BMC Elections | ಹೊಸ ಮೈತ್ರಿಗೆ ಠಾಕ್ರೆ ಬ್ರದರ್ಸ್​ ಸಜ್ಜು...ಈ ಸೀಟುಗಳಿಗಾಗಿ ಹಗ್ಗಜಗ್ಗಾಟ ಫಿಕ್ಸ್​

ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ
ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ
Published on
ಮುಂಬೈ: ಮುಂಬರುವ ಜನೆವರಿಯಲ್ಲಿ ನಡೆಯಲಿರುವ ಬಿಎಂಸಿ ಚುನಾವಣೆಗೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಸೋದರಸಂಬಂಧಿ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಸೇನೆ ಯುಬಿಟಿ 120 ರಿಂದ 125 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಇತ್ತ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸುಮಾರು 80 ರಿಂದ 90 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಸೀಟು ಹಂಚಿಕೆ ಸೂತ್ರ

2017ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ, ಶಿವಸೇನೆ ಯುಬಿಟಿ 84 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಸದ್ಯ ಆ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಎಂಎನ್ಎಸ್ ಒಪ್ಪಿಗೆ ಸೂಚಿಸುತ್ತಾ ಕಾದು ನೋಡಬೇಕು.
ವರ್ಲಿ, ದಾದರ್, ಕಲಾಚೌಕಿ ಮತ್ತು ಮುಲುಂಡ್ ಭಾಂಡಪ್‌ನಂತಹ ಮರಾಠಿ ಪ್ರಾಬಲ್ಯದ ಪ್ರದೇಶಗಳಲ್ಲಿ ತಮ್ಮ ಪಕ್ಷದ ಬಲವಾದ ಅಸ್ತಿತ್ವವಿದೆ ಎನ್ನುವುದು ಎಂಎನ್‌ಎಸ್ ವಾದವಾಗಿದ್ದು, ಆದ್ದರಿಂದ ಶಿವಸೇನೆ ಯುಬಿಟಿ ಉಳಿಸಿಕೊಳ್ಳಲು ನಿರ್ಧರಿಸಿರುವ 84 ಸ್ಥಾನಗಳಲ್ಲಿ ಕೆಲವನ್ನು ತನಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದೆ. ಮತಗಳ ವಿಭಜನೆಯನ್ನು ತಪ್ಪಿಸಲು, ಠಾಕ್ರೆ ಸಹೋದರರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಎಡ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಎನ್‌ಸಿಪಿ ಶರದ್ ಪವಾರ್ ಬಣ ಈ ಮೈತ್ರಿಕೂಟಕ್ಕೆ ಸೇರಿದರೆ, ಆ ಪಕ್ಷಕ್ಕೆ ಸುಮಾರು 15 ರಿಂದ 20 ಸ್ಥಾನಗಳನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಮಹಾಯುತಿ ಕಥೆ...

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ, ವಿಶೇಷವಾಗಿ ಸೀಟು ಹಂಚಿಕೆ ಸೂತ್ರದ ಕುರಿತು, ಆಡಳಿತಾರೂಢ ಮಹಾಯುತಿ ಪಾಲುದಾರರಾದ ಬಿಜೆಪಿ ಮತ್ತು ಶಿವಸೇನೆ ನಡುವಿನ ಜಗಳ ತೀವ್ರಗೊಂಡಿದ್ದು, ಮುಂಬೈ ಚುನಾವಣೆಗೆ ಸಿದ್ಧತೆಗಳು ವೇಗ ಪಡೆದುಕೊಳ್ಳುತ್ತಿದ್ದಂತೆ ಮೈತ್ರಿಕೂಟದೊಳಗಿನ ರಾಜಕೀಯ ಚರ್ಚೆಗಳು ಕೂಡ ವೇಗ ಪಡೆದಿವೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ನಗರದ ಹಲವಾರು ವಾರ್ಡ್‌ಗಳಲ್ಲಿ ತನ್ನ ಬಲವಾದ ನೆಲೆಯನ್ನು ಮುಂದಿಟ್ಟು 90 ರಿಂದ 100 ಸ್ಥಾನಗಳನ್ನು ಕೇಳಿದೆ ಎನ್ನಲಾಗಿದ್ದು, ಬಿಜೆಪಿ 135 ರಿಂದ 140 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 2017 ರಲ್ಲಿ 227 ಸ್ಥಾನಗಳಲ್ಲಿ ನಡೆದ ಬಿಎಂಸಿ ಚುನಾವಣೆಯಲ್ಲಿ, ಶಿವಸೇನೆ 84 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 82 ಸ್ಥಾನಗಳನ್ನು ಗಳಿಸಿತ್ತು. ಆ ಸಂದರ್ಭದಲ್ಲಿ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net