ವಿಮೆ ಕ್ಷೇತ್ರದಲ್ಲಿ ಶೇ.100 ಎಫ್​ಡಿಐ; ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ

ಎಫ್​ಡಿಐ
ಎಫ್​ಡಿಐ
Published on
ನವದೆಹಲಿ: ವಿಮಾ ಕ್ಷೇತ್ರದಲ್ಲಿ ನೇರ ವಿದೇಶಿ ಹೂಡಿಕೆಯನ್ನು ಶೇ. ನೂರಕ್ಕೆ ಏರಿಸುವ ಮಸೂದೆಯನ್ನು ಡಿ. 1ರಿಂದ 19ರವರೆಗೆ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಉದ್ದೇಶಿಸಿದೆ.
ಅಧಿವೇಶನಕ್ಕಾಗಿ ಸಿದ್ಧಪಡಿಸಲಾಗಿರುವ ಒಟ್ಟು 10 ಮಸೂದೆಗಳ ಪಟ್ಟಿಯಲ್ಲಿ ವಿಮಾ ಕ್ಷೇತ್ರದ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದ ‘ವಿಮಾ ಕಾಯ್ದೆಗಳ (ತಿದ್ದುಪಡಿ) ಮಸೂದೆ 2025’ ಕೂಡ ಇದೆ. 1938ರ ವಿಮಾ ಕಾಯ್ದೆ, 1956ರ ಜೀವ ವಿಮಾ ನಿಗಮ ಕಾಯ್ದೆ ಮತ್ತು 1999ರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ವಿವಿಧ ನಿಬಂಧನೆಗಳಿಗೆ ತಿದ್ದುಪಡಿ ಮಾಡಲಾಗುತ್ತಿದೆ. ಈಗ ಈ ಕ್ಷೇತ್ರದಲ್ಲಿ ಎಫ್ಡಿಐಗೆ ಶೇ. 74ರ ಮಿತಿ ಇದೆ. ಈ ವರ್ಷದ ಬಜೆಟ್ ಭಾಷಣದಲ್ಲಿ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸುಧಾರಣೆಗಳ ಭಾಗವಾಗಿ ವಿಮಾ ಕ್ಷೇತ್ರದ ವಿದೇಶಿ ಹೂಡಿಕೆ ಮಿತಿಯನ್ನು ಶೇ. ನೂರಕ್ಕೆ ಏರಿಸುವುದಾಗಿ ಹೇಳಿದ್ದರು.
ಇದುವರೆಗೆ ವಿಮಾ ಕ್ಷೇತ್ರವು ನೇರ ವಿದೇಶಿ ಹೂಡಿಕೆ ಮೂಲಕ 82,000 ಕೋಟಿ ರೂ.ಗಳನ್ನು ಆಕರ್ಷಿಸಿದೆ. ಜೀವ ವಿಮಾ ನಿಗಮ ಕಾಯ್ದೆಗೆ ಪ್ರಸ್ತಾಪಿಸಿರುವ ತಿದ್ದುಪಡಿಗಳು ಶಾಖೆ ವಿಸ್ತರಣೆ ಮತ್ತು ನೇಮಕಾತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದರ ಮಂಡಳಿಗೆ ಅಧಿಕಾರ ನೀಡುತ್ತವೆ. ಇದೇ ವೇಳೆ, ಆರ್ಥಿಕ ಸಚಿವಾಲಯ 2025ರ ಷೇರುಮಾರುಕಟ್ಟೆ ಸಂಹಿತೆ ಮಸೂದೆಯನ್ನು (ಎಸ್ಎಂಸಿ) ಮಂಡಿಸಲಿದೆ. ಇದು 1992ರ ಸೆಬಿ ಕಾಯ್ದೆ, 1996ರ ಠೇವಣಿ ಕಾಯ್ದೆ ಮತ್ತು 1956ರ ಷೇರು ಒಪ್ಪಂದ (ನಿಯಂತ್ರಣ) ಕಾಯ್ದೆಯ ನಿಬಂಧನೆಗಳನ್ನು ಒಂದೇ ಸಂಹಿತೆಯಲ್ಲಿ ಅಳವಡಿಸುವ ಉದ್ದೇಶ ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net