ಮೋದಿ ಸರ್ಕಾರದಿಂದ ಕಂತುಗಳಲ್ಲಿ ಸಾರ್ವಜನಿಕರ ಹಣ ಲೂಟಿ; 8 ದಿನಗಳಲ್ಲಿ 3ನೇ ಬಾರಿ ಇಂಧನ ಬೆಲೆ ಹೆಚ್ಚಳಕ್ಕೆ ಖರ್ಗೆ ಆಕ್ರೋಶ! | Mallikarjun Kharge

Mallikarjun Kharge | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Mallikarjun Kharge | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Published on
ದೆಹಲಿ: ಕಳೆದ ಎಂಟು ದಿನಗಳ ಅವಧಿಯಲ್ಲಿ ಮೂರನೇ ಬಾರಿಗೆ ಇಂಧನ ಬೆಲೆಗಳನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಶನಿವಾರ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಖರ್ಗೆ, ಕೇಂದ್ರ ಸರ್ಕಾರವು ಸಾರ್ವಜನಿಕರ ಕಷ್ಟದ ದುಡಿಮೆಯ ಹಣವನ್ನು ಕಂತುಗಳಲ್ಲಿ ಲೂಟಿ ಮಾಡುತ್ತಿದೆ, ಪ್ರಸ್ತುತ ದೇಶವನ್ನು ಆಳುತ್ತಿರುವ ಬಿಜೆಪಿ ಸರ್ಕಾರದಲ್ಲಿ ನಾಯಕತ್ವದ ತೀವ್ರ ಬಿಕ್ಕಟ್ಟು ಎದ್ದುಕಾಣುತ್ತಿದೆ ಎಂದು ದೂರಿದ್ದಾರೆ.
ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಎದುರಾದಾಗ ಪ್ರಪಂಚದ ಇತರ ದೇಶಗಳು ತಮ್ಮ ನಾಗರಿಕರಿಗೆ ಬೆಲೆ ಕಡಿತದ ಮೂಲಕ ಬಿಡುಗಡೆ ನೀಡುತ್ತಿದ್ದರೆ, ಬಿಜೆಪಿ ಸರ್ಕಾರ ಮಾತ್ರ ತನ್ನದೇ ಜನರನ್ನು ನಿರಂತರವಾಗಿ ಲೂಟಿ ಮಾಡುವಲ್ಲಿ ಬ್ಯುಸಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿದಿನ ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ಕೇಂದ್ರ ತೆರಿಗೆಯನ್ನು ವಿಧಿಸುತ್ತಿದ್ದರೂ ಬಿಜೆಪಿಯ ಹಣದ ಹಸಿವು ಇನ್ನು ಮುಗಿದಿಲ್ಲ ಎಂದು ಖರ್ಗೆ ಕಿಡಿಕಾರಿದ್ದಾರೆ.
ಈ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಣನೀಯವಾಗಿ ಕುಸಿದಿದ್ದ ಅವಧಿಯಲ್ಲೂ ಅದರ ಲಾಭವನ್ನು ಸಾಮಾನ್ಯ ಜನರಿಗೆ ವರ್ಗಾಯಿಸದೆ ಸರ್ಕಾರವು ನಿರ್ದಯವಾಗಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿತ್ತು, ಜಾಗತಿಕವಾಗಿ ಬಿಕ್ಕಟ್ಟು ತಲೆದೋರಿದ ಸಮಯದಲ್ಲಿ ಬಿಜೆಪಿ ನಾಯಕರು ಕೇವಲ ಚುನಾವಣೆಗಳಲ್ಲಿ ಮುಳುಗಿದ್ದರು ಮತ್ತು ಜನರಿಗೆ ಮಾತ್ರ ತ್ಯಾಗ ಮಾಡುವಂತೆ ಬೋಧಿಸುತ್ತಿದ್ದರು. ಆದರೆ ಅದರ ಬೆನ್ನಲ್ಲೇ ಕೇವಲ ಎಂಟು ದಿನಗಳಲ್ಲಿ ಮೂರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದ್ದಾರೆ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಧನ ದರಗಳು ಅತ್ಯಂತ ಕಡಿಮೆ ಇವೆ ಎಂದು ನಮಗೆ ಸುಳ್ಳು ಹೇಳಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ನಿದ್ರಾಜನಕ ಮಾತ್ರೆ ನೀಡಿದ್ದ ಪ್ರಧಾನಿ ಮೋದಿ: ಖರ್ಗೆ ಆರೋಪ

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಭುಗಿಲೆದ್ದಾಗ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರಿಗೆ ಎಲ್ಲವೂ ನಿಯಂತ್ರಣದಲ್ಲಿದೆ ಎಂಬ ನಿದ್ರಾಜನಕ ಮಾತ್ರೆ ನೀಡುವಲ್ಲಿ ನಿರತರಾಗಿದ್ದರು, ಆದರೆ ಅದೇ ಸಮಯದಲ್ಲಿ ಜಗತ್ತಿನ ಪ್ರಮುಖ ದೇಶಗಳು ತಮ್ಮ ನಾಗರಿಕರ ಬೆನ್ನಿಗೆ ನಿಂತಿದ್ದವು ಎಂದು ಖರ್ಗೆ ತಿಳಿಸಿದ್ದಾರೆ. ಇದಕ್ಕೆ ಉದಾಹರಣೆಗಳನ್ನು ನೀಡಿರುವ ಅವರು, ಇಟಲಿ ದೇಶವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಜನರಿಗೆ ನೆರವಾಗಿದ್ದರೆ, ಆಸ್ಟ್ರೇಲಿಯಾ ದೇಶವು ಅಬಕಾರಿ ಸುಂಕವನ್ನು ಗಣನೀಯವಾಗಿ ಇಳಿಸಿ ಅಲ್ಲಿನ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ಸುಮಾರು ಹದಿನೇಳು ರೂಪಾಯಿಗಳಷ್ಟು ಕಡಿತಗೊಳಿಸಿದೆ.
ಅದೇ ರೀತಿ ಜರ್ಮನಿ ದೇಶವು ತೈಲ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಇಂಧನ ಬೆಲೆಯಲ್ಲಿ 17-19 ರೂಪಾಯಿಗಳಷ್ಟು ಇಳಿಕೆ ಮಾಡಿದೆ. ಬ್ರಿಟನ್ ಸರ್ಕಾರವು ಪ್ರತಿ ಮನೆಗೆ 100 ಪೌಂಡ್ ತೈಲ ಧನಸಹಾಯ ನೀಡಿದ್ದಲ್ಲದೆ ಇಂಧನ ಮತ್ತು ವಿದ್ಯುತ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ. ಐರ್ಲೆಂಡ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 250 ಮಿಲಿಯನ್ ಯುರೋಗಳ ಬೃಹತ್ ಪರಿಹಾರ ಪ್ಯಾಕೇಜ್ ಘೋಷಿಸುವ ಮೂಲಕ ಪೆಟ್ರೋಲ್ ಬೆಲೆಯನ್ನು ಸುಮಾರು 0.15 ಯುರೋ ಮತ್ತು ಡೀಸೆಲ್ ಬೆಲೆಯನ್ನು 0.20 ಯುರೋಗಳಷ್ಟು ಕಡಿಮೆ ಮಾಡಿದೆ ಎಂದು ಖರ್ಗೆ ವಿವರಿಸಿದ್ದಾರೆ.

ಈ ಲೂಟಿಯಲ್ಲಿ ಯಾರಿಗೆಲ್ಲಾ ಪಾಲು..?

ನರೇಂದ್ರ ಮೋದಿ ಅವರೇ, ಈ ಕಂತು ಆಧಾರಿತ ಲೂಟಿಯ ಪಾಲು ಯಾರಿಗೆಲ್ಲ ಹೋಗುತ್ತಿದೆ ಮತ್ತು ಇಷ್ಟೊಂದು ದೊಡ್ಡ ಜಾಗತಿಕ ವಿಷಯದಲ್ಲಿ ನೀವು ಯಾಕೆ ರಾಜಿ ಮಾಡಿಕೊಂಡಿದ್ದೀರಿ ಎಂದು ದೇಶಕ್ಕೆ ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿರುವ ಖರ್ಗೆ, ಪ್ರಸ್ತುತ ಮೋದಿ ಸರ್ಕಾರದಲ್ಲಿರುವ ನಿಜವಾದ ಬಿಕ್ಕಟ್ಟು ನಾಯಕತ್ವದ್ದು ಎಂಬುದು ಈಗ ದೇಶದ 140 ಕೋಟಿ ಭಾರತೀಯರಿಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ ಎಂದು ದೂರಿದ್ದಾರೆ.
ಶನಿವಾರ ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯ ತೈಲ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 87 ಪೈಸೆ ಮತ್ತು 81 ಪೈಸೆಯಷ್ಟು ಹೆಚ್ಚಳ ಮಾಡಿವೆ. ಇದರೊಂದಿಗೆ ಕಳೆದ ಹತ್ತು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ದೇಶದಲ್ಲಿ ಇಂಧನ ದರ ಲೀಟರ್‌ಗೆ ಒಟ್ಟಾರೆ ಐದು ರೂಪಾಯಿಗಳಷ್ಟು ಏರಿಕೆಯಾದಂತಾಗಿದೆ. ಕಳೆದ ಮೇ ಹದಿನೈದರಂದು ದೀರ್ಘಾವಧಿಯ ವಿರಾಮದ ಬಳಿಕ ತೈಲ ಕಂಪನಿಗಳು ಮೊದಲ ಬಾರಿಗೆ ಲೀಟರ್‌ಗೆ ತಲಾ 3 ರೂಪಾಯಿ ಮತ್ತು ಮೇ 19 ರಂದು 90 ಪೈಸೆಯಷ್ಟು ಬೆಲೆ ಹೆಚ್ಚಳ ಮಾಡಿದ್ದವು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net