ಬಂಕಿಪುರ ಬೈ-ಎಲೆಕ್ಷನ್‌; ನಿತಿನ್ ನವೀನ್ ಸ್ಥಾನಕ್ಕೆ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ! ಯಾರೀ ಅಭಿಷೇಕ್ ಕುಮಾರ್..? | Bankipur ByElection

Bankipur ByElection | ನಿತಿನ್ ನವೀನ್ ಸ್ಥಾನಕ್ಕೆ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ! ಯಾರೀ ಅಭಿಷೇಕ್ ಕುಮಾರ್..?
Bankipur ByElection | ನಿತಿನ್ ನವೀನ್ ಸ್ಥಾನಕ್ಕೆ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ! ಯಾರೀ ಅಭಿಷೇಕ್ ಕುಮಾರ್..?
Published on
ಪಟನಾ: ಬಿಹಾರದ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾದ ಬಂಕಿಪುರ ವಿಧಾನಸಭಾ ಉಪಚುನಾವಣೆಗೆ (Bankipur ByElection) ಬಿಜೆಪಿ ಮಂಗಳವಾರ ಅಭಿಷೇಕ್ ಕುಮಾರ್ ಅವರನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಇವರ ಹೆಸರಿಗೆ ಅನುಮೋದನೆ ನೀಡಿದೆ. ಇತ್ತ ಆರ್​ಜೆಡಿ ಈ ಕ್ಷೇತ್ರಕ್ಕೆ ರೇಖಾ ಕುಮಾರಿ ಗುಪ್ತಾ ಅವರನ್ನು ತನ್ನ ಅಭ್ಯರ್ಥಿ ಎಂದು ನಿನ್ನೆಯೇ ಪ್ರಕಟಿಸಿದೆ.
ಬಂಕಿಪುರ ಕ್ಷೇತ್ರದ ಶಾಸಕರಾಗಿದ್ದ ನಿತಿನ್ ನವೀನ್​ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ.

ಅಭ್ಯರ್ಥಿಗೆ ಬಿಹಾರ ಸಿಎಂ ಶುಭ ಹಾರೈಕೆ

ಅಭಿಷೇಕ್ ಕುಮಾರ್ ಅವರ ಆಯ್ಕೆಗೆ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಭಿನಂದನೆ ಸಲ್ಲಿಸಿದ್ದು, ಅವರ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಚೌಧರಿ, ಬಿಹಾರ ವಿಧಾನಸಭಾ ಉಪಚುನಾವಣೆಯಡಿ 182-ಬಂಕಿಪುರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು ಎಂದಿದ್ದಾರೆ.
ನಿಮ್ಮ ನಾಯಕತ್ವ, ಸಮರ್ಪಣಾ ಮನೋಭಾವ ಮತ್ತು ಸಾರ್ವಜನಿಕ ಸೇವೆಯ ಸಂಕಲ್ಪಕ್ಕೆ ಸಾರ್ವಜನಿಕರ ದೊಡ್ಡ ಆಶೀರ್ವಾದ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನೀವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಬದ್ಧತೆಯನ್ನು ಮುನ್ನಡೆಸುತ್ತಾ ಐತಿಹಾಸಿಕ ಜಯ ಸಾಧಿಸಲಿದ್ದೀರಿ. ನಿಮ್ಮ ಯಶಸ್ವಿ ಮತ್ತು ವಿಜಯಶಾಲಿ ಚುನಾವಣಾ ಪ್ರಚಾರಕ್ಕೆ ಹೃತ್ಪೂರ್ವಕ ಶುಭ ಹಾರೈಕೆಗಳು ಎಂದು ಚೌಧರಿ ಆಶಿಸಿದ್ದಾರೆ.

ಪ್ರಶಾಂತ್ ಕಿಶೋರ್ ಚುನಾವಣಾ ಪದಾರ್ಪಣೆ

ಬಿಜೆಪಿ ಮತ್ತು ಆರ್‌ಜೆಡಿ ನಡುವಿನ ನೇರ ಹಣಾಹಣಿಯಂತೆ ಕಾಣುತ್ತಿದ್ದ ಬಂಕಿಪುರ ಕ್ಷೇತ್ರದ ಸ್ಪರ್ಧೆಯು, ಜನ್ ಸುರಾಜ್ ಪಾರ್ಟಿ (JSP) ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಇದೇ ಮೊದಲ ಬಾರಿಗೆ ನೇರವಾಗಿ ಚುನಾವಣಾ ಕಣಕ್ಕೆ ಧುಮುಕುತ್ತಿರುವುದರಿಂದ ಈಗ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಜುಲೈ 5 ರಂದು ನಡೆದ ಕೋರ್ ಕಮಿಟಿ ಸಭೆಯ ನಂತರ ಜೆಎಸ್‌ಪಿ ರಾಜ್ಯಾಧ್ಯಕ್ಷ ಮನೋಜ್ ಭಾರ್ತಿ ಈ ಮಹತ್ವದ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಇದೇ ವೇಳೆ, ಜನಶಕ್ತಿ ಜನತಾ ದಳದ ಅಧ್ಯಕ್ಷ ತೇಜ್ ಪ್ರತಾಪ್ ಯಾದವ್ ಪಟನಾ ಮೂಲದ ಸಾಮಾಜಿಕ ಕಾರ್ಯಕರ್ತೆ ವೀಣಾ ಮಾನ್ವಿ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಿದ್ದಾರೆ.

ಕಳೆದ ಚುನಾವಣೆಯ ಫಲಿತಾಂಶ

ಕಳೆದ 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನಿತಿನ್ ನವೀನ್​ ಅವರು ಸತತ ಐದನೇ ಬಾರಿಗೆ ಬಂಕಿಪುರ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದರು. ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದ ಆರ್‌ಜೆಡಿಯ ರೇಖಾ ಕುಮಾರಿ ವಿರುದ್ಧ ಸುಮಾರು 50,000 ಮತಗಳ ಭಾರಿ ಅಂತರದಿಂದ ಜಯಭೇರಿ ಬಾರಿಸಿದ್ದರು. ಇನ್ನು ಜನ್ ಸುರಾಜ್ ಪಾರ್ಟಿ (JSP) ಅಭ್ಯರ್ಥಿಯಾಗಿದ್ದ ವಂದನಾ ಕುಮಾರಿ 7,717 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಈ ಬಾರಿ ಸ್ವತಃ ಪ್ರಶಾಂತ್ ಕಿಶೋರ್ ಕಣದಲ್ಲಿರುವುದರಿಂದ ಬಂಕಿಪುರ ಉಪಚುನಾವಣೆ ಇಡೀ ದೇಶದ ಗಮನ ಸೆಳೆದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net