Jeevika Didis | ಜೀವಿಕಾ ದೀದಿಗಳಿಗೆ ಹಣ ವರ್ಗಾಯಿಸಲು ಡೇಟ್​ ಫಿಕ್ಸ್; ಇನ್ಮುಂದೆ ಬಿಹಾರದ ಮಹಿಳೆಯರು ಸರ್ಕಾರಿ ಬಸ್​ ಓಡಿಸಬಹುದು!

Jeevika Didis | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Jeevika Didis | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Published on
ಪಟನಾ: ಬಿಹಾರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲೊಂದಾದ ಜೀವಿಕಾ ದೀದಿ ಯೋಜನೆಯ ಫಲಾನುಭವಿಗಳಿಗೆ ಇದೇ ಶುಕ್ರವಾರ (ನ.27) 10,000 ರೂ.ಗಳನ್ನು ವರ್ಗಾಯಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್, ಡಿಸೆಂಬರ್ 14 ರೊಳಗೆ ಎಲ್ಲಾ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ವಿತರಿಸಲಾಗುವುದು ಎಂದರು.
ಅರ್ಹ ಜೀವಿಕಾ ದೀದಿಗಳು ಈ ಯೋಜನೆಯಡಿಯಲ್ಲಿ ಹಣದ ನೆರವು ಪಡೆಯಲಿದ್ದು, ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚುವರಿ ಉಪಕ್ರಮಗಳನ್ನು ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು. ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಯೋಜನೆಯನ್ನು ಘೋಷಿಸಿದ್ದರು. ಗ್ರಾಮೀಣ ಪ್ರದೇಶದ 9.50 ಲಕ್ಷ ಮಹಿಳೆಯರು ಮತ್ತು ನಗರ ಪ್ರದೇಶದ 50,000 ಮಹಿಳೆಯರ ಖಾತೆಗಳಿಗೆ ಮುಖ್ಯಮಂತ್ರಿ ಹಣ ಜಮಾ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಏನಿದು ಜೀವಿಕಾ ದೀದಿ..?

ಬಿಹಾರದಲ್ಲಿ ಜೀವಿಕಾ ದೀದಿ ಎಂದರೆ ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉನ್ನತೀಕರಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಯೋಜನೆಯಾಗಿದೆ.
ಸಾರಿಗೆ ಸಚಿವರು ಆಗಿರುವ ಶ್ರವಣ್​ ಕುಮಾರ್​, ತಮ್ಮ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದು, ಚಾಲಕರು ಮತ್ತು ಕಂಡಕ್ಟರ್‌ಗಳಾಗಿ ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ಜೀವಿಕಾ ದೀದಿಗಳಿಂದ ಡಿಸೆಂಬರ್ 15 ರವರೆಗೆ ಅರ್ಜಿಗಳು ಕರೆಯಲಾಗಿದೆ ಎಂದು ಹೇಳಿದರು. ಆಯ್ಕೆಯಾಗುವ ಮಹಿಳಾ ಅಭ್ಯರ್ಥಿಗಳು ಪಟನಾ ಮತ್ತು ಔರಂಗಾಬಾದ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಡ್ರೈವಿಂಗ್ ಟ್ರೈನಿಂಗ್ ಅಂಡ್ ರಿಸರ್ಚ್​​ನಲ್ಲಿ ಹೆವಿ ಮೋಟಾರ್ ವೆಹಿಕಲ್ ತರಬೇತಿಯನ್ನು ಪಡೆಯುತ್ತಾರೆ, ತರಬೇತಿ ಪೂರ್ಣಗೊಂಡ ಬಳಿಕ, ಬಿಹಾರ ರಾಜ್ಯ ರಸ್ತೆ ಸಾರಿಗೆ ನಿಗಮ, ಮಹಿಳೆಯರಿಗೆ ಗುಲಾಬಿ ಬಸ್ಸುಗಳನ್ನು ಓಡಿಸಲು ನೇಮಿಸಲಾಗುತ್ತದೆ ಎಂದು ತಿಳಿಸಿದರು.
ಈ ಯೋಜನೆಯಡಿಯಲ್ಲಿ, ಬಿಹಾರದ 100 ಗುಲಾಬಿ ಬಸ್‌ಗಳನ್ನು ನಿರ್ವಹಿಸಲು 200 ಮಹಿಳೆಯರಿಗೆ ಚಾಲಕರು ಮತ್ತು ಕಂಡಕ್ಟರ್‌ಗಳಾಗಿ ತರಬೇತಿ ನೀಡಲಾಗುವುದು, ಈ ಮಹತ್ವದ ಹೆಜ್ಜೆ ಮಹಿಳೆಯರನ್ನು ಸಬಲೀಕರಣಗೊಳಿಸುವುದಲ್ಲದೆ, ಜೀವಿಕಾ ದೀದೀಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ ಎಂದರು.
ಚಾಲಕ ಹುದ್ದೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆ 8 ನೇ ತರಗತಿಯಾಗಿದ್ದರೆ, ಕಂಡಕ್ಟರ್ ಹುದ್ದೆಗೆ ಅದು 10 ನೇ ತರಗತಿಯಾಗಿರುಬೇಕು ಎಂದು ಸಚಿವರು ತಿಳಿಸಿದ್ದು, ಇಲಾಖೆಯ ತರಬೇತಿ ಮುಗಿದ ಬಳಿಕ ಹೆವಿ ಮೋಟಾರ್ ವೆಹಿಕಲ್ ತರಬೇತಿ ಪರವಾನಗಿ ಪಡೆಯುವ ಅಭ್ಯರ್ಥಿಗಳನ್ನು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಂದದ ಆಧಾರದ ಮೇಲೆ ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net