ನೆಹರು, ಸಿಐಎ ಮತ್ತು ಬಿಜು ಪಟ್ನಾಯಕ್.. 1962ರ ಯುದ್ಧದ ರಹಸ್ಯ ಬಿಚ್ಚಿಟ್ಟ ನಿಶಿಕಾಂತ್ ದುಬೆ ಹೇಳಿಕೆಯಿಂದ ಶುರುವಾಯ್ತು ಹೊಸ ಸಂಚಲನ! | Nishikant Dubey

Nishikant Dubey  | ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಜೊತೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು
Nishikant Dubey | ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಜೊತೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು
Published on
Nishikant Dubey: ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅಮೆರಿಕ ಸರ್ಕಾರ, ಸಿಐಎ (CIA) ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ನೆಹರೂ-ಗಾಂಧಿ ಕುಟುಂಬದ ವಿರುದ್ಧ ದುಬೆ ನೀಡಿರುವ ಈ ಹೇಳಿಕೆಯು ಈಗ ಬಿಜು ಜನತಾದಳ (ಬಿಜೆಡಿ) ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಿಶಿಕಾಂತ್ ದುಬೆ, 1962 ರ ಚೀನಾ ಯುದ್ಧವನ್ನು ನೆಹರು ಅಮೆರಿಕದ ಹಣ ಮತ್ತು ಸಿಐಎ ಏಜೆಂಟ್‌ಗಳ ಸಹಯೋಗದೊಂದಿಗೆ ಹೋರಾಡಿದ್ದರು. ಆಗ ಒಡಿಶಾದ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್ ನೆಹರು ಮತ್ತು ಅಮೆರಿಕ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕೆ ಪೂರಕವಾಗಿ ನೆಹರು ಬರೆದಿದ್ದಾರೆ ಎನ್ನಲಾದ ಎರಡು ಪತ್ರಗಳನ್ನು ಬಿಡುಗಡೆ ಮಾಡಿದ ದುಬೆ, ರಕ್ಷಣಾ ವಿಷಯಗಳ ಚರ್ಚೆಗಾಗಿ ಪಟ್ನಾಯಕ್ ಅವರನ್ನು ಪ್ರಮುಖ ಕೆಲಸದ ಮೇಲೆ ಅಮೆರಿಕಕ್ಕೆ ಕಳುಹಿಸಲಾಗಿತ್ತು ಎಂದು ಪ್ರತಿಪಾದಿಸಿದರು. ಅಷ್ಟೇ ಅಲ್ಲದೆ, 1963-64ರಲ್ಲಿ ಅಮೆರಿಕದ ಸೂಚನೆಯಂತೆ ನಂದಾ ದೇವಿಯಲ್ಲಿ ಪರಮಾಣು ಸಾಧನ ಸ್ಥಾಪಿಸಲಾಗಿತ್ತು ಮತ್ತು ಒಡಿಶಾದ ಚಾರ್ಬಾಟಿಯಾ ವಾಯುನೆಲೆಯನ್ನು ಅಮೆರಿಕದ U-2 ಗೂಢಚಾರ ವಿಮಾನಗಳಿಗಾಗಿ ಬಳಸಲಾಗಿತ್ತು ಎಂದು ಅವರು ದೂರಿದರು.
ಆರ್​ಜೆಡಿ ನಾಯಕರ ಆಕ್ರೋಶ
ದುಬೆ ಈ ಹೇಳಿಕೆಗೆ ಬಿಜೆಡಿ ರಾಜ್ಯಸಭಾ ಸಂಸದ ಸಸ್ಮಿತ್ ಪಾತ್ರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಶಿಕಾಂತ್ ದುಬೆ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚುತ್ತಿದ್ದಾರೆ ಮತ್ತು ರಾಷ್ಟ್ರದ ಪೂಜ್ಯ ನಾಯಕನಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ ಮಣ್ಣಿನ ಮಗ ಬಿಜು ಪಟ್ನಾಯಕ್ ಅವರ ವಿರುದ್ಧ ಮಾಡಲಾದ ಈ ಸುಳ್ಳು ಮತ್ತು ಬೇಜವಾಬ್ದಾರಿಯುತ ಆರೋಪಗಳಿಂದ ತೀವ್ರ ಆಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ವಿವಾದದ ಬೆನ್ನಲ್ಲೇ ಸಂಸದ ಸಸ್ಮಿತ್ ಪಾತ್ರ, ನಿಶಿಕಾಂತ್ ದುಬೆ ಅಧ್ಯಕ್ಷತೆಯ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದು, ರಾಷ್ಟ್ರೀಯ ಐಕಾನ್ ಬಗ್ಗೆ ಅಗೌರವ ತೋರುವ ವ್ಯಕ್ತಿಯ ಅಡಿಯಲ್ಲಿ ಕೆಲಸ ಮಾಡಲು ತನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜು ಪಟ್ನಾಯಕ್ ಕೇವಲ ಒಡಿಶಾದ ನಾಯಕರಲ್ಲ, 1947ರಲ್ಲಿ ಇಂಡೋನೇಷ್ಯಾದ ನಾಯಕರನ್ನು ರಕ್ಷಿಸಿದ ಮತ್ತು ಎರಡನೇ ಮಹಾಯುದ್ಧದಲ್ಲಿ ಸೋವಿಯತ್ ಒಕ್ಕೂಟಕ್ಕೆ ನೆರವಾದ ಜಾಗತಿಕ ಮಟ್ಟದ ಸಾಹಸಿ ನಾಯಕರಾಗಿದ್ದರು. ಅಂತಹ ದಂತಕಥೆಯ ಪರಂಪರೆ ಇಂತಹ ಕ್ಷುಲ್ಲಕ ರಾಜಕೀಯಕ್ಕಿಂತ ಬಹಳ ಎತ್ತರದಲ್ಲಿದೆ ಎಂದು ಬಿಜೆಡಿ ಸಂಸದರು ಬಣ್ಣಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net