ಎರಡೂ ದೇಶಗಳ ಬಾಂಧವ್ಯ ಮತ್ತಷ್ಟು ಎತ್ತರ: ಕರೆ ಮಾಡಿ ಬ್ರಿಟನ್ ನೂತನ ಪ್ರಧಾನಿಗೆ ಅಭಿನಂದಿಸಿದ ಪ್ರಧಾನಿ ಮೋದಿ | PM Modi
ಬ್ರಿಟನ್ ನೂತನ ಪ್ರಧಾನಿ ಆಂಡಿ ಬರ್ನ್‌ಹ್ಯಾಮ್ ಮತ್ತು ಪ್ರಧಾನಿ ಮೋದಿ
Published on:
Copied
Follow Us
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi) ಇಂದು(ಜು. 31) ಬ್ರಿಟನ್ ನೂತನ ಪ್ರಧಾನಿ ಆಂಡಿ ಬರ್ನ್‌ಹ್ಯಾಮ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದು, ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದಾಗಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬ್ರಿಟನ್ ನೂತನ ಪ್ರಧಾನಿ ಆಂಡಿ ಬರ್ನ್‌ಹ್ಯಾಮ್ ಅವರು ಉನ್ನತ ಹುದ್ದೆಯನ್ನು ವಹಿಸಿಕೊಂಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುವುದಲ್ಲದೆ, ಅವರ ಅಧಿಕಾರಾವಧಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದೇನೆ.
ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ, ಭದ್ರತೆ, ಸ್ವಚ್ಛ ಇಂಧನ, ಶಿಕ್ಷಣ ಮತ್ತು ಜನರ ನಡುವಿನ ಬಾಂಧವ್ಯದಂತಹ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಹಾಗೂ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಉಭಯ ದೇಶಗಳ ಜನರ ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ, ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು ಒದಗಿಸುವ ವ್ಯಾಪಾರ ಹಾಗೂ ಹೂಡಿಕೆಯ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಾವು ನಿಕಟವಾಗಿ ಸಹಕರಿಸಲಿದ್ದೇವೆ ಎಂದಿದ್ದಾರೆ.
ಇನ್ನೂ ಬ್ರಿಟನ್ ಸಹ ಪ್ರಕಟಣೆ ಬಿಡುಗಡೆ ಮಾಡಿದ್ದು, ಯುಕೆ-ಭಾರತ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ತಮ್ಮ ಆಕಾಂಕ್ಷೆಗಳನ್ನು ಉಭಯ ಪ್ರಧಾನ ಮಂತ್ರಿಗಳು ವ್ಯಕ್ತಪಡಿಸಿದ್ದು, ಇದರಲ್ಲಿ 'ಯುಕೆ-ಭಾರತ ವಿಷನ್ 2035' ಚೌಕಟ್ಟು ಮತ್ತು ಜನರ ನಡುವಿನ ಬಲವಾದ ಸಂಪರ್ಕಗಳು ಸೇರಿವೆ ಎಂದು ತಿಳಿಸಿದೆ (ಏಜೆನ್ಸೀಸ್).