ಬಜೆಟ್ ವಿಮರ್ಶೆ ಕಟುವಾಗಿದ್ದರೂ ಬಿಜೆಪಿ ಶಾಸಕಿಗೆ ಎನ್‌ಸಿ ಸದಸ್ಯರ ಜೈಕಾರ... ದೇವಯಾನಿ ಮಾತಿನ ಮೋಡಿಗೆ ಫಿದಾ ಆಗಿದ್ದೇಕೆ ಅಬ್ದುಲ್ಲಾ ಟೀಮ್​..? | Devyani Rana

 Devyani Rana | ಬಿಜೆಪಿ ಶಾಸಕಿ ದೇವಯಾನಿ ರಾಣಾ
Devyani Rana | ಬಿಜೆಪಿ ಶಾಸಕಿ ದೇವಯಾನಿ ರಾಣಾ
Published on
Devyani Rana: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ ಬಿಜೆಪಿ ಶಾಸಕಿ ದೇವಯಾನಿ ರಾಣಾ ಮಾತಿಗೆ ಸ್ವತಃ ಆಡಳಿತ ಪಕ್ಷದ ಸದಸ್ಯರೇ ಮೇಜು ಕುಟ್ಟಿ ಸ್ವಾಗತಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ಸರ್ಕಾರ ಮಂಡಿಸಿದ ಬಜೆಟ್ ಕುರಿತು ಮಾತನಾಡಲು ಶಾಸಕಿ ದೇವಯಾನಿ ಎದ್ದು ನಿಲ್ಲುತ್ತಿದ್ದಂತೆ ಆಡಳಿತಾರೂಢ ನ್ಯಾಷನಲ್​ ಕಾಲ್ಫರೆನ್ಸ್​ ಸದಸ್ಯರು ತಮ್ಮ ಮೇಜುಗಳನ್ನು ಕುಟ್ಟುತ್ತಿರುವುದು ಕಂಡು ಬಂತು. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಡಿಸಿದ ಬಜೆಟ್​ನ್ನು ಟೀಕಿಸಿದಾಗಲೂ ಕೂಡ ಅದು ಪುನರಾವರ್ತನೆಯಾಯಿತು.
ಶಾಸಕಿ ದೇವಯಾನಿ ತಂದೆ ದೇವಿಂದರ್ ಸಿಂಗ್ ರಾಣಾ ನಿಧನದ ಬಳಿಕ ಇತ್ತೀಚೆಗೆ ನಡೆದ ನಾಗ್ರೋಟಾ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕಿ ದೇವಯಾನಿಯವರನ್ನು ಪ್ರೋತ್ಸಾಹಿಸುವಂತೆ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ಸದಸ್ಯರಲ್ಲಿ ಮನವಿ ಮಾಡಿದರು.
ನ್ಯಾಷನಲ್​ ಕಾನ್ಫರೆನ್ಸ್​ ತೊರೆದ ದೇವಿಂದರ್ ಸಿಂಗ್ ರಾಣಾರ ಕೆಲವು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡರು. ರಾಣಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದನ್ನು ಒಮರ್ ಅಬ್ದುಲ್ಲಾ ತಮ್ಮ ರಾಜಕೀಯ ಜೀವನದ ಅತ್ಯಂತ ದೊಡ್ಡ ವಿಷಾದ ಎಂದು ಬಣ್ಣಿಸಿದ್ದರು. ತಮ್ಮ ಆಪ್ತನ ನಿಧನದ ಬಳಿಕ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡುತ್ತಾ, ರಾಣಾ ಜೊತೆಗಿನ ತಮ್ಮ ನಿಕಟ ಸಂಬಂಧವನ್ನು ನೆನಪಿಸಿಕೊಂಡರು.
ಇತ್ತೀಚಿನ ಉಪಚುನಾವಣೆಯ ಪ್ರಚಾರದಲ್ಲಿ ದೇವಯಾನಿ ರಾಣಾ ವಿರುದ್ಧ ಯಾವುದೇ ರೀತಿಯ ಆರೋಪ ಮಾಡದೇ, ಒಮರ್​ ಅಬ್ದುಲ್ಲಾ ಸಾಂಕೇತಿಕ ಹೋರಾಟವನ್ನು ನಡೆಸಿದರು.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 1.13 ಲಕ್ಷ ಕೋಟಿ ಬಜೆಟ್ ಮಂಡಿಸಿದರು. ಇದಾದ ಒಂದು ದಿನದ ಬಳಿಕ, ಪ್ರಮುಖ ವಲಯಗಳಲ್ಲಿನ ಹಂಚಿಕೆಯನ್ನು ಕಡಿಮೆ ಮಾಡಿರುವ ವಿಷಯವಾಗಿ ಶಾಸಕಿ ದೇವಯಾನಿ ರಾಣಾ ಮಾತನಾಡಿದರು, ಸುಮಾರು 12 ನಿಮಿಷಗಳ ಅವರ ಭಾಷಣವನ್ನು ಇಡೀ ಸದನ ಶಾಂತವಾಗಿ ಆಲಿಸಿತು.
ಅಂಕಿ ಅಂಶಗಳೊಂದಿಗೆ ಅವರು ಶಿಕ್ಷಣ, ವಿಪತ್ತು ನಿರ್ವಹಣೆ ಮತ್ತು ಇತರ ಪ್ರಮುಖ ವಲಯಗಳಲ್ಲಿನ ಹಂಚಿಕೆಗಳನ್ನು ಕಡಿತಗೊಳಿಸಿದ್ದಕ್ಕಾಗಿ ಸರ್ಕಾರವನ್ನು ಪ್ರಶ್ನಿಸಿದರು. ವಿಪತ್ತು ನಿರ್ವಹಣೆ ಮತ್ತು ಪರಿಹಾರಕ್ಕಾಗಿ ಹಂಚಿಕೆಯನ್ನು 719 ಕೋಟಿ ರೂ.ಗಳಿಂದ 350.76 ಕೋಟಿ ರೂ.ಗಳಿಗೆ ಇಳಿಸಲಾಗಿದೆ ಎಂದು ರಾಣಾ ಸದನಕ್ಕೆ ತಿಳಿಸಿದರು.
ಇದು ಕಳೆದ ವರ್ಷದ ಹಂಚಿಕೆಯ ಅರ್ಧದಷ್ಟು. ಜಮ್ಮು ಪ್ರದೇಶದಲ್ಲಿ ಹಠಾತ್ ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟಗಳಿಂದ ಜೀವ ಮತ್ತು ಆಸ್ತಿಗೆ ಭಾರಿ ಹಾನಿಯಾದ ಬಳಿಕ ವಿಪತ್ತು ತಗ್ಗಿಸುವಿಕೆಯು ಪ್ರಮುಖ ಗಮನ ಹರಿಸಬೇಕಿತ್ತು ಎಂದು ದೇವಯಾನಿ ಉಲ್ಲೇಖಿಸಿದ್ದು, ಸರ್ಕಾರ ವಿಪತ್ತು ನಿರ್ವಹಣೆಗೆ ಬಜೆಟ್ ಹಂಚಿಕೆಯನ್ನು ಕಡಿತಗೊಳಿಸಲು ಆಯ್ಕೆ ಮಾಡಿಕೊಂಡಿದೆ ಎಂದು ಟೀಕಿಸಿದರು.
ಶಿಕ್ಷಣದ ಮೇಲೆ, ನಾವು ಹಿಂದಿನ ಬಜೆಟ್‌ಗಿಂತ 193 ಕೋಟಿ ರೂ. ಕಡಿಮೆ ಖರ್ಚು ಮಾಡಿದರೆ, ಶಾಲೆಗಳನ್ನು ಮುಚ್ಚಲಾಗುತ್ತದೆ, ಹೀಗಾದರೆ ಬಡ ವ್ಯಕ್ತಿಯ ಮಗು ಹೇಗೆ ಪ್ರಗತಿ ಹೊಂದುವುದು ಹೇಗೆ..? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಸರ್ಕಾರದ ಅಭಿವೃದ್ದಿ ಯೋಜನೆಗಳಲ್ಲಿನ ನ್ಯೂನತೆಗಳನ್ನು ಉಲ್ಲೇಖಿಸಿದ ದೇವಯಾನಿ, ಅಂಗವಿಕಲರಿಗಾಗಿ ಉಚಿತ ಬಸ್ ಸೇವೆಯಲ್ಲಿ ಅಂಗವಿಕಲ ಸ್ನೇಹಿ ಕಾರ್ಯವಿಧಾನಗಳನ್ನು ಹೊಂದಿರುವ ಬಸ್‌ಗಳು ಇರಲಿಲ್ಲ ಎಂದು ಅವರು ಗಮನಸೆಳೆದರು.
ಬಜೆಟ್ ಬಗ್ಗೆ ಕಟುವಾದ ವಿಮರ್ಶೆ ಮತ್ತು ಒಮರ್ ಅಬ್ದುಲ್ಲಾ ಸರ್ಕಾರದ ವಿರುದ್ಧದ ಟೀಕೆಗಳ ಹೊರತಾಗಿಯೂ, ರಾಣಾ ತಮ್ಮ ಭಾಷಣದಿಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳಿಂದ ಮೆಚ್ಚುಗೆ ಪಡೆದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net