AI video of PM | ಕಾಂಗ್ರೆಸ್​ ಹೊಸ ಮಣಿಶಂಕರ್ ಅಯ್ಯರ್ ಸಿಕ್ಕಿದ್ದಾರೆ ಎಂದ ಬಿಜೆಪಿ ನಾಯಕ; ಏನಿದು 2014 ರ ಚಾಯ್​ ವಾಲಾ ವಿವಾದ..?

AI video of PM
AI video of PM
Published on
ದೆಹಲಿ: ಕಾಂಗ್ರೆಸ್​ ವಕ್ತಾರೆ ರಾಗಿಣಿ ನಾಯಕ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಎಐ ವಿಡಿಯೋ ದೊಡ್ಡ ಮಟ್ಟದ ಸದ್ದು ಮಾಡಿದ್ದು, ಆಡಳಿತ ಪಕ್ಷ ಬಿಜಿಪಿ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್​ ನಾಯಕಿ ರಾಗಿಣಿ ಪೋಸ್ಟ್​ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸಂಬೀತ್​ ಪಾತ್ರಾ, ಇಂದು ಕಾಂಗ್ರೆಸ್​ ಪಕ್ಷಕ್ಕೆ ಹೊಸ ಮಣಿಶಂಕರ್ ಅಯ್ಯರ್ ಸಿಕ್ಕಿದ್ದಾರೆ ಎಂದರು.

ಮಣಿಶಂಕರ್ ಅಯ್ಯರ್ ಹೇಳಿಕೆ...

2014 ರ ಚುನಾವಣೆಗೂ ಮುನ್ನ ಮಣಿಶಂಕರ್ ಅಯ್ಯರ್, ಮೋದಿ ಬಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಚಹಾ ಮಾರಾಟ ಮಾಡಬಹುದಾದ ಟೆಂಟ್ ಒದಗಿಸುವುದಾಗಿ ಹೇಳಿದ್ದರು. ಇಂದು ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಬಿತ್​ ಪಾತ್ರಾ, ಕಾಂಗ್ರೆಸ್ ಹೊಸ ಮಣಿಶಂಕರ್ ಅಯ್ಯರ್​ರನ್ನು ಕಂಡುಕೊಂಡಿದೆ. ಅದೇ ಚಹಾ ಮಾರಾಟಗಾರನನ್ನು ಟೀಕಿಸಿದಾಗ ಈ ಹಿಂದೆ ಏನಾಗಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ದೇಶವನ್ನು ಲೂಟಿ ಮಾಡಿದವರು ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗುವುದರಿಂದ ಅತೃಪ್ತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚಹಾ ಮಾರಾಟಗಾರರು, ಕಾರ್ಮಿಕರು, ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಈ ದೇಶದ ಹೆಮ್ಮೆ. ಅವರು ಕೂಡ ಈ ದೇಶದ ನಾಗರಿಕರು ಎಂದು ನಮಗೆ ಹೆಮ್ಮೆ ಇದೆ. ಚಹಾ ಮಾರಾಟ ಮಾಡುವುದು ಮತ್ತು ಚಾಯ್-ಚಾಯ್ ಹೇಳುವುದು ಪ್ರಾಮಾಣಿಕ ಕೆಲಸದ ಒಂದು ರೂಪ, ದೇಶವನ್ನು ಲೂಟಿ ಮಾಡುವದಲ್ಲ ಎಂದು ಪಾತ್ರಾ ಟೀಕಿಸಿದ್ದಾರೆ.

ರಾಗಿಣಿ ನಾಯಕ್ ಪೋಸ್ಟ್​...

ಪ್ರಧಾನಿ ನರೇಂದ್ರ ಮೋದಿ ರೆಡ್​ ಕಾರ್ಪೆಟ್ ಮೇಲೆ ಚಹಾ ಮಾರಾಟ ಮಾಡುತ್ತಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು ಕಾಂಗ್ರೆಸ್​ ನಾಯಕಿ ರಾಗಿಣಿ ನಾಯಕ್ ಹಂಚಿಕೊಂಡಿದ್ದು, ಅಬ್ ಯೇ ಕೌನ್ ಕಿಯಾ (ಈಗ ಇದನ್ನು ಯಾರು ಮಾಡಿದರು?) ಎಂಬ ಶೀರ್ಷಿಕೆಯೊಂದಿಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಾದ ಬಳಿಕ ಈ ವಿವಾದ ಭುಗಿಲೆದ್ದಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ತಿಳಿ ನೀಲಿ ಬಣ್ಣದ ಕೋಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ, ರೆಡ್​ ಕಾರ್ಪೆಟ್ ಮೇಲೆ ಕೆಟಲ್ ಮತ್ತು ಟೀ ಗ್ಲಾಸ್ ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಅದೇ ಸ್ಥಳದಲ್ಲಿ ತ್ರಿವರ್ಣ ಧ್ವಜ ಮತ್ತು ಇತರ ದೇಶಗಳ ಧ್ವಜವನ್ನು ಸಹ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರ ಧ್ವನಿಯನ್ನು ಅನುಕರಿಸುವ ಚಾಯ್ ಬೋಲೋ, ಚಾಯ್ಯೇ ಎಂಬ ಶಬ್ದ ಕೇಳುತ್ತಿದೆ.
ಅಯ್ಯರ್ 2014ರ ವಿವಾದ..
2014 ರ ಜನವರಿ ನಡೆದ ಎಐಸಿಸಿ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಮೋದಿ ಎಂದಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ, ಕಾಂಗ್ರೆಸ್ ಸಭೆಗೆ ಚಹಾ ನೀಡಲು ಬರಬಹುದು  ಎಂದು ಟೀಕಿಸಿದ್ದರು. 
ಚುನಾವಣೆಯ ಸಂದರ್ಭದಲ್ಲಿ ಈ ಹೇಳಿಕೆಯು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು, ಮೋದಿ ಅವರ ಚಹಾ ಮಾರಾಟಗಾರ ಹಿನ್ನೆಲೆಯನ್ನು ಕೀಳಾಗಿ ಕಾಣುವಂತಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ರಾಹುಲ್ ಗಾಂಧಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು ಬೇರೆ ರೀತಿಯ ಸಂದೇಶಕ್ಕೆ ದಾರಿ ಮಾಡಿಕೊಟ್ಟಿತು. ಬಿಜೆಪಿ ಆ ಹೇಳಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು, ಕಾಂಗ್ರೆಸ್ ಪಕ್ಷ ಮೋದಿ ಸಾಧಾರಣ ಜೀವನ ಶೈಲಿಯನ್ನು ಮತ್ತು ಸಾಮಾನ್ಯ ನಾಗರಿಕರನ್ನು ಅಪಹಾಸ್ಯ ಮಾಡುತ್ತಿದೆ ಎಂದು ಹೇಳಿಕೆ ನೀಡಿತು.
ನಂತರದ ದಿನಗಳಲ್ಲಿ ಇದೇ ವಿಷಯವಾಗಿ ಮಾತನಾಡಿದ ಅಯ್ಯರ್, ಚಾಯ್‌ವಾಲಾ ಎಂಬ ಪದವನ್ನು ಸ್ಪಷ್ಟವಾಗಿ ಬಳಸಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಮೋದಿ ಸೋತರೆ ಚಹಾ ನೀಡಬಹುದು ಎಂಬ ಅವರ ಹೇಳಿಕೆ 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿತು ಎನ್ನುವುದನ್ನು ಅವರು ಒಪ್ಪಿಕೊಂಡರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net