ಪಾಟ್ನಾ: ಕಳೆದ ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಹಾರದ ದೀರ್ಘಾವಧಿ ಸಿಎಂ ನಿತೀಶ್ ಕುಮಾರ್(CM Nitish Kumar) ಇಂದು(ಮಾ. 30) ಬಿಹಾರ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಸಿಎಂ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಸಿಎಣ ನಿತೀಶ್ ಕುಮಾರ್ ಅವರ ರಾಜೀನಾಮೆ ಪತ್ರವನ್ನು ಜೆಡಿಯು ಎಂಎಲ್‌ಸಿ ಸಂಜಯ್ ಗಾಂಧಿ ಅವರು ವಿಧಾನ ಪರಿಷತ್ತಿಗೆ ಸಲ್ಲಿಸಿದ್ದು, ಅದನ್ನು ಅಂಗೀಕರಿಸಿದ್ದಾಗಿ ವಿಧಾನಪರಿಷತ್ ಸಭಾಪತಿ ಅವಧೇಶ್ ನಾರಾಯಣ್ ಸಿಂಗ್ ಖಚಿತ ಪಡಿಸಿದ್ದಾರೆ.
ಮಾರ್ಚ್ 16ರಂದು ರಾಜ್ಯಸಭೆಗೆ ಸಿಎಂ ನಿತೀಶ್ ಕುಮಾರ್ ಆಯ್ಕೆಯಾಗಿರುವ ಹಿನ್ನೆಲೆ ಸಂವಿಧಾನದ ಪ್ರಕಾರ, ರಾಜ್ಯ ವಿಧಾನಸಭೆಯ ಸದಸ್ಯರು ಸಂಸತ್ತಿಗೆ ಆಯ್ಕೆಯಾದಾಗ, ಚುನಾವಣೆ ನಡೆದ 14 ದಿನಗಳ ಒಳಗೆ ರಾಜೀನಾಮೆ ನೀಡಬೇಕು ಎನ್ನಲಾಗಿದೆ.
ಇನ್ನೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿತೀಶ್ ಕುಮಾರ್, ಆರು ತಿಂಗಳೊಳಗೆ ಸಿಎಂ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ರಾಜ್ಯ ವಿಧಾನಸಭೆಯ ಯಾವುದೇ ಸದನದ ಸದಸ್ಯರಾಗಿರದಿದ್ದರೇ ಯಾವುದೇ ಅಧಿಕಾರದ ಹುದ್ದೆಯನ್ನು ಹೊಂದುವಂತಿಲ್ಲ. ಈ ಹಿನ್ನೆಲೆ ಶೀಘ್ರದಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಬಹುದು.
ಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈಪೋಟಿ
ಸಿಎಂ ನಿತೀಶ್ ಕುಮಾರ್ ಇಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೆಲವೇ ದಿನಗಳಲ್ಲಿ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾಗಬಹುದು. ಈ ಹಿನ್ನೆಲೆ ಏತನ್ಮಧ್ಯೆ, ಬಿಹಾರದಲ್ಲಿ ಹೊಸ ಮುಖ್ಯಮಂತ್ರಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತನ್ನದೇ ಆದ ಮುಖ್ಯಮಂತ್ರಿಯನ್ನು ಹೊಂದುವ ಸೂಚನಯಿದ್ದು, ಸಿಎಂ ಹುದ್ದೆಗೆ ತೀರ್ವ ಪೈಪೋಟಿ ಆರಂಭವಾಗಿದೆ ಎಂದು ವರದಿಯಾಗಿದೆ. ಆರ್ಎಸ್ಎಸ್ ಹಿನ್ನಲೆಯಿಂದ ಬಂದವರು ಸಿಎಂ ಹುದ್ದೆಗೇರುವ ಸಾಧ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).