ಬೀದಿ ದೀಪಗಳಿಲ್ಲದ ರಸ್ತೆ ಗುಂಡಿಯಲ್ಲಿ ಬಿದ್ದ ಬೈಕ್​ ಸವಾರ: 12 ಗಂಟೆಗಳ ಕಾಲ ಒದ್ದಾಡಿ ಪ್ರಾಣಬಿಟ್ಟ ಯುವಕ | Biker

ಮೃತ ಬೈಕ್​ ಸವಾರ ಧೀರೇಂದ್ರ ಕುಮಾರ್
ಮೃತ ಬೈಕ್​ ಸವಾರ ಧೀರೇಂದ್ರ ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಬಳಿಕ ಈಗ ಕಾನ್ಪರ್​ನಲ್ಲಿ ರಸ್ತೆ ಗುಂಡಿಗೆ ಯುವಕ ಬಲಿ
  • ರಾತ್ರಿಯಿಡಿ ಗುಂಡಿಯಲ್ಲಿ ಒದ್ದಾಡಿ ಪ್ರಾಣಬಿಟ್ಟ ಬೈಕರ್​
  • ಬೈಕ್​ ಹತ್ತಿದರೆ ಮನೆ ಮುಟ್ಟುವ ನಂಬಿಕೆಯಿಲ್ಲ ಎನ್ನುತ್ತಿರುವ ಸಾರ್ವಜನಿಕರು
ಕಾನ್ಪುರ: ನಾವು ರಸ್ತೆಯಲ್ಲಿ ಸಂಚರಿಸುವಾಗ ಮನೆಗೆ ಸುರಕ್ಷಿತವಾಗಿ ಮರಳುತ್ತೇವೆ ಎಂಬ ನಂಬಿಕೆ ಇರುತ್ತದೆ. ಆದರೆ ಉತ್ತರ ಪ್ರದೇಶ ಮತ್ತು ದೆಹಲಿಯ ಈ ಇತ್ತೀಚಿನ ಘಟನೆಗಳನ್ನು ನೋಡಿದರೆ, ರಸ್ತೆ ಬದಿಯ ಗುಂಡಿಗಳು ಸಾಮಾನ್ಯ ಗುಂಡಿಗಳಲ್ಲ, ಬದಲಿಗೆ ಮೃತ್ಯುಕೂಪಗಳಂತೆ ಕಾಣುತ್ತಿವೆ. ದೆಹಲಿಯ ನಂತರ ಈದೀಗ ಕಾನ್ಪುರದಲ್ಲಿ ಯುವಕನೊಬ್ಬ ರಸ್ತೆಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ವರದಿಯಾಗಿದೆ.

12 ಗಂಟೆಗಳ ಕಾಲ ನರಕಯಾತನೆ!

ಕಾನ್ಪುರ ಗ್ರಾಮೀಣ ಭಾಗದ ಭವಾನಿಪುರ ನಿವಾಸಿ, ಧೀರೇಂದ್ರ ಕುಮಾರ್ (25) ಮೃತ ದುರ್ಧೈವಿಯಾಗಿದ್ದು, ಮಂಗಳವಾರ ತನ್ನ ವೆಲ್ಡರ್ ಕೆಲಸವನ್ನು ಮುಗಿಸಿ ಸಂಜೆ 6 ಗಂಟೆ ಸುಮಾರಿಗೆ ತನ್ನ ಬೈಕ್‌ (Biker) ನಲ್ಲಿ ಮನೆಗೆ ಮರಳಲಿದ್ದ. ಆದರೆ ಆತ ಸಂಚರಿಸುತ್ತಿದ್ದ ದಾರಿಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ಸುತ್ತಲೂ ಕತ್ತಲೆ ಆವರಿಸಿತ್ತು. ಅಚಾನಕ್ಕಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಗುಂಡಿಗೆ ಬಿದ್ದಿತು.
ಬೈಕ್ ಸಮೇತ ಮಣ್ಣಿನಲ್ಲಿ ಹೂತುಹೋದ ಧೀರೇಂದ್ರ ಎಷ್ಟೇ ಪ್ರಯತ್ನಿಸಿದರೂ ಹೊರಬರಲಾಗಲಿಲ್ಲ. ಇಡೀ ರಾತ್ರಿ ಚಳಿಯಲ್ಲಿ, ಕೆಸರಿನ ನಡುವೆ ಸಿಲುಕಿ ಧೀರೇಂದ್ರ ಕಿರುಚಾಡಿದ್ದಾರೆ. ಆದರೆ, ನಿರ್ಜನ ಪ್ರದೇಶವಾದ್ದರಿಂದ ಯಾರೊಬ್ಬರಿಗೂ ಅವರ ಚೀರಾಟ ಕೇಳಿಸಲಿಲ್ಲ. ಬುಧವಾರ ಬೆಳಿಗ್ಗೆ ರೈತರು ನೋಡುವ ಹೊತ್ತಿಗೆ ಧೀರೇಂದ್ರ ಸಾವಿನ ಅಂಚಿನಲ್ಲಿದ್ದರು. ಗ್ರಾಮಸ್ಥರು ಬೆಂಕಿ ಹಚ್ಚಿ ಅವರನ್ನು ಬೆಚ್ಚಗಾಗಿಸಲು ಪ್ರಯತ್ನಿಸಿ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆ ಯುವಕ ಕೊನೆಯುಸಿರೆಳಿದಿದ್ದಾನೆ.
ರಾಷ್ಟ್ರ ರಾಜಧಾನಿಯಲ್ಲೂ ಇದೇ ಕಥೆ!
ಈ ಸಾವು ಕೇವಲ ಒಂದು ಅಪಘಾತವಲ್ಲ, ಇದು ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದ್ದು, ಕಳೆದ ಒಂದು ತಿಂಗಳಲ್ಲೇ ಇಂತಹ ಹಲವಾರು ಘಟನೆಗಳು ನಡೆದಿವೆ. ಫೆಬ್ರವರಿ 5 ರಂದು ದೆಹಲಿಯಲ್ಲಿ ಕಮಲ್ ಧಯಾನಿ (25) ಎಂಬ ಯುವಕ ಜಲ ಮಂಡಳಿ ಅಗೆದಿದ್ದ 15 ಅಡಿ ಆಳದ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದು ದೇಶಾದ್ಯಂತ ಸದ್ದು ಮಾಡಿತ್ತು.

ಪ್ರಶ್ನೆ ಕೇಳುವವರು ಯಾರು?

ಅಗೆದ ಗುಂಡಿಗಳನ್ನು ಮುಚ್ಚದೆ ಬಿಡುವುದು, ಬೀದಿ ದೀಪಗಳಿಲ್ಲದ ರಸ್ತೆಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಯಾವುದೇ ಎಚ್ಚರಿಕೆ ಫಲಕಗಳನ್ನು ಹಾಕದಿರುವುದು ಇಂದು ಸಾಮಾನ್ಯ ಯುವಕರ ಪ್ರಾಣಕ್ಕೆ ಕಂಟಕವಾಗುತ್ತಿದೆ. ಧೀರೇಂದ್ರ ಅವರ ಸಹೋದರ ಬ್ರಜೇಂದ್ರ ಹೇಳುವಂತೆ, ಮನೆಗೆ ಬರುತ್ತೇನೆ ಎಂದು ಫೋನ್ ಮಾಡಿದ್ದ ತಮ್ಮ ಮರಳಲೇ ಇಲ್ಲ ಎಂಬ ಮಾತು ಕೇಳಿಸಿಕೊಂಡಾಗ ಕರಳು ಚುರ್ರ್ ಎನ್ನುತ್ತದೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಆದರೆ ಹೋಗಿರುವ ಜೀವ ಮರಳಿ ಬರುವುದಿಲ್ಲ. ಇನ್ನೆಷ್ಟು ಜೀವಗಳು ಈ ರೀತಿ ಹಳ್ಳ ಹಿಡಿಯಬೇಕು ಎಂಬುದು ಸಾರ್ವಜನಿಕರ ಆಕ್ರೋಶದ ಪ್ರಶ್ನೆಯಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net