ಬಿಜೆಪಿ ವಿರೋಧಿಸಿದ್ರೆ ನಿನ್ನ ಮನೆ ಧ್ವಂಸ ಮಾಡ್ತಾರೆ ಎಂದು ಪಠಾಣ್‌ಗೆ ಹೆದರಿಸಿದ್ದ ಆ ಮುಸ್ಲಿಂ ಸಂಸದ ಯಾರು..? ಸತ್ಯ ಬಿಚ್ಚಿಟ್ಟ ಮಹುವಾ! | Yusuf Pathan

Yusuf Pathan | ಸಂಸದ ಯೂಸುಫ್ ಪಠಾಣ್
Yusuf Pathan | ಸಂಸದ ಯೂಸುಫ್ ಪಠಾಣ್
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷವು ಭಾರಿ ಬಂಡಾಯವನ್ನು ಎದುರಿಸುತ್ತಿರುವ ಬೆನ್ನಲ್ಲೇ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಡೆದಿದ್ದ ಹಳೆಯ ಘಟನೆಯೊಂದು ಈಗ ಮತ್ತೆ ಮುಂಚೂಣಿಗೆ ಬಂದಿದೆ. ಬಂಡಾಯ ಸಂಸದ ಯೂಸುಫ್ ಪಠಾಣ್ (Yusuf Pathan) ಅವರಿಗೆ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು ಎಂಬ ವಿಷಯವನ್ನು ಶ್ರೀನಗರದ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹ್ದಿ ಮತ್ತು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ನೆನಪಿಸಿಕೊಂಡಿದ್ದಾರೆ.
ಯೂಸುಫ್ ಪಠಾಣ್ ಸೇರಿದಂತೆ ಟಿಎಂಸಿಯ 20 ಬಂಡಾಯ ಸಂಸದರು ತಾವು ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಜೊತೆ ವಿಲೀನಗೊಳ್ಳಲು ನಿರ್ಧರಿಸಿರುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಿದ ಮರುದಿನವೇ ಈ ಹಳೆಯ ಸಂಗತಿ ಆಚೆ ಬಂದಿದ್ದು, ಮಮತಾ ಬ್ಯಾನರ್ಜಿ ಅವರ ಪಕ್ಷದೊಳಗಿನ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ.

ಯೂಸುಫ್ ತೀವ್ರವಾಗಿ ನಡುಗುತ್ತಿದ್ದರು: ಮೆಹ್ದಿ ವಿವರಣೆ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ಇತರ ವಿಷಯಗಳ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘಟನೆಯನ್ನು ಮೆಹ್ದಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೆಹ್ದಿ ಪ್ರಕಾರ, ಯೂಸುಫ್ ಪಠಾಣ್ ಅವರು ಟಿಎಂಸಿ ಸಂಸದರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾಗ, ಮತ್ತೊಂದು ಪಕ್ಷದ ಮುಸ್ಲಿಂ ಸಂಸದರೊಬ್ಬರು ಅವರನ್ನು ತಡೆದು, ಪ್ರತಿಭಟನೆಯಿಂದ ದೂರ ಸರಿಯುವಂತೆ ಸಲಹೆ ನೀಡಿದ್ದರು.

ಆ ಘಟನೆಯ ಬಳಿಕ ಯೂಸುಫ್ ಪಠಾಣ್ ಅವರು ತೀವ್ರ ಆತಂಕಗೊಂಡವರಂತೆ ತಮ್ಮ ಸೀಟಿಗೆ ಮರಳಿದರು ಎಂದು ಮೆಹ್ದಿ ಹೇಳಿದ್ದಾರೆ. ನಾನು ಯೂಸುಫ್ ಅವರ ಮುಖದಲ್ಲಿನ ಬದಲಾವಣೆಯನ್ನು ನೋಡಿದೆ, ಅವರು ತುಂಬಾ ನಡುಗುತ್ತಿದ್ದರು ಎಂದು ಬರೆದಿರುವ ಮೆಹ್ದಿ, ನಂತರ ತಾವು ಯೂಸುಫ್ ಅವರನ್ನು ವಿಚಾರಿಸಿದಾಗ, ತಮಗೆ ಬಿಜೆಪಿ ವಿರುದ್ಧ ಪ್ರತಿಭಟಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಆ ಸಂಸದ ಯೂಸುಫ್ ಅವರ ಬಳಿ, ನಿಮಗೆ ಏನಾಗಿದೆ? ನೀವು ಬಿಜೆಪಿಯನ್ನು ಏಕೆ ವಿರೋಧಿಸುತ್ತಿದ್ದೀರಿ, ಅವರು ಗುಜರಾತ್‌ನಲ್ಲಿರುವ ನಿಮ್ಮ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುತ್ತಾರೆ ಎಂದು ಹೆದರಿಸಿದ್ದರು ಎಂದು ಮೆಹ್ದಿ ತಿಳಿಸಿದ್ದಾರೆ.

ಓವೈಸಿ ಹೆಸರು ಉಲ್ಲೇಖಿಸಿ ಪಠಾಣ್ ವಿರುದ್ಧ ಮಹುವಾ ಮೊಯಿತ್ರಾ ಕಿಡಿ

ಮೆಹ್ದಿ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಆ ಘಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಂದು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ತಾವು ಮಧ್ಯಪ್ರವೇಶಿಸಿ, ಪಕ್ಷವು ನಿಮ್ಮ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಯೂಸುಫ್ ಪಠಾಣ್ ಅವರಿಗೆ ಧೈರ್ಯ ತುಂಬಿದ್ದಾಗಿ ಮೊಯಿತ್ರಾ ಹೇಳಿದ್ದಾರೆ.
ಧೈರ್ಯ ಮತ್ತು ಬೆನ್ನುಮೂಳೆಯೇ ಇಲ್ಲದ ಇಂತಹ ಒಬ್ಬ ಬೆನ್ನಿಗೆ ಚೂರಿ ಹಾಕಿದ ದ್ರೋಹಿಗಾಗಿ ನಾನು ಹೋರಾಡಿದೆನಲ್ಲಾ ಎಂಬ ಬೇಸರವಿದೆ. ಇಷ್ಟೊಂದು ಹೆದರುವ ಹೇಡಿ (ಫಟ್ಟು) ಕ್ರಿಕೆಟ್ ಕಾಮೆಂಟರಿ ಮಾಡಿಕೊಂಡೇ ಇರಬೇಕಿತ್ತು. ಎಂದು ಮೊಯಿತ್ರಾ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೆಹ್ದಿ, ಯೂಸುಫ್ ಪಠಾಣ್ ಅವರನ್ನು ಅಷ್ಟೊಂದು ಬೆಂಬಲಿಸಿದ ಮಹುವಾ ಮೊಯಿತ್ರಾ ಮತ್ತು ಟಿಎಂಸಿ ಪಕ್ಷದ ಬಗ್ಗೆ ತಮಗೆ ವಿಷಾದವಿದೆ, ಆದರೆ ಪಠಾಣ್ ಕೊನೆಗೆ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಹರಂಪುರ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ನಲ್ಲಿ ಗೆದ್ದು ರಾಜಕೀಯಕ್ಕೆ ಪ್ರವೇಶಿಸಿದ್ದ ಯೂಸುಫ್ ಪಠಾಣ್, ಈಗ ಬಂಡಾಯ ಬಣದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ. ಯೂಸುಫ್ ಪಠಾಣ್ ಸೇರಿದಂತೆ ಸುಮಾರು 20 ಲೋಕಸಭಾ ಸಂಸದರ ಗುಂಪು ಪ್ರತ್ಯೇಕ ಬಣವಾಗಿ ಮಾನ್ಯತೆ ಕೋರಿ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಜೊತೆ ವಿಲೀನಕ್ಕೆ ಅನುಮತಿ ಕೋರಿದ ನಂತರ ಟಿಎಂಸಿಯ ಆಂತರಿಕ ಬಿಕ್ಕಟ್ಟು ಉಲ್ಬಣಿಸಿದೆ. ಬಂಡಾಯ ಸಂಸದರು ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ಪಕ್ಷ ಎರಡರ ವಾದವನ್ನು ಆಲಿಸಿದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈಗಾಗಲೇ ತಿಳಿಸಿದ್ದಾರೆ. ಮುಂಗಾರು ಅಧಿವೇಶನಕ್ಕೂ ಮುನ್ನ ಈ ಬಗ್ಗೆ ಅಂತಿಮ ತೀರ್ಪು ಬರುವ ಸಾಧ್ಯತೆಯಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net