Sonia Gandhi | ನೆಹರೂರನ್ನು ಕೆಣಕುವುದೇ ಕೇಂದ್ರ ಸರ್ಕಾರದ ಪ್ರಮುಖ ಗುರಿ: ಸೋನಿಯಾ ಗಾಂಧಿ
Sonia Gandhi | ನೆಹರು ಸೆಂಟರ್ ಇಂಡಿಯಾ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ
Published on:
Copied
Follow Us
ದೆಹಲಿ: ಜವಾಹರಲಾಲ್ ನೆಹರೂ ಅವರನ್ನು ಕೆಣಕುವುದೇ ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಬಿಜೆಪಿ ನಾಯಕರನ್ನು ಟೀಕಿಸಿರುವ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ದೇಶದ ಇತಿಹಾಸದಿಂದ ಮೊದಲ ಪ್ರಧಾನಿಯ ಹೆಸರನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜವಾಹರ್ ಭವನದಲ್ಲಿ ನಡೆದ ನೆಹರು ಸೆಂಟರ್ ಇಂಡಿಯಾ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ನೆಹರುರನ್ನು ಅವಹೇಳನ ಮಾಡುವ, ವಿರೂಪಗೊಳಿಸುವ, ಕೀಳಾಗಿ ಕಾಣುವ ಮತ್ತು ಮಾನಹಾನಿ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದ್ದು, ಇದು ಸ್ವೀಕಾರ್ಹ ನಡೆ ಅಲ್ಲ ಎಂದರು.
ಕೇಂದ್ರ ಸರ್ಕಾರದ ಉದ್ದೇಶವೆಂದರೆ ನೆಹರು ಅವರ ವ್ಯಕ್ತಿತ್ವವನ್ನು ಕುಂದಿಸುವುದು ಮಾತ್ರವಲ್ಲದೆ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರ ಪಾತ್ರವನ್ನು ಮರೆಮಾಚುವುದು. ಸ್ವಾತಂತ್ರ್ಯದ ಬಳಿಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದ ದೇಶಕ್ಕೆ ನೆಹರು ಅವರ ಕೊಡುಗೆ ಅಪಾರ ಎಂದರು. ಇತಿಹಾಸವನ್ನು ಪುನಃ ಬರೆಯುವ ಮತ್ತು ಸ್ವಾರ್ಥಪರ ಪ್ರಯತ್ನದಲ್ಲಿ ಬಹುಮುಖ ಪರಂಪರೆಯನ್ನು ಕೆಡವುವ ಪ್ರಯತ್ನಗಳು ಸ್ವೀಕಾರಾರ್ಹವಲ್ಲ ಎಂದರು.
ನೆಹರುರನ್ನು ಕೀಳಾಗಿ ಕಾಣುತ್ತಿರುವ ಯೋಜನೆಯ ಹಿಂದಿರುವವರು ಸ್ವಾತಂತ್ರ್ಯ ಚಳವಳಿಯಲ್ಲಿ ಅಥವಾ ಸಂವಿಧಾನ ರಚನೆಯಲ್ಲಿ ಯಾವುದೇ ಪಾತ್ರ ನಿರ್ವಹಿಸದ ಮತ್ತು ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾದ ವಾತಾವರಣವನ್ನು ಬೆಳೆಸಿದ್ದರು ಎಂದು ಟೀಕಿಸಿದರು. ಲಕ್ಷಾಂತರ ಭಾರತೀಯರ ಪಾಲಿಗೆ ನೆಹರೂ ದೀಪವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ವ್ಯಕ್ತಿಯ ಜೀವನ ಮತ್ತು ಕಾರ್ಯವನ್ನು ವಿಶ್ಲೇಷಿಸುವುದು ಮತ್ತು ವಿಮರ್ಶಿಸುವುದು ಸಹಜ ಎಂದು ಸೋನಿಯಾ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ನೆಹರೂ ಅವರ ಕೊಡುಗೆಯನ್ನು ಕಡಿಮೆ ಅಂದಾಜು ಮಾಡಿದ್ದು ಕಾಂಗ್ರೆಸ್ ಪಕ್ಷ, ನೆಹರು ಅವರ ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನಗಳನ್ನು ಮಾತ್ರ ಎತ್ತಿ ತೋರಿಸಿದ್ದೇವೆಯೆ ಹೊರತು, ಅವರನ್ನು ಅಗೌರವಿಸಿಲ್ಲ ಎಂದಿದೆ(ಏಜೆನ್ಸೀಸ್).