ಪಕ್ಷಿಗಳು ತಮ್ಮ ಗೂಡುಗಳಲ್ಲಿ ಹಾವಿನ ಚರ್ಮವನ್ನು ಇಡುವುದರ ಹಿಂದಿನ ಪ್ರಮುಖ ಕಾರಣ ಏನೆಂದರೆ, ಅವುಗಳು 'ಸುರಕ್ಷತೆ'. ಗುಬ್ಬಚ್ಚಿಗಳು, ಫ್ಲೈಕ್ಯಾಚರ್‌ಗಳು ಮತ್ತು ಬ್ಲೂಬರ್ಡ್ಸ್‌ಗಳಂತಹ ಸಣ್ಣ ಸಣ್ಣ ಹಕ್ಕಿಗಳು ಮರಗಳ ಮೇಲೆ ಅಥವಾ ಸಣ್ಣ ಸಂದುಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ, ಆದರೆ ಅಳಿಲುಗಳು, ಕಾಗೆಗಳು ಮತ್ತು ಇತರ ದೊಡ್ಡ ಪಕ್ಷಿಗಳು ಈ ಗೂಡುಗಳ ಮೇಲೆ ದಾಳಿ ಮಾಡಿ ಮೊಟ್ಟೆಗಳನ್ನು ಹಾಗೂ ಮರಿಗಳನ್ನು ತಿಂದುಹಾಕುತ್ತವೆ. ಈ ಅಪಾಯದಿಂದ ಬಚ್ಚಾವಾಗಲು ಹಕ್ಕಿಗಳು ತಮ್ಮ ಗೂಡಿನ ಒಳಗೆ ಅಥವಾ ಹೊರಗೆ ಹಾವಿನ ಚರ್ಮವನ್ನು ತಂದಿಡುತ್ತವೆ. ಗೂಡಿನ ಹತ್ತಿರ ಹಾವು ಇದೆ ಎಂದು ಭಾವಿಸಿ, ಮರಿಗಳನ್ನು ತಿನ್ನಲು ಬರುವ ವೈರಿಗಳು ಆ ಕಡೆ ಸುಳಿಯಲೂ ಧೈರ್ಯ ಮಾಡುವುದಿಲ್ಲ ಎಂಬುದು ಪಕ್ಷಿಗಳ ಈ ಅದ್ಭುತ ತಂತ್ರದ ಹಿಂದಿರುವ ರಹಸ್ಯವಾಗಿದೆ.