131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವಂತೆ DMK, NCP(SP)ಗೆ ಬಿಜೆಪಿ ಓಲೈಸುತ್ತಿದೆ: ಪಿ.ಚಿದಂಬರಂ

ಕಾಂಗ್ರೆಸ್ ನಾಯಕ ಪಿ.ಚಿದಂಬರಂ
ಕಾಂಗ್ರೆಸ್ ನಾಯಕ ಪಿ.ಚಿದಂಬರಂ
Published on
ನವದೆಹಲಿ: ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾವಿತ 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ಪಡೆಯಲು ಬಿಜೆಪಿ DMK ಮತ್ತು NCP(SP)ಯನ್ನು ಓಲೈಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಎರಡೂ ಪಕ್ಷಗಳು ಶಾಸನವನ್ನು ಬೆಂಬಲಿಸದಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, 2026ರ ಏಪ್ರಿಲ್‌ನಲ್ಲಿ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ವಿಫಲವಾದ 131 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮರಳಿ ತರಲು ಬಿಜೆಪಿ ಯೋಜಿಸುತ್ತಿದೆ. ವಿಫಲವಾದ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಉದ್ದೇಶವನ್ನು ಹೊಂದಿದ್ದರೂ, ಅದರ ನಿಜವಾದ ಉದ್ದೇಶವು ಡಿಲಿಮಿಟೇಷನ್ ಪ್ರಕ್ರಿಯೆ ನಡೆಸುವುದಾಗಿತ್ತು.
ಈಗಾಗಲೇ ಸಂವಿಧಾನ(106ನೇ ತಿದ್ದುಪಡಿ) ಕಾಯ್ದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದೆ. ಆದ್ದರಿಂದ ಮಹಿಳೆಯರಿಗೆ ಮೀಸಲಾತಿ ಒದಗಿಸಲು ಹೊಸ ಮಸೂದೆಯ ಅಗತ್ಯವಿಲ್ಲ ಎಂದಿರುವ ಅವರು, ಬಿಜೆಪಿ ಈ ಶಾಸನಕ್ಕೆ ವ್ಯಾಪಕ ರಾಜಕೀಯ ಬೆಂಬಲವನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.
ಟಿಎಂಸಿಯನ್ನು ವಿಭಜಿಸಿದ ನಂತರ, ವಿಫಲವಾದ ಮಸೂದೆಯ ಹೊಸ ಆವೃತ್ತಿಯನ್ನು ಬೆಂಬಲಿಸಲು ನಿರ್ಣಾಯಕ ಮತಗಳನ್ನು ಸಂಗ್ರಹಿಸಲು ಬಿಜೆಪಿ ಎನ್‌ಸಿಪಿ (ಎಸ್‌ಪಿ) ಮತ್ತು ಡಿಎಂಕೆಯನ್ನು ಓಲೈಸುತ್ತಿದೆ. ಆದರೆ ಈ ಮಸೂದೆಯ ನಿಜವಾದ ಉದ್ದೇಶದ ಬಗ್ಗೆ ಎನ್‌ಸಿಪಿ(ಎಸ್‌ಪಿ) ಮತ್ತು ಡಿಎಂಕೆಗೆ ಸ್ಪಷ್ಟ ಮಾಹಿತಿಯಿದ್ದು, ಭವಿಷ್ಯದಲ್ಲಿಯೂ ಅವು ದೃಢವಾಗಿ ನಿಲ್ಲುವ ನಿರೀಕ್ಷೆಯಿದೆ ಎಂದಿದ್ದಾರೆ.
ಅಸ್ತಿತ್ವದಲ್ಲಿರುವ ಸೂತ್ರದ ಅಡಿಯಲ್ಲಿ ಗಡಿ ನಿರ್ಣಯವು, ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಮತ್ತು ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಿದ ರಾಜ್ಯಗಳಿಗೆ ಅನ್ಯಾಯವಾಗಿ ಅನಾನುಕೂಲವನ್ನುಂಟು ಮಾಡುತ್ತದೆ. ಒಂದು ವೇಳೆ ಈ ಪ್ರಾದೇಶಿಕ ಪಕ್ಷಗಳು ವಿಫಲವಾದ ಮಸೂದೆಯ ಹೊಸ ಆವೃತ್ತಿಗೆ ಯಾವುದೇ ಬೆಂಬಲ ನೀಡಿದ್ರೆ, ಅವರು ಸ್ವಂತ ಆತ್ಮಸಾಕ್ಷಿಗೆ ಮಾಡುವ ದ್ರೋಹವಾಗುತ್ತದೆ ಎಂದು ತಿಳಿಸಿದ್ದಾರೆ.
ಜುಲೈ 20ರಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವು ಸಂವಿಧಾನ(131 ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. ಪ್ರಸ್ತಾವಿತ ಶಾಸನವು ಲೋಕಸಭೆಯ ಬಲವನ್ನು 850 ಸ್ಥಾನಗಳಿಗೆ ಹೆಚ್ಚಿಸಲು ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net