25 ಸಾವಿರಕ್ಕೆ ಸಿಗ್ತಾರಂತೆ ಬಿಹಾರದ ಹುಡುಗಿಯರು...ಮಹಿಳಾ ಕಲ್ಯಾಣ ಸಚಿವೆಯ ಪತಿಯಿಂದ ವಿವಾದಾತ್ಮಕ ಹೇಳಿಕೆ | Girdhari Lal Sahu

 Girdhari Lal Sahu | ಗಿರ್ಧಾರಿ ಲಾಲು ಸಾಹು
Girdhari Lal Sahu | ಗಿರ್ಧಾರಿ ಲಾಲು ಸಾಹು
Published on
Girdhari Lal Sahu: ಬಿಹಾರದ ಹುಡುಗಿಯರು ಕೇವಲ 20,000 ರಿಂದ 25,000 ರೂ.ಗಳಿಗೆ ಮದುವೆಗೆ ಲಭ್ಯವಿದ್ದಾರೆ ಎಂದು ಉತ್ತರಾಖಂಡ ಸಚಿವರೊಬ್ಬರ ಪತಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಬಿಹಾರ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಉತ್ತರಾಖಂಡ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಪತಿ ಗಿರ್ಧಾರಿ ಲಾಲು ಸಾಹು ಯುವಕರ ಗುಂಪಿನೊಂದಿಗೆ ಮಾತನಾಡುತ್ತಾ ಅವರ ವೈವಾಹಿಕ ಸ್ಥಿತಿಯ ಬಗ್ಗೆ ಕೇಳುತ್ತಿರುವುದು ಕಂಡುಬಂದಿದೆ.
ನೀವು ವೃದ್ಧಾಪ್ಯದಲ್ಲಿ ಮದುವೆಯಾಗುತ್ತೀರಾ? ನೀವು ಮದುವೆಯಾಗಲು ಸಾಧ್ಯವಾಗದಿದ್ದರೆ, ನಾವು ನಿಮಗಾಗಿ ಬಿಹಾರದಿಂದ ಒಬ್ಬ ಹುಡುಗಿಯನ್ನು ತರುತ್ತೇವೆ, ನೀವು ಅಲ್ಲಿ 20,000 ರಿಂದ 25,000 ರೂ.ಗೆ ಒಬ್ಬಳನ್ನು ಪಡೆಯಬಹುದು ಎಂದು ಸಾಹು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಬರುತ್ತಿದೆ. ಲಾಲು ಸಾಹು ಹೇಳಿಕೆ ಉತ್ತರಾಖಂಡ ಮತ್ತು ಬಿಹಾರದಲ್ಲಿ ದೊಡ್ಡಮಟದ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ವಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಸ್ವತಃ ಸಾಹು ಪತ್ನಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವುದರಿಂದ ಇದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಜ್ಯೋತಿ ರೌಟೇಲಾ ಹೇಳಿದ್ದಾರೆ.
ಇದು ಮಹಿಳೆಯರು ಮತ್ತು ಹುಡುಗಿಯರ ಘನತೆಯ ಮೇಲಿನ ದಾಳಿ, ಈ ರೀತಿಯ ಚಿಂತನೆಯು ಮಾನವ ಕಳ್ಳಸಾಗಣೆ, ಬಾಲ್ಯವಿವಾಹ ಮತ್ತು ಮಹಿಳೆಯರ ಶೋಷಣೆಯಂತಹ ಸಾಮಾಜಿಕ ಅನಿಷ್ಟಗಳನ್ನು ಉತ್ತೇಜಿಸುತ್ತದೆ ಎಂದರು. ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, 10,000 ರೂ.ಗೆ ಮತಗಳನ್ನು ಖರೀದಿಸಿದ್ದಾರೆ ಎಂಬ ಆರೋಪದ ಬಳಿಕ, ಬಿಜೆಪಿ ನಾಯಕರು ಈಗ ಬಿಹಾರದಿಂದ ಹುಡುಗಿಯರನ್ನು ಕರೆತರುವ ಬಗ್ಗೆ ಮಾತನಾಡುತ್ತಿದ್ದಾರೆ, ಇದು ಮಹಿಳೆಯರ ಬಗೆಗಿನ ವಿಷಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ನಡುವೆ ಬಿಜೆಪಿಯ ರಾಜ್ಯ ಘಟಕವು ಈ ಹೇಳಿಕೆಯನ್ನು ಖಂಡಿಸಿದ್ದು, ಸಾಹು ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡು, ಅವರಿಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಬಿಹಾರ ರಾಷ್ಟ್ರೀಯ ಮಹಿಳಾ ಆಯೋಗವು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಪತ್ರ ಬರೆದಿದ್ದು. ಸಾಹು ಹೇಳಿಕೆಗೆ ಸಂಬಂಧಿಸಿದಂತೆ ನೋಟಿಸ್ ನೀಡುವುದಾಗಿಯೂ ಹೇಳಿದೆ. ಅವರ ಹೇಳಿಕೆಗಳು ಅತ್ಯಂತ ಖಂಡನೀಯ. ಇದು ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ. ಸಾಹು ಪತ್ನಿ ಈಗಾಗಲೇ ಉತ್ತರಾಖಂಡ ಸರ್ಕಾರದಲ್ಲಿ ಸಚಿವರಾಗಿರುವಾಗ ಅವರು ಮಹಿಳೆಯರ ಬಗ್ಗೆ ಅಂತಹ ಹೇಳಿಕೆಯನ್ನು ಹೇಗೆ ನೀಡಲು ಸಾಧ್ಯ? ಎಂದು ಬಿಎಸ್‌ಡಬ್ಲ್ಯೂಸಿ ಅಧ್ಯಕ್ಷೆ ಅಪ್ಸರಾ ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ವಿವಾದಗಳಲ್ಲಿ ಸಿಲುಕಿರುವ ಸಾಹು, ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿತರಾಗಿದ್ದರು. 2015 ರಲ್ಲಿ ಸಾಹು ಎರಡನೇ ಪತ್ನಿಗೆ ಕಸಿ ಮಾಡಲು ತನ್ನ ಮೂತ್ರಪಿಂಡವನ್ನು ಮೋಸದಿಂದ ತೆಗೆದುಕೊಂಡಿದ್ದಾರೆ ಎಂದು ಈ ಹಿಂದಿನ ಮನೆಕೆಲಸದಾಕೆಯೊಬ್ಬರು ಆರೋಪಿಸಿದ್ದಾರೆ. ನರೇಶ್ ಚಂದ್ರ ಗಂಗ್ವಾರ್ ಎಂಬ ಮಹಿಳೆಯ ಸಹಾಯದ ನೆಪದಲ್ಲಿ ಶ್ರೀಲಂಕಾಕ್ಕೆ ಕರೆದೊಯ್ಯಲಾಯಿತು ಮತ್ತು ಕೊಲಂಬೊದ ಆಸ್ಪತ್ರೆಯಲ್ಲಿ ತಮ್ಮ ಮೂತ್ರಪಿಂಡವನ್ನು ತೆಗೆದುಹಾಕಲಾಯಿತು ಎಂದು ಹೇಳಿಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net