ಆಂದೋಲನವೇನೋ ನಿಂತಿತು, ವಿದ್ಯಾರ್ಥಿಗಳು ಕಟ್ಟಿದ ರಾಜಕೀಯ ಪಕ್ಷ ಅಸೋಮ ಗಣ ಪರಿಷತ್ (ಎಜಿಪಿ) ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂತು. ಆದರೆ 1985ರ ಒಪ್ಪಂದ ಕಾರ್ಯರೂಪಕ್ಕಿಳಿಯಲೇ ಇಲ್ಲ. ಈಗಿನ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಈ ಬಗ್ಗೆ ಗಂಭೀರ ನಿಲುವು ತಳೆದಿದ್ದಾರೆ. ಅಕ್ರಮ ವಲಸಿಗರನ್ನು ಹೊರಗೆ ಕಳುಹಿಸುವುದು ತನ್ನ ಗುರಿ ಎಂದು ಅಸ್ಸಾಂ ಬಿಜೆಪಿ ಈ ಬಾರಿಯ ಚುನಾವಣಾ ಘೋಷಣಾಪತ್ರದಲ್ಲೇ ಹೇಳಿಕೊಂಡಿದೆ. ಹಿಮಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಟ್ ಆಫ್ ಇಯರ್ 1971ರ ಬದಲು 1951 ಆಗಬೇಕು, ಆ ವರ್ಷದ ನಂತರ ರಾಜ್ಯಕ್ಕೆ ಬಂದ ಅಕ್ರಮ ವಲಸಿಗರನ್ನು ಹಿಂದಕ್ಕಟ್ಟಲೇಬೇಕು ಎಂದು ಹೇಳಿಯೂ ಇದ್ದಾರೆ. ವಲಸಿಗರು ಮುಸ್ಲಿಮರು, ಅವರು ಬಿಜೆಪಿಯ ವಿರೋಧಿಗಳು ಎನ್ನುವುದನ್ನು ಅವರು ಬಿಂಬಿಸಿದ ಬಗೆಯೂ ಆಸಕ್ತಿಕರ. ರಾಜ್ಯದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ರಮ ವಲಸಿಗ ಬಂಗಾಳಿ ಮುಸ್ಲಿಮರೇ ಬಹುಸಂಖ್ಯಾತರು, ಅವರೆಂದೂ ಬಿಜೆಪಿಗೆ ಮತ ನೀಡುವುದಿಲ್ಲ, ಹಾಗಾಗಿ ಆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುವುದೇ ವ್ಯರ್ಥ ಎಂದು ಬಿಸ್ವಾ ಶರ್ಮಾ ಅವರ ಅಭಿಮತ.