ಅಮೃತ್‌ಪಾಲ್ ಸಿಂಗ್ ಕೋಟೆಗೆ ಬಿಜೆಪಿ ಲಗ್ಗೆ! ಪಂಜಾಬ್ ಗ್ರಾಮೀಣ ಮತಕ್ಕಾಗಿ ಶುರುವಾಯ್ತು ಬಿಗ್ ಫೈಟ್ | BJP challenges Amritpal Singh

ಪಂಜಾಬ್​ನಲ್ಲಿ ಅಮೃತ್‌ಪಾಲ್ ಸಿಂಗ್ ಮತ್ತು ಬಿಜೆಪಿ ನಡುವಿನ ರಾಜಕೀಯ ಪೈಪೋಟಿ
ಪಂಜಾಬ್​ನಲ್ಲಿ ಅಮೃತ್‌ಪಾಲ್ ಸಿಂಗ್ ಮತ್ತು ಬಿಜೆಪಿ ನಡುವಿನ ರಾಜಕೀಯ ಪೈಪೋಟಿ
Published on

ಪ್ರಮುಖ ಮುಖ್ಯಾಂಶಗಳು

  • ಜೈಲಿನಲ್ಲಿರುವ ಅಮೃತ್‌ಪಾಲ್ ಸಿಂಗ್‌ಗೆ ಬಿಜೆಪಿ ಸವಾಲ್
  • ಪಂಜಾಬ್ ಹಳ್ಳಿಗಳ ಮತಕ್ಕಾಗಿ ಶುರುವಾಯ್ತು ಫೈಟ್
  • ಗ್ರಾಮೀಣ ಪಂಜಾಬ್ ಗೆಲ್ಲಲು ‘ಕಮಲ’ಪಡೆ ಮಾಸ್ಟರ್ ಪ್ಲಾನ್
Punjab Election 2027: ಪಂಜಾಬ್‌ನಲ್ಲಿ 2027ರ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದೆ. ಆದರೂ ರಾಜಕೀಯ ಲೆಕ್ಕಾಚಾರ ಮಾತ್ರ ಈಗಿನಿಂದಲೇ ಜೋರಾಗಿದೆ. ಅದರಲ್ಲೂ ಗ್ರಾಮೀಣ ಪಂಜಾಬ್‌ನ ಮತ ಯಾರ ಪಾಲಾಗಲಿದೆ? ಅನ್ನೋ ಪ್ರಶ್ನೆ ಇದೀಗ ಕುತೂಹಲ ಮೂಡಿಸಿದೆ.
ಇದುವರೆಗೂ ಗ್ರಾಮೀಣ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳದ (SAD) ಬಲವಾದ ನೆಟ್‌ವರ್ಕ್‌ನ್ನೇ ನೆಚ್ಚಿಕೊಂಡಿದ್ದ ಬಿಜೆಪಿ, ಇದೀಗ ಹಳ್ಳಿಗಳಲ್ಲೂ ತನ್ನದೇ ಆದ ರಾಜಕೀಯ ನೆಲೆ ಗಟ್ಟಿಗೊಳಿಸಲು ಪ್ಲ್ಯಾನ್ ಮಾಡಿದೆ. ಮೂಲಗಳ ಪ್ರಕಾರ, ಗ್ರಾಮೀಣ ಭಾಗದಲ್ಲಿ ಅಕಾಲಿ ದಳದ ಪ್ರಚಾರವನ್ನು ಕೊಂಚ ಸೀಮಿತಗೊಳಿಸುವಂತೆ ಬಿಜೆಪಿ ಸೂಚಿಸಿದೆ ಎನ್ನಲಾಗಿದ್ದು, ಹಳ್ಳಿಹಳ್ಳಿಗೂ ತನ್ನ ಸಂಘಟನೆ ವಿಸ್ತರಿಸಿ, ನೇರವಾಗಿ ಮತದಾರರನ್ನು ತಲುಪುವ ಲೆಕ್ಕಾಚಾರದಲ್ಲಿದೆ.

ಅಮೃತ್‌ಪಾಲ್ ಸಿಂಗ್‌ಗೆ ಸವಾಲು?

ಬಿಜೆಪಿಯ ಈ ನಡೆ ಕುತೂಹಲಕ್ಕೆ ಕಾರಣವಾಗಿರುವುದು ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಹಾಗೂ ಖದೂರ್ ಸಾಹಿಬ್ ಸಂಸದ ಅಮೃತ್‌ಪಾಲ್ ಸಿಂಗ್ ಅವರ ಗ್ರಾಮೀಣ ಪ್ರಭಾವ. 2023ರಿಂದ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಅಮೃತ್‌ಪಾಲ್ ಸಿಂಗ್, 2024ರ ಲೋಕಸಭೆ ಚುನಾವಣೆಯಲ್ಲಿ ಜೈಲಿನಲ್ಲಿದ್ದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಖದೂರ್ ಸಾಹಿಬ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಡ್ರಗ್ಸ್ ವಿರೋಧಿ ಹೋರಾಟ
ಅಮೃತ್‌ಪಾಲ್ ಸಿಂಗ್ ಅವರ ರಾಜಕೀಯ ಅಜೆಂಡಾದಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ, ಪಂಜಾಬ್‌ಗೆ ಸಂಬಂಧಿಸಿದ ಸ್ಥಳೀಯ ವಿಚಾರಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಇದೇ ವಿಚಾರಗಳನ್ನು ಅಸ್ತ್ರವಾಗಿಸಿಕೊಂಡು ಬಿಜೆಪಿ ಕೂಡ ಗ್ರಾಮೀಣ ಮತದಾರರನ್ನು ಸೆಳೆಯಲು ಮುಂದಾಗಿದ್ದು, ಪಂಜಾಬ್ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
.

117 ಕ್ಷೇತ್ರಗಳಲ್ಲೂ ‘ಡ್ರಗ್ಸ್’ ವಿರುದ್ಧ ಯಾತ್ರೆ?

ಗ್ರಾಮೀಣ ಪಂಜಾಬ್‌ನಲ್ಲಿ ಡ್ರಗ್ಸ್ ಸಮಸ್ಯೆಯನ್ನೇ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದರ ಭಾಗವಾಗಿ ರಾಜ್ಯದ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲೂ ಮಾದಕವಸ್ತು ವಿರೋಧಿ ಯಾತ್ರೆ ನಡೆಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಜತೆಗೆ, ಮೋದಿ ಸರ್ಕಾರದ ವಿವಿಧ ಜನಪರ ಯೋಜನೆಗಳು, ರೈತರಿಗೆ ಕೇಂದ್ರದಿಂದ ಸಿಕ್ಕಿರುವ ನೆರವು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹಳ್ಳಿಹಳ್ಳಿಗೂ ತೆರಳಿ ಪ್ರಚಾರ ಮಾಡುವ ಲೆಕ್ಕಾಚಾರದಲ್ಲಿದೆ ಬಿಜೆಪಿ.

ಯುವ ಮತದಾರರೇ ಟಾರ್ಗೆಟ್?

ಈ ಪೈಪೋಟಿಯಲ್ಲಿ ಗ್ರಾಮೀಣ ಯುವ ಮತದಾರರು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಡ್ರಗ್ಸ್, ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಪಂಜಾಬ್‌ನ ಅಸ್ಮಿತೆಯಂತಹ ವಿಚಾರಗಳು ಯುವ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಮತ್ತು ಅಮೃತ್‌ಪಾಲ್ ಸಿಂಗ್ ಇಬ್ಬರೂ ಒಂದೇ ಮತದಾರರ ವರ್ಗದವನ್ನು ಟಾರ್ಗೇಟ್​ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಬಿಜೆಪಿಗೆ ದೊಡ್ಡ ಸವಾಲು ಏನೆಂದರೆ, ರೈತರ ಹೋರಾಟದ ಬಳಿಕವೂ ಗ್ರಾಮೀಣ ಪಂಜಾಬ್‌ನಲ್ಲಿ ಪಕ್ಷದ ಬಗ್ಗೆ ಇರುವ ಪ್ರತಿರೋಧವನ್ನು ಮೀರಿ ಸಂಘಟನೆಯನ್ನು ಮತವಾಗಿ ಪರಿವರ್ತಿಸುವುದು. ಇತ್ತ ಅಮೃತ್‌ಪಾಲ್ ಸಿಂಗ್‌ಗೆ ಇರುವ ಸವಾಲು ಕೂಡ ಕಡಿಮೆ ಇಲ್ಲ. ವೈಯಕ್ತಿಕ ಜನಪ್ರಿಯತೆ ಮತ್ತು ಪಂಥಿಕ್ ವಿಚಾರಗಳ ಮೇಲಿನ ಬೆಂಬಲವನ್ನು ದೊಡ್ಡ ಮಟ್ಟದ ಚುನಾವಣಾ ಸಂಘಟನೆಗೆ ತಿರುಗಿಸಬೇಕಿದೆ.

ಅಕಾಲಿ ದಳಕ್ಕೆ ಡಬಲ್ ಶಾಕ್?

ಈ ಹೊಸ ರಾಜಕೀಯ ಸಮೀಕರಣದಲ್ಲಿ ಹೆಚ್ಚು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇರುವುದು ಶಿರೋಮಣಿ ಅಕಾಲಿ ದಳ. ಒಂದೆಡೆ ಬಿಜೆಪಿ, ಅಕಾಲಿ ದಳದ ಸಾಂಪ್ರದಾಯಿಕ ಗ್ರಾಮೀಣ ಮತಬ್ಯಾಂಕ್‌ನ ಒಂದು ಭಾಗವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ್ರೆ, ಮತ್ತೊಂದೆಡೆ ಅಮೃತ್‌ಪಾಲ್ ಸಿಂಗ್ ಪಂಥಿಕ್ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ. ಹೀಗಾದರೆ ಅಕಾಲಿ ದಳದ ಸಾಂಪ್ರದಾಯಿಕ ರಾಜಕೀಯ ಜಾಗ ಎರಡೂ ಕಡೆಗಳಿಂದ ಒತ್ತಡಕ್ಕೆ ಸಿಲುಕಬಹುದು.
ಒಟ್ಟಿನಲ್ಲಿ, ಪಂಜಾಬ್‌ನ 2027ರ ಚುನಾವಣೆ ಕೇವಲ ಬಿಜೆಪಿ ವರ್ಸಸ್ ಅಮೃತ್‌ಪಾಲ್ ಸಿಂಗ್ ಅನ್ನೋ ನೇರ ಹಣಾಹಣಿ ಆಗಿರದೇ, ‘ಗ್ರಾಮೀಣ ಪಂಜಾಬ್‌ನ ಧ್ವನಿ ಯಾರದ್ದು?’ ಅನ್ನೋ ದೊಡ್ಡ ಪ್ರಶ್ನೆಯ ಸುತ್ತ ನಡೆಯುವ ಸಾಧ್ಯತೆ ಇದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net