ಬಿಹಾರ ರಾಜಕೀಯ; ಜೆಡಿಯು ಸೇರ್ಪಡೆಯಾದ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ | Nishant Kumar

ನಿಶಾಂತ್ ಕುಮಾರ್ ಜೆಡಿಯು ಸೇರ್ಪಡೆಯಾಗಿರುವುದು.
ನಿಶಾಂತ್ ಕುಮಾರ್ ಜೆಡಿಯು ಸೇರ್ಪಡೆಯಾಗಿರುವುದು.
Published on
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ, ಇಂದು(ಮಾ. 08) ಅವರ ಪುತ್ರ ನಿಶಾಂತ್ ಕುಮಾರ್(Nishant kumar) ಜೆಡಿಯು ಪಕ್ಷಕ್ಕೆ ಔಪಚಾರಿಕವಾಗಿ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ನಿಶಾಂತ್ ಬಿಹಾರದಲ್ಲಿ ಜೆಡಿಯುನ ಉತ್ತರಾಧಿಕಾರಿಯಾಗಲಿದ್ದಾರೆ ಎಂದೇ ಬಿಂಬಿತವಾಗುತ್ತಿದ್ದಾರೆ.
ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿರುವ ನಿಶಾಂತ್, ತಂದೆ ನಿತೀಶ್ ಕುಮಾರ್ ಸುಧೀರ್ಘ 20 ವರ್ಷಕ್ಕೂ ಹೆಚ್ಚು ಕಾಲ ಬಿಹಾರ ಮುಖ್ಯಮಂತ್ರಿಯಾಗಿ, ಆಡಳಿತ ನಡೆಸುವಾಗಲು ರಾಜಕೀಯದಿಂದ ದೂರ ಉಳಿದಿದ್ದರು. ಈಗ ತಂದೆ ರಾಜ್ಯಸಭೆಗೆ ಪ್ರವೇಶ ಮಾಡ್ತಿರುವ ಈ ಹೊತ್ತಿನಲ್ಲಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇನ್ನೂ ಜೆಡಿಯು ಹಿರಿಯ ನಾಯಕರು ನಿಶಾಂತ್ ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ.
ಜೆಡಿಯು ಮುಂದಿನ ಭವಿಷ್ಯ ಮತ್ತು ವಿಭಜನೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ನಿತೀಶ್ ಕುಟುಂಬದಲ್ಲೇ ಪಕ್ಷದ ಅಧಿಕಾರವನ್ನಿಡುವ ಬಗ್ಗೆ ಜೆಡಿಯು ನಾಯಕರು ನಿಶಾಂತ್​ಗೆ ಮುಂದಿನ ನಾಯಕತ್ವ ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಕೇಂದ್ರ ಸಚಿವ ಲಲ್ಲನ್ ಸಿಂಗ್, ಬಿಹಾರ ಸಚಿವರಾದ ಅಶೋಕ್ ಚೌಧರಿ ಮತ್ತು ವಿಜಯ್ ಚೌಧರಿ ಮತ್ತು ಸಂಜಯ್ ಕುಮಾರ್ ಝಾ ಹೆಸರುಗಳು ಕೂಡ ಚಾಲ್ತಿಯಲ್ಲಿವೆ.
ಇನ್ನೂ ನಿತೀಶ್ ಕುಮಾರ್ ಮಾ. 16ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಆಯ್ಕೆಯಾಗಲಿದ್ದು, ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಂದಿನ ಬಿಜೆಪಿ-ಜೆಡಿಯು ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ನಾಯಕರೊಬ್ಬರು ಸಿಎಂ ಆಗುವ ಸಾಧ್ಯತೆ ಇದ್ದು, ನಿಶಾಂತ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೆಡಿಯು ಸೇರ್ಪಡೆ ಬಳಿಕ ಮಾತನಾಡಿರುವ ನಿಶಾಂತ್, ಇಂದಿನಿಂದ ನಾನು ಪಕ್ಷದ ಸಕ್ರಿಯ ಸದಸ್ಯನಾಗಿ ಪಕ್ಷವನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ತಂದೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದಾರೆ. ಇದು ಅವರ ವೈಯಕ್ತಿಕ ನಿರ್ಧಾರ. ಮತ್ತು ನಾನು ಅದನ್ನು ಸ್ವೀಕರಿಸುತ್ತೇನೆ. ನಾವು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಪಕ್ಷ ಮತ್ತು ಜನರ ನಂಬಿಕೆಗೆ ತಕ್ಕಂತೆ ಬದುಕಲು ಮತ್ತು ಸಂಘಟನೆಯನ್ನು ಬಲಪಡಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net