶ್ ಪಾಟೀಲ್ ನೇತೃತ್ವದ ದ್ವಿಸದಸ್ಯ ಪೀಠ, ವಿಶೇಷ ಪೋಕ್ಸೋ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಆದಾಗ್ಯೂ ಅಪರಾಧಿಯ ಮೇಲೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಕಡಿಮೆ ಮಾಡಲು ಅರ್ಹತೆಗಳನ್ನು ಗುರುತಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಫೆ. 02ರಂದು ನ್ಯಾ. ಸಾರಂಗ್ ಕೊತ್ವಾಲ್ ಮತ್ತು ಸಂದೇಶ್ ಪಾಟೀಲ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ನೀಡಿದ್ದು, ಅಪರಾಧ ನಡೆದಾಗ ಅಪರಾಧಿಗೆ 20 ವರ್ಷ. ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. 2016 ಡಿಸೆಂಬರ್​​ನಿಂದಲೂ ಜೈಲಿನಲ್ಲಿದ್ದದ್ದನ್ನು ಗಮನಿಸಿದೆ.
ಮುಂದುವರೆದು ಜೈಲಿನಲ್ಲಿ ಮಹಾತ್ಮ ಗಾಂಧಿ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತೀರ್ಣನಾಗಿದ್ದು, ಅದಕ್ಕೆ ಸಂಬಂಧಪಟ್ಟಂತಹ ಪ್ರಮಾಣಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ. ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳ ಭಾಗವಹಿಸಿದ್ದನ್ನು ಸಹ ಪೀಠ ಪರಿಗಣಿಸಿದೆ. ಈ ಸುಧಾರಣೆಯನ್ನು ಮನ್ನಿಸಿ ಶಿಕ್ಷೆ ಕಡಿಮೆ ಮಾಡಿದೆ.
2016 ಡಿ. 06ರಂದು ಐದು ವರ್ಷದ ಬಾಲಕಿ ನೀರು ತರಲು ನೆರೆಯವರ ಮನೆಗೆ ಹೋದಾಗ, ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ತಿಳಿಸಲಾಗಿತ್ತು. ಬಳಿಕ ಎಂಟನೆ ವಯಸ್ಸಿನಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಲಕಿ ಸಾಕ್ಷ್ಯ ನುಡಿದಿದ್ದಳು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net