'ಕೇಜ್ರಿವಾಲ್ ಸರ್ವಾಧಿಕಾರ ಧೋರಣೆಗೆ ಸಿಕ್ಕ ಪ್ರತಿಫಲ': 7 ಸಂಸದರ ರಾಜೀನಾಮೆ ಬೆನ್ನಲ್ಲೇ ಎಎಪಿ ವಿರುದ್ಧ Rekha Gupta ವಾಗ್ದಾಳಿ

 Rekha Gupta:
Rekha Gupta:
Published on

ಪ್ರಮುಖ ಮುಖ್ಯಾಂಶಗಳು

  • ಎಎಪಿಯಿಂದ ಹೊರಬಂದ ಏಳು ಸಂಸದರು ಆಮ್​ ಆದ್ಮಿ ಪಕ್ಷಕ್ಕೆ ಭಾರಿ ಹೊಡೆತ
  • ಅರವಿಂದ್ ಕೇಜ್ರಿವಾಲ್ ಅವರ ಕಾರ್ಯವೈಖರಿ ಸರ್ವಾಧಿಕಾರದ್ದು ಎಂದು ರೇಖಾ ಗುಪ್ತಾ ಕಿಡಿ
  • ಈಗ ಎಎಪಿಯಲ್ಲಿ ಯಾವ ಸಾಮಾನ್ಯ ಮನುಷ್ಯ ಉಳಿದುಕೊಂಡಿಲ್ಲ ಎಂದ ರೇಖಾ ಗುಪ್ತಾ
ನವದೆಹಲಿ: ಎಎಪಿ(Aam Aadmi Party) ರಾಜ್ಯಸಭೆ ಉಪನಾಯಕ ಸ್ಥಾನದಿಂದ ರಾಘವ್​ ಚಡ್ಡಾರನ್ನು ಕೆಳಗಿಳಿಸಿದ ಬೆನ್ನಲ್ಲೇ ಅವರು ಮತ್ತು ಏಳು ಮಂದಿ ಸಂಸದರು ಬಿಜೆಪಿಗೆ ಸೇರ್ಪಡೆಯಾಗಿರುವುದು ಆಪ್​​ ಪಕ್ಷಕ್ಕೆ ಭಾರಿ ಹೊಡೆತವನ್ನು ಕೊಟ್ಟಿದೆ. ಈ ಬಗ್ಗೆ ದೆಹಲಿ ಸಿಎಂ ರೇಖಾ ಗುಪ್ತಾ(Rekha Gupta) ಅವರು ಮಾತನಾಡಿದ್ದು, ಅರವಿಂದ್​​ ಕೇಜ್ರಿವಾಲ್​ರ ಸರ್ವಾಧಿಕಾರಕ್ಕೆ ನೇರವಾಗಿ ಬಿದ್ದ ಪೆಟ್ಟು ಎಂದು ವಾಗ್ದಾಳಿ ನಡೆಸಿದ್ದಾರೆ.
ಆಮ್​ ಆದ್ಮಿಯ ಏಳು ಸಂಸದರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವುದು ದೇಶದ ರಾಜಕಾರಣದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ. ಇಲ್ಲಿಯವರೆಗೂ ಎಎಪಿಯಲ್ಲಿದ್ದ ಅಸಮಾಧಾನ ಮತ್ತು ಬಿಕ್ಕಟ್ಟು ಸದ್ಯ ತುತ್ತತುದಿಗೆ ತಲುಪಿದೆ. ಈ ಬಗ್ಗೆ ರೇಖಾ ಗುಪ್ತಾ ಅವರು ತೀಕ್ಷ್ಣವಾಗಿ ಮಾತನಾಡಿದ್ದಾರೆ.

ಸರ್ವಾಧಿಕಾರಕ್ಕೆ ತಕ್ಕ ಪಾಠ

ಏಳು ಸಂಸದರು ಒಟ್ಟಾಗಿ ಪಕ್ಷ ತೊರೆದಿರುವುದು ಕೇಜ್ರಿವಾಲ್​ ಸರ್ವಾಧಿಕಾರ ಧೋರಣೆಗೆ ಸಿಕ್ಕಂತಹ ತಕ್ಕ ಪಾಠವಾಗಿದೆ. ಯಾವ ಆಶಯವನ್ನಿಟ್ಟುಕೊಂಡು ಪಕ್ಷವನ್ನು ಕಟ್ಟಿಕೊಂಡರೋ ಅವೆಲ್ಲವು ಮಣ್ಣು ಪಾಲಾಗಿದೆ. ಈಗ ಅವರ ಪಕ್ಷದಲ್ಲಿ ಒಬ್ಬ ಸಾಮಾನ್ಯ ಮನುಷ್ಯನು ಉಳಿದುಕೊಂಡಿಲ್ಲ. ಕೇವಲ ಅಧಿಕಾರ ದಾಹಿಗಳು, ಸರ್ವಾಧಿಕಾರಿ ಮನಸ್ಥಿತಿ ಉಳ್ಳವರು ಇದ್ದಾರೆ ಎಂದು ಗುಪ್ತಾ ಅವರು ಕಿಡಿಕಾರಿದರು.

ಯಾರ್ಯಾರು ಬಿಜೆಪಿ ಸೇರ್ಪಡೆ

ಹರಭಜನ್​ ಸಿಂಗ್​, ರಾಜೇಂದ್ರ ಗುಪ್ತಾ, ವಿಕ್ರಮ್​ ಸಾಹ್ನಿ, ಸ್ವಾತಿ ಮಾಲಿವಾಲ್​, ಅಶೋಖ್​ ಮಿತ್ತಲ್​​ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಶುಕ್ರವಾರ ರಾಘವ್​ ಚಡ್ಡಾ ಮಾತನಾಡಿದ್ದರು. ಎಎಪಿಯ ಹತ್ತು ರಾಜ್ಯಸಭಾ ಸದಸ್ಯರಲ್ಲಿ ಏಳು ಮಂದಿ ಬಿಜೆಪಿಯನ್ನು ಸೇರಿದ್ದಾರೆ. ಈ ಸಂಬಂಧ ರಾಜ್ಯಸಭೆಯ ಸಭಾಪತಿ ಸಿಪಿ ರಾಧಕೃಷ್ಣನ್ ಅವರಿಗೆ ಪತ್ರ ನೀಡಲಿದ್ದೇವೆ. ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ. ಅಗತ್ಯವಿರುವ ಎಲ್ಲ ದಾಖಲೆ ಸಲ್ಲಿಸುತ್ತೇವೆ ಎಂದು ಹೇಳಿದ್ದರು.
ಎಎಪಿಯಲ್ಲಿ ಆಂತರಿಕ ಶಿಸ್ತು ಮತ್ತು ನಾಯಕತ್ವದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಈ ಹೊತ್ತಲ್ಲಿ ಏಕಾಏಕಿ ಏಳು ಮಂದಿ ಪಕ್ಷ ತೊರೆದಿರುವುದು ಮುಂದಿನ ಭವಿಷ್ಯಕ್ಕೂ ದೊಡ್ಡ ಹೊಡೆತ ನೀಡಲಿದೆ. ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಭಾರಿ ಹಿನ್ನಡೆಯನ್ನು ಕಾಯ್ದುಕೊಂಡಿತ್ತು. ಸದ್ಯ ಸಂಸದರ ನಡೆಯು ಎಎಪಿಯನ್ನು ಯಾವ ಮಟ್ಟಕ್ಕೆ ಕರೆದೊಯ್ಯುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net