ಪೊಲೀಸ್ ವಾಹನದ ಮೇಲೆಯೇ ಬಾಂಬ್ ದಾಳಿ!..ಬೆನ್ನು ತಟ್ಟಿಕೊಳ್ಳುವುದರಲ್ಲಿ ಸಿಎಂ ಬ್ಯುಸಿ ಎಂದು ಪಳನಿಸ್ವಾಮಿ ವಾಗ್ದಾಳಿ | Edappadi K Palaniswami

 Edappadi K Palaniswami | ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಾಗ್ದಾಳಿ
Edappadi K Palaniswami | ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಾಗ್ದಾಳಿ
Published on
ಚೆನ್ನೈ: ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಪೊಲೀಸ್ ವಾಹನದ ಮೇಲೆ ನಡೆದ ಬಾಂಬ್ ದಾಳಿಯನ್ನು ಉಲ್ಲೇಖಿಸಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಅಪರಾಧಿಗಳು ಪೊಲೀಸರು ಅಥವಾ ರಾಜ್ಯ ಸರ್ಕಾರದ ಬಗ್ಗೆ ಭಯವಿಲ್ಲದೆ ಆರಾಮಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪಳನಿಸ್ವಾಮಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಈ ಮಟ್ಟದ ಗಂಭೀರ ಘಟನೆಗಳು ನಡೆಯುತ್ತಿದ್ದರೆ, ಇತ್ತ ಸಿಎಂ ಸ್ಟಾಲಿನ್ ವಿಧಾನಸಭೆಯಲ್ಲಿ ತಮ್ಮ​ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಹೆಮ್ಮೆಪಡುತ್ತಿದ್ದಾರೆ, ಪೊಲೀಸರು ಮಧುರೈನಿಂದ ವೆಳ್ಳೈ ಕಾಳಿ ಎಂಬ ಅಪರಾಧಿಯನ್ನು ಹಿಡಿದು ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ಈ ದಾಳಿ ನಡೆದಿದೆ, ಈ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಪಿಎಸ್​ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಪೊಲೀಸರ ಬಗ್ಗೆಯಾಗಲಿ ಅಥವಾ ಈ ಸರ್ಕಾರದ ಬಗ್ಗೆಯಾಗಲಿ ಯಾವುದೇ ರೀತಿಯ ಭಯವಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಗೆಪಾಟಲಿಗೀಡು ಮಾಡುತ್ತಿರುವ ಪರಿಸ್ಥಿತಿಯಲ್ಲಿ, ಆಡಳಿತದ ಚಕ್ರವನ್ನು ಹೇಗಾದರೂ ತಿರುಗಿಸುತ್ತಿರುವ ಮುಖ್ಯಮಂತ್ರಿ ಸ್ಟಾಲಿನ್ ಸದರಿ ಘಟನೆಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಹೇಳಿದ್ದೇನು..?

ಇದೇ ಘಟನೆಯ ಕುರಿತಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಪ್ರತಿಕ್ರಿಯೆ ನೀಡಿದ್ದು, ಡಿಎಂಕೆ ಸರ್ಕಾರ ರಾಜ್ಯದ ಪೊಲೀಸರ ಸುರಕ್ಷತೆಯನ್ನೇ ಲೂಟಿ ಮಾಡಿದೆ, ಸ್ಟಾಲಿನ್​ ಆಳ್ವಿಕೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನರಕದ ಆಳಕ್ಕೆ ಕುಸಿದಿದೆ ಎಂದರು.
ಸಾರ್ವಜನಿಕ ಸುರಕ್ಷತೆಯನ್ನು ಲೂಟಿ ಮಾಡುತ್ತಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿಸುವ ಆಡಳಿತವನ್ನು ಜನರು ಸಹಿಸುವುದಿಲ್ಲ, ತನ್ನ ಅಸಮರ್ಥತೆಯ ಮೂಲಕ ತಮಿಳುನಾಡನ್ನು ಹಿಂಸಾಚಾರದ ಮತ್ತು ರೌಡಿಗಳ ತಾಣವಾಗಿ ಪರಿವರ್ತಿಸಿದ ಡಿಎಂಕೆ ಸರ್ಕಾರವನ್ನು ತಮಿಳುನಾಡಿನ ಜನರು ನಿರ್ನಾಮ ಮಾಡುವ ದಿನ ದೂರವಿಲ್ಲ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net